Last Updated:
ಈ ವೀಕೆಂಡ್ ಸಂಭ್ರಮ ಕೇವಲ ಮೂಕಪ್ರಾಣಿಗಳಿಗೆ ಮಾತ್ರವಲ್ಲ, ನಮಗೂ ಒಂದು ಬೆಸ್ಟ್ ಸ್ಟ್ರೆಸ್ ಬಸ್ಟರ್. ವಾರವಿಡೀ ಆಫೀಸ್ ಕೆಲಸ, ಜಂಜಾಟಗಳಿಂದ ಸುಸ್ತಾದ ಮನಸ್ಸಿಗೆ ಇಲ್ಲಿನ ವಾತಾವರಣ ಹೊಸ ಉಲ್ಲಾಸ ನೀಡುತ್ತದೆ. ಆದರೆ ಈ ನಿಯಮಗಳು ಕಡ್ಡಾಯವಾಗಿ ಪಾಲಿಸಲೇಬೇಕು!
ಬೆಂಗಳೂರು ಅಂದರೆ ಬರೀ ಐಟಿ ಬಿಟಿ ( IT and BT Capital of India), ಟ್ರಾಫಿಕ್ ಅಷ್ಟೇ ಅನ್ಕೋಬೇಡಿ. ನಮ್ಮೂರು ಮೂಕಪ್ರಾಣಿಗಳನ್ನು ಅಪಾರವಾಗಿ ಪ್ರೀತಿಸೋ ಜೀವಗಳ ಬೀಡು ಹೌದು, (Animal Lovers) ಇದಕ್ಕೆ ಪಕ್ಕಾ ಸಾಕ್ಷಿ ನೋಡಬೇಕಾದರೆ ನೀವು ಭಾನುವಾರ ಬೆಳಗ್ಗೆ ಕಬ್ಬನ್ ಪಾರ್ಕ್ ಕಡೆ (Cubbon Park) ಒಂದು ರೌಂಡ್ ಹಾಕಬೇಕು! ವಾರವಿಡೀ ಸೈಲೆಂಟ್ ಆಗಿರೋ ಈ ವಿಶಾಲ ಹಸಿರು ವನಸಿರಿ, ಸಂಡೆ ಬಂತು ಅಂದ್ರೆ ಸಾಕು, ನೂರಾರು ಮುದ್ದಾದ ನಾಯಿಗಳು (Dogs) ಮತ್ತು ಅವುಗಳ ಓನರ್ಗಳ ಸಡಗರದ ತಾಣವಾಗಿ ಕಳೆಗಟ್ಟುತ್ತದೆ. ಇದನ್ನೇ ಇಲ್ಲಿನ ಜನ ಪ್ರೀತಿಯಿಂದ ‘ವೀಕೆಂಡ್ ಡಾಗ್ ಪಾರ್ಕ್’ (Weekend Dog Park) ಅಂತ ಕರೀತಾರೆ.
ಕಬ್ಬನ್ ಪಾರ್ಕ್ನ ಸೆಂಟ್ರಲ್ ಲೈಬ್ರರಿ (ರಾಜ್ಯ ಕೇಂದ್ರ ಗ್ರಂಥಾಲಯ) ಎದುರಿಗಿರುವ ಫೆನ್ಸಿಂಗ್ ಆವರಣದಲ್ಲೇ ಈ ಶ್ವಾನಗಳ ಜಾತ್ರೆ ನಡೆಯೋದು. ಪ್ರತಿ ಭಾನುವಾರ ಬೆಳಗ್ಗೆ 7:30 ರಿಂದ ಮಧ್ಯಾಹ್ನ 11:00 ರವರೆಗೆ ಇಲ್ಲಿ ನಾಯಿಗಳದ್ದೇ ಸಾಮ್ರಾಜ್ಯ. ಬೆಳಗ್ಗೆನೇ ಹೋದರೆ ಆ ತಂಗಾಳಿಯಲ್ಲಿ ನಾಯಿಗಳು ಸಖತ್ ಎಂಜಾಯ್ ಮಾಡ್ತಾ ಓಡಾಡೋದನ್ನ ನೋಡಬಹುದು. ಅಂದಹಾಗೆ, ಇಲ್ಲಿಗೆ ಬರಲು ನಿಮ್ಮ ಹತ್ತಿರ ನಾಯಿ ಇರಲೇಬೇಕು ಅಂತೇನೂ ಇಲ್ಲ. ಬರೀ ಅವುಗಳ ಕ್ಯೂಟ್ ಆಟಗಳನ್ನ ನೋಡಿ ವೀಕೆಂಡ್ ಮೂಡ್ ಎಂಜಾಯ್ ಮಾಡೋಕೆ ಬರೋ ಜನರೇ ಇಲ್ಲಿ ಜಾಸ್ತಿ!
