Last Updated:
ನಟ ಧ್ರುವ ಸರ್ಜಾ ಬರ್ತ್ಡೇ ಸಮಯದಲ್ಲಿಯೇ ಹೊಸ ಸಿನಿಮಾ ಅನೌನ್ಸ್ ಆಗಿದೆ. ಭಾವಲೋಕದ ಪ್ರಯಾಣಕ್ಕೆ ಆ್ಯಕ್ಷನ್ ಪ್ರಿನ್ಸ್ ರೆಡಿಯಾಗಿದ್ದಾರೆ.
ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ. ಮಾಸ್, ಆ್ಯಕ್ಷನ್ ಸಿನಿಮಾಗಳಲ್ಲಿ ಧ್ರುವ ಸರ್ಜಾನ ನೋಡಿದ ಅಭಿಮಾನಿಗಳಿಗೆ ಅವರ ರೊಮ್ಯಾಂಟಿಕ್ ಸೈಡ್ನ ಹೊಸ ಲೋಕ ತೆರೆಯಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್ & ಫ್ಯಾಮಿಲಿ ಎಮೋಷನ್ಸ್ ಇರುವ ‘ಕೆಮಿಸ್ಟ್ರಿ’ ಚಿತ್ರವನ್ನು ಧ್ರುವ ಸರ್ಜಾ ಘೋಷಣೆ ಮಾಡಿದ್ದು ಇದರಲ್ಲಿ ನಾಯಕಿಯಾಗಿ ನಭಾ ನಟೇಶ್ ಇರಲಿದ್ದಾರೆ.
‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’ ಎಂಬ ಸುಂದರವಾದ ಟೈಟಲ್ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ (PMF) ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಅದ್ಧೂರಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲನ ಮೂಡಿಸಿದೆ.
ಚಿತ್ರದಲ್ಲಿ ಧ್ರುವ ಅವರ ರೊಮ್ಯಾನ್ಸ್, ಮಮತೆ ಹಾಗೂ ಭಾವನಾತ್ಮಕ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆಮಾಡಿದೆ. ಮಾಸ್ ಆಕ್ಷನ್ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಹೀರೋ ಆಗಿರುವ ಧ್ರುವ, ಈಗ ಕೌಟುಂಬಿಕ ಪ್ರೇಕ್ಷಕರು, ಮಹಿಳೆಯರು ಹಾಗೂ ಯುವ ಜೋಡಿಗಳ ಹೃದಯ ಗೆಲ್ಲಲು ಹೊರಟಿದ್ದಾರೆ.
ಕುಟುಂಬ ಸಮೇತ ಸಂಭ್ರಮಿಸುವ ಅದ್ಧೂರಿ ಸಿನಿಮಾ
ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಕನೆಕ್ಟ್ ಮಾಡಿಕೊಳ್ಳುವಂತಹ ಕೌಟುಂಬಿಕ ಬಾಂಧವ್ಯ ಮತ್ತು ಲವ್ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ. ಅಭಿಮಾನಿಗಳು ತಮ್ಮ ಇಡೀ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬಂದು ಆನಂದಿಸುವಂತಹ ಸಂಪೂರ್ಣ ಮನರಂಜನೆಯನ್ನು ಚಿತ್ರತಂಡ ಕಟ್ಟಿಕೊಡಲಿದೆ ಎನ್ನಲಾಗುತ್ತಿದೆ.
ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ಕನ್ನಡದ ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರೊಂದಿಗೆ ಕೈಜೋಡಿಸಿದೆ. ಈಗ ಧ್ರುವ ಸರ್ಜಾ ಜೊತೆ ದೊಡ್ಡ ಪ್ರಾಜೆಕ್ಟ್ಗೆ ಕೈಹಾಕಿದ್ದು, ಸ್ಯಾಂಡಲ್ವುಡ್ನಲ್ಲಿ ಗಟ್ಟಿಯಾಗಿ ಬೇರೂರುವ ಹಾಗೂ ವಿಭಿನ್ನ ಕಥೆಗಳನ್ನು ಕನ್ನಡಿಗರಿಗೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.














