Last Updated:
IPL 2026ರ 63 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ಗಳಿಸಿದೆ.
IPL 2026ರ 63ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ಗಳಿಸಿದೆ. ಕಾರ್ತಿಕ್ ಶರ್ಮಾ 32, ಡೆವಾಲ್ಡ್ ಬ್ರೆವಿಸ್ 44, ಸಂಜು ಸ್ಯಾಮ್ಸನ್ 27 ರನ್ಗಳಿಸಿ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಈ ಪಂದ್ಯ ಸಿಎಸ್‌ಕೆ ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೈದರಾಬಾದ್ ತಂಡಕ್ಕೆ ಇನ್ನೂ ಒಂದು ಅವಕಾಶ ಇದೆಯಾದರೂ, ಆರ್ಸಿಬಿ ವಿರುದ್ಧ ಆಗಿರುವುದರಿಂದ ಇಂದೇ ಗೆದ್ದು ತನ್ನ ಪ್ಲೇಆಫ್ ಪ್ರವೇಶಿ ಖಚಿತಗೊಳಿಸಿಕೊಳ್ಳಲು ಬಯಸುತ್ತಿದೆ.
ತವರಿನ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (CSK) ನಿರೀಕ್ಷಿತ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್ (Sanju Samson) ಸ್ಫೋಟಕ ಆಟಕ್ಕೆ ಮುಂದಾಗಿ 3ನೇ ಓವರ್ನಲ್ಲಿಯೇ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನಾಡಿದ ಸಂಜು 5 ಬೌಂಡರಿ, 1 ಸಿಕ್ಸರ್ ಸಹಿತ 27 ರನ್ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಕೀಪರ್ ಇಶಾನ್ ಕಿಶನ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ 3ನೇ ಕ್ರಮಾಂಕದಲ್ಲಿ ಬಂದ ಉರ್ವಿಲ್ ಪಟೇಲ್ 8 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಕೇವಲ 13 ರನ್ಗಳಿಸಿ ಸಕಿಬ್ ಹುಸೇನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
48ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ಸಿಎಸ್‌ಕೆ ತಂಡಕ್ಕೆ ಕಾರ್ತಿಕ್ ಶರ್ಮಾ ಬಲ ತಂದರು. ನಾಯಕ ಗಾಯಕ್ವಾಡ್ ಜೊತೆಗೂಡಿ 3ನೇ ವಿಕೆಟ್ಗೆ 42 ರನ್ಗಳ ಜೊತೆಯಾಟ ನೀಡಿದರು. ಒಂದು ಕಡೆ ಗಾಯಕ್ವಾಡ್ ರನ್ಗಳಿಸಲು ಪರದಾಡುತ್ತಿದ್ದರಿಂದ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ಕಾರ್ತಿಕ್ ಶರ್ಮಾ 10ನೇ ಓವರ್ನಲ್ಲಿ ಕಮಿನ್ಸ್ ಬೌಲಿಂಗ್ನಲ್ಲಿ ರೆಡ್ಡಿಗೆ ಕ್ಯಾಚ್ ನೀಡಿ ಔಟ್ ಆದರು. ಕಾರ್ತಿಕ್ ಬೆನ್ನಲ್ಲೇ ನಾಯಕ ಗಾಯಕ್ವಾಡ್ 21 ಎಸೆತಗಳಲ್ಲಿ ಒಂದೇ ಒಂದು ಬೌಂಡರಿಯನ್ನೂ ಸಿಡಿಸದೇ ಕೇವಲ 15 ರನ್ಗಳಿಸಿ ಮಾಲಿಂಗಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಹಂತದಲ್ಲಿ ಒಂದಾದ ಡೆವಾಲ್ಡ್ ಬ್ರೆವಿಸ್ ಹಾಗೂ ಶಿವಂ ದುಬೆ 59 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ಗಳ ಸಹಿತ 44 ರನ್ಗಳಿಸಿ 18ನೇ ಓವರ್ನಲ್ಲಿ ಔಟ್ ಆದರು. ದುಬೆ 23 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ ಕೇವಲ 26 ರನ್ಗಳಿಸಿ ಔಟ್ ಆದರು. ಪ್ರಶಾಂತ್ ವೀರ್ 9 ಎಸೆತಗಳಲ್ಲಿ 12, ಅಕೀಲ್ ಹುಸೇನ್ ಅಜೇಯ 3 ರನ್ಗಳಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ಪರ ಪ್ಯಾಟ್ ಕಮಿನ್ಸ್ 28ಕ್ಕೆ3 ವಿಕೆಟ್ ಪಡೆದು ಮಿಂಚಿದರೆ, ಸಕಿಬ್ ಹುಸೇನ್ 34ಕ್ಕೆ2 ವಿಕೆಟ್ ಪಡೆದರು. ಇಶಾನ್ ಮಾಲಿಂಗ 26ಕ್ಕೆ1, ಪ್ರಫುಲ್ ಹಿಂಗೆ 37ಕ್ಕೆ1 ವಿಕೆಟ್ ಪಡೆದರು.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೀ), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಸಂಜು ಸ್ಯಾಮ್ಸನ್ (ವಿಕೀ), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್
CSK vs SRH, IPL 2026: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಗೆ ಆಸರೆಯಾದ ಕಾರ್ತಿಕ್-ಬ್ರೆವಿಸ್! ಹೈದರಾಬಾದ್ಗೆ 181 ರನ್ಗಳ ಗುರಿ ನೀಡಿದ ಸಿಎಸ್‌ಕೆ













