Last Updated:
ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ವನ್ನು (ಮರಣೋತ್ತರವಾಗಿ) ನೀಡಿ ಗೌರವಿಸಬೇಕು ಎಂದು ಪತ್ರ ಬರೆಯಲಾಗಿದೆ.
ಬೆಂಗಳೂರು (ಅ.06): ದಿವಂಗತ ನಟ ಅಂಬರೀಶ್ಗೆ (Actor Ambreesh) ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುವಂತೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ (Minister Ramalingareddy) ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸಚಿವರು ಪತ್ರ ಬರೆದಿರುವ ಬಗ್ಗೆ ಅಂಬಿ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂಬರೀಶ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ, ಜನಪ್ರಿಯ ನಟ ಹಾಗೂ ಮಾಜಿ ಕೇಂದ್ರ / ರಾಜ್ಯ ಸಚಿವರಾಗಿದ್ದ ದಿವಂಗತ ಶ್ರೀ ಎಂ. ಹೆಚ್. ಅಂಬರೀಶ್ (ಮಂಡ್ಯದ ಗಂಡು) ಅವರು ನಾಡಿನ ಕಲೆ, ಸಾಹಿತ್ಯ ಹಾಗೂ ರಾಜಕೀಯ ರಂಗಕ್ಕೆ ನೀಡಿದ ಸೇವೆ ಅಪಾರವಾದದ್ದು. ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ‘ರೆಬೆಲ್ ಸ್ಟಾರ್’ ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ.
ಅವರ ಕೊಡುಗೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ವನ್ನು (ಮರಣೋತ್ತರವಾಗಿ) ನೀಡಿ ಗೌರವಿಸಬೇಕು ಎಂದು ಮನವಿ ಮಾಡುತ್ತೇವೆ.
ಈ ವಿಷಯವಾಗಿ ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ: ಅಂಬರೀಶ್ ಅಭಿಮಾನಿಗಳ ಸಂಘದವರು ನನಗೆ ಸಲ್ಲಿಸಿರುವ ಸ್ವಯಂವೇದ್ಯ ಮನವಿಯನ್ನು ಇದರೊಂದಿಗೆ ಲಗತ್ತಿಸಿದೆ. ಆದ್ದರಿಂದ, ಮುಂಬರುವ ರಾಜ್ಯೋತ್ಸವ ಅಥವಾ ಸೂಕ್ತ ಸಂದರ್ಭದಲ್ಲಿ ಶ್ರೀ ಎಂ. ಹೆಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಬೇಕೆಂದು ಈ ಮೂಲಕ ತಮ್ಮನ್ನು ಕೋರಿಕೊಳ್ಳುವುದಾಗಿ ತಿಳಿಸಿದ್ದಾರೆ.
(ವರದಿ: ಕೃಷ್ಣ, ನ್ಯೂಸ್18 ಕನ್ನಡ, ಬೆಂಗಳೂರು)














