Last Updated:
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದ ನಿವಾಸಿ ಸುದೀಪ್ ಮನೆಯಲ್ಲಿ ಇದ್ದಾಗ ಏಕಾಏಕಿ ಫಿಟ್ಸ್ ಬಂದು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಕುಟುಂಬಸ್ಥರು ನೆರವಿಗೆ ಧಾವಿಸಿದರೂ ಸುದೀಪ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ನಟ ದರ್ಶನ್ ನ (Actor Darshan) ಕಣ್ತುಂಬಿಕೊಳ್ಳಬೇಕು ಎಂಬುದು ಬಾಲ್ಯದಿಂದಲೂ ಆ ಯುವಕನ ದೊಡ್ಡ ಕನಸಾಗಿತ್ತು. ನೆಚ್ಚಿನ ನಟನನ್ನು ಭೇಟಿಯಾಗಲು ಹಲವು ಬಾರಿ ಬೆಂಗಳೂರಿಗೆ ತೆರಳಿದ್ದರೂ ಆ ಆಸೆ ಈಡೇರಿರಲಿಲ್ಲ. ಆದರೆ 2023ರಲ್ಲಿ ಮಾಧ್ಯಮ ವರದಿಯೊಂದು ಆತನ ಕನಸಿಗೆ ಹೊಸ ದಾರಿ ತೋರಿಸಿತು. ಕೊನೆಗೂ ದರ್ಶನ್ ನ ಭೇಟಿಯಾಗಿ, ಧೈರ್ಯದ ಮಾತುಗಳನ್ನು ಕೇಳಿದ್ದ ಸುದೀಪ್ (Sudeep) ಸಂತಸಗೊಂಡಿದ್ದರು. ಇದೀಗ ಅದೇ ಅಭಿಮಾನಿಯ ಬದುಕಿಗೆ ದುರಂತ ಅಂತ್ಯ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದ 24 ವರ್ಷದ ಸುದೀಪ್ ಮೂರ್ಛೆ ರೋಗದಿಂದ ಮೃತಪಟ್ಟಿದ್ದಾರೆ.
ಟಿವಿ 9 ಕನ್ನಡ ವರದಿ ಪ್ರಕಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದ ನಿವಾಸಿ ಸುದೀಪ್ ಮನೆಯಲ್ಲಿ ಇದ್ದಾಗ ಏಕಾಏಕಿ ಫಿಟ್ಸ್ ಬಂದು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಕುಟುಂಬಸ್ಥರು ನೆರವಿಗೆ ಧಾವಿಸಿದರೂ ಸುದೀಪ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 24ರ ಹರೆಯದಲ್ಲೇ ಅವರು ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯುವಕನ ಅಕಾಲಿಕ ನಿಧನದಿಂದ ಮತ್ತಿಕೊಪ್ಪ ಗ್ರಾಮದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ.
ಸುದೀಪ್ ಗೆ ನಟ ದರ್ಶನ್ ಎಂದರೆ ಅಪಾರ ಅಭಿಮಾನವಿತ್ತು. ಕೇವಲ ಅಭಿಮಾನಿಯಾಗಿ ಸಿನಿಮಾ ನೋಡುವುದಷ್ಟೇ ಅಲ್ಲದೆ, ತಮ್ಮ ನೆಚ್ಚಿನ ನಟನನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು ಎಂಬ ಆಸೆಯನ್ನು ಅವರು ಹಲವು ವರ್ಷಗಳಿಂದ ಹೊಂದಿದ್ದರು. ಆರು ವರ್ಷದ ಬಾಲಕನಾಗಿದ್ದಾಗಿನಿಂದಲೇ ದರ್ಶನ್ ಸಿನಿಮಾಗಳು ಮತ್ತು ವ್ಯಕ್ತಿತ್ವದ ಬಗ್ಗೆ ಸುದೀಪ್ ವಿಶೇಷ ಅಭಿಮಾನ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
2023ರಲ್ಲಿ ಸುದೀಪ್ , ದರ್ಶನ್ ಅಭಿಮಾನ ಮತ್ತು ಅವರ ಅನಾರೋಗ್ಯದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿ ನಟ ದರ್ಶನ್ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಬಳಿಕ ಸುದೀಪ್ ಅವರನ್ನು ಮೈಸೂರಿಗೆ ಕರೆಸಿಕೊಂಡು ಭೇಟಿಯಾಗಿದ್ದರು. ದರ್ಶನ್ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿದ್ದು ಸುದೀಪ್ ಪಾಲಿಗೆ ಮರೆಯಲಾಗದ ಕ್ಷಣವಾಗಿತ್ತು.
ಸುದೀಪ್ ಜೀವನದ ಕೊನೆಯ ಹಂತದಲ್ಲಿ ದರ್ಶನ್ ಭೇಟಿಯಾಗಬೇಕು ಎಂಬ ಬಹುದಿನದ ಆಸೆ ಈಡೇರಿತ್ತು. ಆದರೆ ಇದೀಗ ಅವರು ಅಕಾಲಿಕವಾಗಿ ನಿಧನರಾಗಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕು ಎಂಬ ಕನಸು ನನಸಾದ ಕೆಲವೇ ವರ್ಷಗಳ ಬಳಿಕ ಸುದೀಪ್ ಇಹಲೋಕ ತ್ಯಜಿಸಿದ್ದಾರೆ.
ನಟ ದರ್ಶನ್ ಮತ್ತು ಅಭಿಮಾನಿಗಳ ನಡುವಿನ ಬಾಂಧವ್ಯದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತದೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ಸಂದರ್ಭಗಳೂ ಇವೆ. ಇದೀಗ ತಮ್ಮ ಅಪ್ಪಟ ಅಭಿಮಾನಿ ಸುದೀಪ್ ನಿಧನರಾಗಿರುವ ಸುದ್ದಿ ದರ್ಶನ್ ಗೆ ತಲುಪಿದರೆ, ಅದು ದರ್ಶನ್ ಗೆ ನೋವುಂಟು ಮಾಡುವ ಸಂಗತಿಯಾಗಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯ.














