Last Updated:
Mangaluru: ಶಾಹೀಲ್ ನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜತೆಗೆ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದಾರೆ.
ಮಂಗಳೂರು: ಆತ ಟ್ರೆಂಡಿ ಯುವಕ. ಮಾರುಕಟ್ಟೆಗೆ (Market) ಬಂದ ನೂತನ ಫ್ಯಾಷನ್ ನ್ನು (Fashion) ಅಳವಡಿಸೋದು ಆತನ ಹವ್ಯಾಸ. ನಿನ್ನೆ ತನ್ನ ಹೊಸ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಿದ್ದ. ಹರಿದ ಸ್ಟೈಲ್ ನಲ್ಲಿದ್ದ ಪ್ಯಾಂಟ್ (Toned Jeans) ಮೇಲೆ ಮೂವರು ಕಿಡಿಗೇಡಿಗಳ ಕಣ್ಣು ಬಿದ್ದಿತ್ತು. ಕೈ-ಕಾಲನ್ನು ಗಟ್ಟಿ ಹಿಡಿದು ಗೋಣಿ ಹೊಲಿಯುವ ದಾರದಿಂದ ಆತನ ಪ್ಯಾಂಟ್ ನ್ನು ಅವರು ಹೊಲಿದಿದ್ದರು. ಅದರೆ ಆ ಬಳಿಕ ಆಗಿದ್ದು ಮಾತ್ರ ಅನಾಹುತ.
ಯುವಕನ ಕೈ ಕಾಲನ್ನು ಗಟ್ಟಿ ಹಿಡಿದು ಪ್ಯಾಂಟ್ ನ್ನು ಹೊಲಿಯುತ್ತಿರುವ ಮೂವರು ಯುವಕರನ್ನು ನೋಡಿ, ಇವರೇನು ಟೈಲರ್ ಗಳಲ್ಲ. ಟ್ರೆಂಡಿ ಯುವಕನು ಧರಿಸಿದ ಈ ಪ್ಯಾಂಟ್ ಈ ಮೂವರು ಕಣ್ಣು ನೆತ್ತಿಗೇರಿಸಿದೆ. ಗುರುವಾರ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಬಂದಿದ್ದ. ಶಾಹೀಲ್ ಟ್ರೆಂಡಿ ಪ್ಯಾಂಟ್ ಧರಿಸಿದ್ದ ಕಾರಣ ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟಿದೆ.
ಶಾಹೀಲ್ ನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜತೆಗೆ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಎಂಬವರು ಸೇರಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇವರೆಲ್ಲಾ ಶಾಹೀಲ್ ಸ್ನೇಹಿತರು ಅನ್ನೋದು ತಿಳಿದುಬಂದಿದೆ. ತಮಾಷೆ ಹಂತ ಮೀರಿದ್ದು, ಯುವಕರು ಈ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಶಾಹಿಲ್ ಗುರುವಾರ ಸಂಜೆ ಮನೆಯಲ್ಲಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ.
ಸದ್ಯ ಶಾಹೀಲ್ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಶಾಹೀಲ್ ಹೆತ್ತವರು ಪೊಲೀಸ್ ಠಾಣೆಗೆ ದೂರು ನೀಡಲೂ ಹಿಂಜರಿದಿದ್ದು ಮಾತುಕತೆಯ ಮೂಲಕ ಪ್ರಕರಣ ಬಗೆಹರಿಸಿಕೊಂಡಿದ್ದಾರೆ. ಒಟ್ಟಿನ್ನಲ್ಲಿ ತಮಾಷೆ ಎಲ್ಲೆ ಮೀರಿ ಯುವಕನ ಪ್ರಾಣವನ್ನೇ ಬಲಿ ಪಡೆಯುವ ಹಂತ ತಲುಪಿದ್ದು ಮಾತ್ರ ಖಂಡನೀಯ. (ವರದಿ: ಕಿಶನ್ ಶೆಟ್ಟಿ, ನ್ಯೂಸ್ 18 ಕನ್ನಡ, ಮಂಗಳೂರು)
Dakshina Kannada,Karnataka













