Last Updated:
ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧರಣಿ ಕುಳಿತಿದ್ದ ಎಲ್ಲರನ್ನು ಪ್ರಧಾನಿ ಮನೆಯಿಂದ ತೆರವುಗೊಳಿಸಲಾಯಿತು. ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದವರಿಗೆ ಶಾಕ್ ಕೊಟ್ಟಿದ್ದಾರೆ.
ದೆಹಲಿ: ಇವತ್ತು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಹಂಗಾಮ ನಡೆದು ಹೋಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಕಾಂಗ್ರೆಸ್ ಪ್ರತಿಭಟನೆ (Congress Protest) ಕಿಚ್ಚೆಬ್ಬಿಸಿದೆ. ಸಿಜೆಪಿ (CJP) ಪ್ರತಿಭಟನೆಯ ವೇಳೆ ಪೊಲೀಸರ ಲಾಠಿಚಾರ್ಜ್ ಖಂಡಿಸಿ ಕಾಂಗ್ರೆಸ್ನ ಘಟಾನುಘಟಿ ನಾಯಕರು ಇಂದು ಬೀದಿಗಳಿದಿದ್ದರು. ಪ್ರಧಾನಿ ನಿವಾಸದ (PM House) ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದ್ದರು. ಆದ್ರೆ, ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧರಣಿ ಕುಳಿತಿದ್ದ ಎಲ್ಲರನ್ನು ಪ್ರಧಾನಿ ಮನೆಯಿಂದ ತೆರವುಗೊಳಿಸಲಾಯಿತು. ಬಲವಂತವಾಗಿ ವಶಕ್ಕೆ ಪಡೆದ ದೆಹಲಿ ಪೊಲೀಸರು, ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದವರಿಗೆ ಶಾಕ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಬೇಡಿಕೆಗಳೇನು?
- ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ಸದನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಉತ್ತರ
- ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರದ ತನಿಖೆ
- ವಿದ್ಯಾರ್ಥಿಗಳ ಚಿಕಿತ್ಸೆ, ಶಿಕ್ಷಣಕ್ಕೆ ಪರಿಹಾರ
- ನೀಟ್ ಅಕ್ರಮದ ಬಗ್ಗೆ ಸದನದಲ್ಲಿ ಚರ್ಚೆ
ಇನ್ನು ರಾಹುಲ್ ಗಾಂಧಿ ಸಂದೇಶ ಹೊತ್ತು ಹೋಗಿದ್ದ ಸಚಿವ ಜಿತೇಂದ್ರ ಸಿಂಗ್, ರಾಹುಲ್ ಗಾಂಧಿ ವಿರುದ್ಧವೇ ಹರಿಹಾಯ್ದರು. ಸದನದಲ್ಲಿ ಚರ್ಚೆಗಷ್ಟೇ ಕೇಳಿದ್ದ ರಾಹುಲ್ ಗಾಂಧಿ, ಇದೀಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಎಂಬ ಹೊಸ ವರಸೆ ತೆಗೆದಿದ್ದಾರೆ ಎಂದು ಆರೋಪಿಸಿದ್ರು. ಈ ಬಗ್ಗೆ ಮಾತನಾಡಿರುವ ಅವರು, ಬಹಳ ವಿನಮ್ರತೆಯಿಂದ ರಾಹುಲ್ ಮಾತು ಕೇಳಿಸಿಕೊಂಡೆ ನೀಟ್ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಬೇಕೆಂದು ಕೇಳಿದರು ಚರ್ಚೆಗೆ ಸರ್ಕಾರ ಸಿದ್ಧ ಎಂದರೆ ಧರಣಿ ವಾಪಸ್ ಪಡೀತೇವೆ ಅಂದ್ರು 2-3 ಬಾರಿ ಕೇಳಿದಾಗಲೂ ರಾಹುಲ್ ಚರ್ಚೆ ಬಗ್ಗೆಯೇ ಹೇಳಿದ್ರು ಸರ್ಕಾರದ ಪ್ರಮುಖ ನಾಯಕರೊಂದಿಗೆ ಚರ್ಚೆ ಮಾಡಿದೆ ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ ಎಂದು ಸರ್ಕಾರ ಹೇಳಿತು. ರಾಹುಲ್‌ಗೆ ಈ ಬಗ್ಗೆ ಹೇಳಿದಾಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬೇಡಿಕೆ ಇಟ್ಟರು ಎಂದು ಹೇಳಿದರು.
ಇನ್ನು ನಿನ್ನೆ ನಡೆದ ಸಂಸತ್ ಚಲೋ ರ್ಯಾಲಿಯಲ್ಲಿ 150ಕ್ಕೂ ಹೆಚ್ಚು ಜನರನ್ನ ದೆಹಲಿ ಪೊಲೀಸರು ಬಂಧಿಸಿದ್ರು. ಇದ್ರಲ್ಲಿ 17 ಸಿಜೆಪಿ ಸದಸ್ಯರಿಗೆ ಇವತ್ತು ದೆಹಲಿ ಮಾಜಿ ಸಿಎಂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ಕೋರ್ಟ್‌ಗೆ ಬಂದು ಜಾಮೀನಿಗೆ ಶ್ಯೂರಿಟಿ ಕೊಟ್ಟು ರಿಲೀಸ್ ಮಾಡಿಸಿದ್ದಾರೆ ಕೇಜ್ರಿವಾಲ್. ಹೀಗೆ ದೆಹಲಿಯಲ್ಲಿ ಒಂದೆಡೆ ಸಿಜೆಪಿ ಮತ್ತೊಂದೆಡೆ ಕಾಂಗ್ರೆಸ್‌ನವರಿಂದ ಹೋರಾಟಗಳು ನಡೀತಿದ್ದು, ಇದನ್ನು ಕೇಂದ್ರ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂದು ನೋಡಬೇಕಿದೆ.