5-6 ವರ್ಷದಿಂದ ಇಲ್ಲಿಗೆ ಬರ್ತಾ ಇದಿವಿ. ಇಲ್ಲಿ ನಾಯಿಗಳನ್ನ ಫ್ರೆಂಡ್ಸ್ ಮಾಡ್ಸೋದು, ಮನೆಯಲ್ಲಿ ಇದ್ದು ಇದ್ದು ಅವುಗಳಿಗೆ ಬೇಜಾರ್ ಬರತ್ತೆ, ಅದಕ್ಕೆ ವೀಕೆಂಡ್ನಲ್ಲಿ ಇಲ್ಲಿಗೆ ಕರೆದುಕೊಂಡು ಬಂದರೆ ಅದಕ್ಕೆ ಫ್ರೀಡಮ್ ಸಿಗುತ್ತೆ. ಆದರೆ ನಾಯಿಗಳನ್ನ ಪೆಟ್ ಮಾಡುವ ಮೊದಲು ಓನರ್ಗಳ ಕೇಳಿ ನಂತರ ಅವುಗಳನ್ನ ಪೆಟ್ ಮಾಡಿ. ಇಲ್ಲಿ ಅಡೊಪ್ಶನ್ ಕೂಡ ಮಾಡ್ಕೊಬಹುದು, ದಿನ ವಾಕಿಂಗ್ ಬರೋರು ನಾಯಿಗಳನ್ನ ತರ್ತಾರೆ. ಆದರೆ ಭಾನುವಾರ ಬೆಳಿಗ್ಗೆ ಬಂದರೆ ಎಲ್ಲಾ ತರದ ನಾಯಿಗಳು ನೋಡ್ಲಿಕ್ಕೆ ಸಿಗತ್ತೆ ಎಂದು ನಾಯಿಯ ಮಾಲೀಕರಾದ ಯಶ್ವಂತ್ ಹೇಳಿದರು.
ಬೆಂಗಳೂರಿನ ಫ್ಲಾಟ್ ಸಂಸ್ಕೃತಿ ಮತ್ತು ಕಿರಿದಾದ ಮನೆಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರೋ ಶ್ವಾನಗಳಿಗೆ ಈ ಪಾರ್ಕ್ ನಿಜಕ್ಕೂ ದೊಡ್ಡ ರಿಲೀಫ್. ಇಲ್ಲಿರೋ ಪ್ರತ್ಯೇಕ ಬೇಲಿ ಆವರಣದಲ್ಲಿ ಮಾಲೀಕರು ತಮ್ಮ ಶ್ವಾನಗಳ ಕುತ್ತಿಗೆಗೆ ಹಾಕಿರೋ ಬೆಲ್ಟ್ (Leash) ಬಿಚ್ಚಿ ಫ್ರೀಯಾಗಿ ಓಡಾಡಲು ಬಿಡಬಹುದು. ನಾಯಿಗಳು ಕೂಡ ಒಬ್ಬರನ್ನೊಬ್ಬರು ನೋಡಿ, ಮೂಸಿ ನೋಡ್ತಾ ಹೊಸ ಫ್ರೆಂಡ್ಸ್ ಮಾಡಿಕೊಳ್ಳುತ್ತವೆ. ಅವುಗಳ ಸಂತೋಷದ ಬೊಗಳುವಿಕೆ, ಬಾಲ ಅಲ್ಲಾಡಿಸೋ ಸಡಗರ ಮತ್ತು ಮಾಲೀಕರ ಮುಖದಲ್ಲಿನ ನಗು ಇಡೀ ವಾತಾವರಣಕ್ಕೆ ಒಂಥರಾ ಪಾಸಿಟಿವ್ ಎನರ್ಜಿ ತುಂಬುತ್ತದೆ.
