Bigg Boss: ನನಗೆ 3ನೇ ಹಂತದ ಕ್ಯಾನ್ಸರ್‌ ಇದೆ; ದಿಢೀರ್ ಆಘಾತಕಾರಿ ಸತ್ಯ ಬಿಚ್ಚಿಟ್ಟ ಬಿಗ್​ಬಾಸ್​ ಸ್ಪರ್ಧಿ | | ACTPnews

ರೇಣು ಸುಧಿ


Last Updated:

ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ .

 ರೇಣು ಸುಧಿ
ರೇಣು ಸುಧಿ

ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ . ಹಲವು ವಾರಗಳಿಂದ ಅವರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ತಮಗೆ ಕ್ಯಾನ್ಸರ್ ಇರುವುದು ದೃಢಪಟ್ಟಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವ ವೇಳೆ ರೇಣು ಸುಧಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, ‘ನಾನೊಬ್ಬಳು ಹೋರಾಟಗಾರ್ತಿ’ ದಯವಿಟ್ಟು ನನಗಾಗಿ ಪ್ರಾರ್ಥಿಸಿ. ನನ್ನ ತಂದೆಯನ್ನು ನೆನಪಿಸಿಕೊಂಡು ನನಗಾಗಿ ಪ್ರಾರ್ಥಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರೇಣು ಸುಧಿ ತಮ್ಮ ಆರೋಗ್ಯದ ಕುರಿತು ಹಲವು ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿಯೂ ಒಂದು ವಿಶೇಷ ಪೋಸ್ಟ್ ಹಂಚಿಕೊಂಡ ರೇಣು , ತಮ್ಮ ಜೀವನದಲ್ಲಿ ನಡೆಯುತ್ತಿರುವ ದೊಡ್ಡ ಹೋರಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದುವರೆಗೆ ಕೇವಲ ಕುಟುಂಬ ಸದಸ್ಯರು, ಕೆಲವು ಆಪ್ತ ಸ್ನೇಹಿತರು ಹಾಗೂ ಮ್ಯಾನೇಜರ್‌ಗೆ ಮಾತ್ರ ತಿಳಿದಿದ್ದ ವಿಚಾರವನ್ನು ಇದೀಗ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ರೇಣು ಸುಧಿ ಹೇಳುವಂತೆ, ಅವರಿಗೆ ಕೇವಲ 15 ವರ್ಷ ವಯಸ್ಸಿದ್ದಾಗ ಎದೆಯ ಭಾಗದಲ್ಲಿ ಒಂದು ಗಡ್ಡೆ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಅದು ದೊಡ್ಡ ಸಮಸ್ಯೆ ಎಂದು ಅವರು ಭಾವಿಸಿರಲಿಲ್ಲ. ಈ ಕಾರಣದಿಂದ ಕುಟುಂಬದವರಿಗೂ ತಿಳಿಸದೆ ನಿರ್ಲಕ್ಷ್ಯ ಮಾಡಿದ್ದರು. ನಂತರ ಡಿಪ್ಲೊಮಾ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಕುಟುಂಬದವರಿಗೆ ಈ ವಿಚಾರ ತಿಳಿದು, ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ಪತಿ ಸುಧಿಚೆಟ್ಟನ್ ಅವರ ನಿಧನದ ಬಳಿಕ ಆರೋಗ್ಯ ತಪಾಸಣೆಗಾಗಿ ವೈದ್ಯರನ್ನು ಭೇಟಿಯಾದಾಗ ಮತ್ತೊಮ್ಮೆ ಈ ಸಮಸ್ಯೆಯ ಕುರಿತು ಅನುಮಾನ ವ್ಯಕ್ತವಾಯಿತು. ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಸ್ಕ್ಯಾನ್ ವರದಿಯಲ್ಲಿ ಕಂಡುಬಂದ ಕೆಲವು ಲಕ್ಷಣಗಳ ಆಧಾರದ ಮೇಲೆ ಮ್ಯಾಮೊಗ್ರಾಮ್ ಪರೀಕ್ಷೆ ನಡೆಸಲಾಯಿತು.

ಮ್ಯಾಮೊಗ್ರಾಮ್ ವರದಿಯೂ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಬಯಾಪ್ಸಿ ಮಾಡಲು ಸೂಚಿಸಿದರು. ಪರೀಕ್ಷೆಯ ಫಲಿತಾಂಶಗಳನ್ನು ರೇಣು ಸ್ವತಃ ಪಡೆದುಕೊಂಡಿದ್ದರು. ಆದರೆ ಫಲಿತಾಂಶದಲ್ಲಿ ಕ್ಯಾನ್ಸರ್ ದೃಢಪಟ್ಟಿದ್ದರೂ, ಕೆಲವು ದಿನಗಳ ಕಾಲ ಆ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳದೆ ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು.

ಇದಕ್ಕೂ ಮೀರಿಸಿ, ವೈದ್ಯರು ಇದು ಮೂರನೇ ಹಂತದ ಕ್ಯಾನ್ಸರ್ ಎಂದು ತಿಳಿಸಿದಾಗ ರೇಣು ಮತ್ತು ಅವರ ಕುಟುಂಬಕ್ಕೆ ದೊಡ್ಡ ಆಘಾತ ಉಂಟಾಯಿತು. ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ಕಿಮೊಥೆರಪಿ ಚಿಕಿತ್ಸೆ ಆರಂಭಿಸುವಂತೆ ವೈದ್ಯರು ಸಲಹೆ ನೀಡಿದ್ದು, ಶೀಘ್ರದಲ್ಲೇ ಚಿಕಿತ್ಸಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ರೇಣು ಸುಧಿ ಮಹಿಳೆಯರಿಗೆ ಮಹತ್ವದ ಸಂದೇಶವನ್ನೂ ನೀಡಿದ್ದಾರೆ. ದೇಹದಲ್ಲಿ ನೋವು ಇಲ್ಲದ ಗಡ್ಡೆಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ. ನೋವು ಇಲ್ಲದಿದ್ದರೆ ಸಮಸ್ಯೆಯೇ ಇಲ್ಲ ಎಂದು ಭಾವಿಸಬೇಡಿ. ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಅನೇಕ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports