Last Updated:
ಬೆಂಗಳೂರುದಲ್ಲಿ ಮೇ 8 ರಿಂದ 17 ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮಾವು ಹಲಸು ಮೇಳ ಆಯೋಜನೆ, 50 ಮಾವು, 7 ಹಲಸು ಮಳಿಗೆ, ರೈತರಿಂದ ನೇರ ಮಾರಾಟ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಮೇ 8 ರಿಂದ 17 ರವರೆಗೆ ಮಾವು ಮೇಳ (Mango and Jackfruit Mela) ನಡೆಯಲಿದೆ. ಕಬ್ಬನ್ ಪಾರ್ಕ್ ಬ್ಯಾಂಡ್ (Cubbon Park) ಸ್ಟ್ಯಾಂಡ್ ಬಳಿ ಕರ್ನಾಟಕ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಮಾವು ಮೇಳ ನಡೆಯಲಿದೆ. ಇದೇ ಮೊದಲ ಬಾರಿಗೆ ನಗರದ 8 ಕಡೆಗಳಲ್ಲಿ ಮಾವು ಮೇಳ ಆಯೋಜಿಸಲಾಗಿದೆ.
ಒಂದೇ ಜಾಗದಲ್ಲಿ ಮೇಳ ಮಾಡಿದರೆ ಜನರಿಗೆ ಬರುವುದು ಕಷ್ಟ ಆಗಲಿದೆ. ಹೀಗಾಗಿ ಈ ಬಾರಿ ನಗರದ ಹಲವು ಭಾಗದಲ್ಲಿ ಮಾವು ಮೇಳ ನಡೆಯಲಿದ್ದು, ಇಳುವರಿ ಬಂದಂತೆ ಒಂದೊಂದು ಕಡೆಗಳಲ್ಲಿ ಮಾವು ಮೇಳ ನಡೆಸಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಮಾವು ನಿಗಮ ಅಧ್ಯಕ್ಷ ಮುದ್ದುಗೌಡ, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಾವು ಬೆಳೆ ಬಂದಿದೆ. ಈ ಬಾರಿ ನಮ್ಮಲ್ಲಿ ಇಳುವರಿ ಕಡಿಮೆ ಆಗುವ ಆತಂಕ ಇತ್ತು, ಆದರೆ ಈ ಬಾರಿ ನಿರೀಕ್ಷೆಗೂ ಮೀರಿದ ಬೆಳೆ ಬಂದಿದೆ. 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬೆಳೆಯಲಾಗಿದೆ. ಮಾವು ಮೇಳದಲ್ಲಿ 50 ಮಾವು ಮಳಿಗೆ ಹಾಗೂ 7 ಹಲಸು ಮಳಿಗೆ ಇರಲಿದೆ. ಖುದ್ದು ರೈತರೇ ನೇರವಾಗಿ ಮೇಳದಲ್ಲಿ ಮಾವು ಮಾರಾಟ ಮಾಡುವುದರಿಂದ ರೈತರಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
ಈ ಮೇಳದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಭಾಗಿಯಾಗಲಿದ್ದಾರೆ. ಒಂದೇ ಸ್ಥಳದಲ್ಲಿ ನಿಮಗೆ ಸುಮಾರು 40 ರಿಂದ 50 ತಳಿಯ ಮಾವು ಖರೀದಿಗೆ ಲಭ್ಯವಾಗಲಿದೆ. ವಿಶೇಷ ಎಂದರೇ, 10 ರಿಂದ 12 ತಳಿಯ ಹಲಸು ಕೂಡ ಲಭ್ಯವಿರಲಿದೆ. ವಿಶೇಷವಾಗಿ ಉತ್ತರ ಕನ್ನಡದಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿರುವ ಕರಿ ಇಶಾಡ್ ಮಾವು ಕೂಡ ಮೇಳದಲ್ಲಿ ಲಭ್ಯ ಇರಲಿದೆ. ಉಳಿದಂತೆ ರಸಪುರಿ, ಮಲ್ಲಿಕಾ, ಸಿಂಧೂರ, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಸಿಗಲಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಇಲ್ಲಿ ಮಾವು ಮಾರಾಟ ಮಾಡಲಾಗುತ್ತದೆ.
Bangalore [Bangalore],Bangalore,Karnataka