ವೀಕೆಂಡ್ ನಲ್ಲಿ ಶ್ವಾನಗಳ ಸಾಮ್ರಾಜ್ಯ, ಕಬ್ಬನ್ ಪಾರ್ಕ್
ಇಲ್ಲಿಗೆ ಹೋದರೆ ನಿಮಗೆ ಜರ್ಮನ್ ಶೆಫರ್ಡ್, ಪಗ್, ಹಸ್ಕಿ, ಗೋಲ್ಡನ್ ರಿಟ್ರೈವರ್ನಂತಹ ಬ್ರಾಂಡೆಡ್ ವಿದೇಶಿ ತಳಿಗಳು ಮಾತ್ರವಲ್ಲ, ನಮ್ಮ ಹೆಮ್ಮೆಯ ನಾಟಿ ತಳಿಗಳು ಅಂದರೆ ‘ಇಂಡಿ’ (Indie) ನಾಯಿಗಳೂ ಫುಲ್ ಜೋಶ್ನಲ್ಲಿ ಆಟವಾಡುವುದು ಕಾಣಿಸುತ್ತವೆ. ಇದರ ಜೊತೆಗೆ, ‘ಕಬ್ಬನ್ ಪಾರ್ಕ್ ಕ್ಯಾನೈನ್ಸ್’ ನಂತಹ ಕೆಲ ಸ್ವಯಂಸೇವಕ ಸಂಸ್ಥೆಗಳು ಇಲ್ಲಿ ಉಚಿತ ಶ್ವಾನ ದತ್ತು ಪ್ರಕ್ರಿಯೆಯನ್ನು (Adoption Drives) ನಡೆಸುತ್ತವೆ. ಅನಾಥ ಅಥವಾ ರಕ್ಷಿಸಲ್ಪಟ್ಟ ಮುದ್ದಾದ ನಾಯಿಮರಿಗಳಿಗೆ ಒಂದು ಒಳ್ಳೆಯ ಫ್ಯಾಮಿಲಿ ಸಿಗಲು ಇದೊಂದು ಅದ್ಭುತ ವೇದಿಕೆಯಾಗಿದೆ.
ಇಲ್ಲಿಗೆ ನಮ್ಮ ನಾಯಿಯನ್ನ ಕರೆದುಕೊಂಡು ಬಂದರೆ ಇತರ ನಾಯಿಗಳ ಜೊತೆ ಬೆರೆತು ಅದರ ಅಗ್ರೆಸ್ಸಿವ್ ಆಗೋದು ಕಡಿಮೆ ಆಗುತ್ತೆ. ಆರು ತಿಂಗಳಿಂದ ನಮ್ಮ ನಾಯಿನ ಇಲ್ಲಿಗೆ ಕರೆದುಕೊಂಡು ಬರ್ತಾ ಇದಿವಿ, ಅದು ಅಗ್ರೆಸ್ಸಿವ್ ಆಗೋದು ಕಡಿಮೆ ಆಗಿದೆ. ನಮಗೆ ಹೇಗೆ ಔಟಿಂಗ್ ಇರತ್ತೊ ಹಾಗೆ ನಾಯಿಗೂ ಔಟಿಂಗ್ ಬೇಕು ಎಂದು ನಾಯಿಯ ಮಾಲಿಕರಾದ ದುಷ್ಯಂತ್ ಹೇಳಿದರು. ಈ ಸುಂದರ ಹಸಿರು ಆವರಣವನ್ನು ಕ್ಲೀನ್ ಆಗಿ ಇಡೋದು ನಮ್ಮದೇ ಕರ್ತವ್ಯ ಅಲ್ವಾ? ಅದಕ್ಕಾಗಿಯೇ ತೋಟಗಾರಿಕಾ ಇಲಾಖೆ ಕೆಲವು ಸಿಂಪಲ್ ರೂಲ್ಸ್ ಹಾಕಿದೆ.
ಸ್ವಚ್ಛತೆ ಮುಖ್ಯ: ನಿಮ್ಮ ಶ್ವಾನಗಳು ಪಾರ್ಕ್ನಲ್ಲಿ ಎಲ್ಲಾದರೂ ಗಲೀಜು (ಮಲ ವಿಸರ್ಜನೆ) ಮಾಡಿದರೆ, ಅದನ್ನ ತಕ್ಷಣ ಕ್ಲೀನ್ ಮಾಡೋದು ಮಾಲೀಕರ ಜವಾಬ್ದಾರಿ. ಇದಕ್ಕಾಗಿ ‘ಪೂಪ್ ಸ್ಕೂಪರ್’ ಅಥವಾ ಕವರ್ ಜೊತೆಯಲ್ಲೇ ಇಟ್ಟುಕೊಳ್ಳಿ.
ವ್ಯಾಕ್ಸಿನೇಷನ್ ಕಡ್ಡಾಯ: ಇಲ್ಲಿಗೆ ಕರೆತರುವ ಶ್ವಾನಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ (Vaccination) ಹಾಕಿಸಿರಬೇಕು ಮತ್ತು ಅದರ ಕಾರ್ಡ್ ನಿಮ್ಮ ಬಳಿ ಇರಲಿ.
ಎಚ್ಚರಿಕೆ ಇರಲಿ: ಆಟದ ಮೈದಾನದಿಂದ ಹೊರಗಡೆ ಪಾರ್ಕ್ನಲ್ಲಿ ಬೇರೆ ಕಡೆ ಓಡಾಡುವಾಗ ಶ್ವಾನಗಳ ಬೆಲ್ಟ್ ಕೈಯಲ್ಲಿರಲಿ, ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಕಬ್ಬನ್ ಪಾರ್ಕ್ನ ಈ ವೀಕೆಂಡ್ ಸಂಭ್ರಮ ಕೇವಲ ಮೂಕಪ್ರಾಣಿಗಳಿಗೆ ಮಾತ್ರವಲ್ಲ, ನಮಗೂ ಒಂದು ಬೆಸ್ಟ್ ಸ್ಟ್ರೆಸ್ ಬಸ್ಟರ್. ವಾರವಿಡೀ ಆಫೀಸ್ ಕೆಲಸ, ಜಂಜಾಟಗಳಿಂದ ಸುಸ್ತಾದ ಮನಸ್ಸಿಗೆ ಇಲ್ಲಿನ ವಾತಾವರಣ ಹೊಸ ಉಲ್ಲಾಸ ನೀಡುತ್ತದೆ. ಪ್ರಕೃತಿಯ ಮಡಲಿನಲ್ಲಿ ಈ ಮುದ್ದಾದ ಪ್ರಾಣಿಗಳ ಒಡನಾಟ ಸವಿಯುವುದೇ ಒಂದು ಚಂದ. ಬೆಂಗಳೂರಿನ ಜನರ ಪ್ರಾಣಿ ಪ್ರೇಮ ಮತ್ತು ಒಗ್ಗಟ್ಟಿಗೆ ಈ ಡಾಗ್ ಪಾರ್ಕ್ ಒಂದು ಕನ್ನಡಿ ಹಿಡಿದಂತಿದೆ. (ವರದಿ: ಶ್ರೀಕಲಾ ಭಟ್ಟ, ಬೆಂಗಳೂರು)
Bangalore [Bangalore],Bangalore,Karnataka












