Last Updated:
ಬೆಂಗಳೂರು ತರಕಾರಿ ವ್ಯಾಪಾರಿ ತಲೆಗೆ ಐಫೋನ್ ಕಟ್ಟಿಕೊಂಡು ಎಐಗಾಗಿ ಇಗೋ ಸೆಂಟ್ರಿಕ್ ಡೇಟಾ ಕಲೆಕ್ಷನ್ ಮಾಡುತ್ತಿದ್ದು, ಗಂಟೆಗೆ 350 ರೂಪಾಯಿ, ತಿಂಗಳಿಗೆ 1,05,000 ಕ್ಕೂ ಹೆಚ್ಚು ಸಂಪಾದನೆ ಸುದ್ದಿ ವೈರಲ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಾಮಾನ್ಯ ತರಕಾರಿ ವ್ಯಾಪಾರಿಯೋರ್ವ (Vegetable Trading) ತಲೆ ಮೇಲೆ ಐಫೋನ್ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಖತ್ ಟ್ರೆಂಡ್ ಆಗಿದೆ (Viral Video). ನೇರ ವಿಷಯಕ್ಕೆ ಬರುವುದಾದರೆ, ಈ ಯುವಕ ಕೇವಲ ತರಕಾರಿ ವ್ಯಾಪಾರ ಮಾಡುತ್ತಿಲ್ಲ. ಇದರೊಂದಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) (Artificial intelligence) ಮಾಡೆಲ್ ಗಳಿಗೆ ಶಿಕ್ಷಣ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನು ಕಂಡು ಹಲವರು ಒಮ್ಮೆಗೆ ಅಚ್ಚರಿ ಹಾಗೂ ಗೊಂದಲಕ್ಕೆ ಒಳಗಾಗಿದ್ದಾರೆ.
ಹೌದು, ವೈಭವ್ ಎಂಬ ವ್ಯಕ್ತಿ ತಮ್ಮ ಇನ್ಸ್ಟಾದಲ್ಲಿ ಇಂತಹ ವಿಶೇಷ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ. ನಾನು ಸ್ಕೂಟಿಯಲ್ಲಿ ಹೋಗುತ್ತಿರಬೇಕಾದರೆ ಈ ವಿಶೇಷ ಸಿಸ್ಟಮ್ ಅನ್ನು ನೋಡಿದೆ. ಇದರೊಂದಿಗೆ ರಸ್ತೆ ಪಕ್ಕ ಬೈಕ್ ನಿಲ್ಲಿಸಿ ವಿಡಿಯೋ ಮಾಡಿ ವ್ಯಾಪಾರಿಯನ್ನು ಮಾತನಾಡಿದ್ದಾಗಿ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ತರಕಾರಿ ವ್ಯಾಪಾರಿ ತನ್ನ ತಲೆಗೆ ಒಂದು ರೀತಿಯ ಬೆಲ್ಟ್ ನೊಂದಿಗೆ ಸಾಧನವೊಂದನ್ನು ಅಳವಡಿಸಿಕೊಂಡಿದ್ದು, ಅದಕ್ಕೆ ಒಂದು ಐಫೋನ್, ಮೆಮೊರಿ ಡಿವೈಸ್ ಅಳವಡಿಕೆ ಮಾಡಿ ಧರಿಸಿದ್ದು, ಪ್ರತಿನಿತ್ಯದ ವ್ಯಾಪಾರವನ್ನು ಮುಂದುವರಿಸಿದ್ದಾರೆ. ಅಸಲಿಗೆ ಆತ ಏನು ಮಾಡುತ್ತಿದ್ದಾನೆ ಎಂಬ ಕುತೂಹಲದೊಂದಿಗೆ ವೈಭವ್ ಆ ಯುವಕನನ್ನು ಮಾತನಾಡಿಸಿದ್ದು, ಈ ವೇಳೆ ಊಹೆಗೂ ನಿಲುಕದ ಉತ್ತರ ಪಡೆದುಕೊಂಡಿದ್ದಾರೆ.
ಹೌದು, ರೊಬೊಟಿಕ್ಸ್, ಹ್ಯೂಮನಾಯ್ಡ್ (ಮನುಷ್ಯ ರೂಪದಲ್ಲಿರುವ ರೊಬೊ) ಗಳಿಗೆ ಎಐ ವ್ಯವಸ್ಥೆಗಳ ಅಭಿವೃದ್ಧಿಗೆ ಬೇಕಾಗಿರುವ ರಿಯಲ್ ವರ್ಲ್ಡ್ ಡೇಟಾ ಅನ್ನ ತಾನು ಶೇಖರಣೆ ಮಾಡುತ್ತಿರುವುದಾಗಿ ಯುವಕ ತಿಳಿಸಿದ್ದನಂತೆ. ಅಂದರೆ ಮನುಷ್ಯರು ಯಾವ ರೀತಿ ವರ್ತಿಸುತ್ತಾರೆ. ವಸ್ತುಗಳನ್ನು ಹೇಗೆ ಹಿಡಿದುಕೊಳ್ಳುತ್ತಾರೆ. ನಿತ್ಯದ ವ್ಯಾಪಾರಗಳು ಹೇಗೆ ನಡೆಯುತ್ತದೆ ಎಂಬುವುದನ್ನು ಲೈವ್ ಮೂಮೆಂಟ್ ಗಳೊಂದಿಗೆ ಫೋನ್ ರೆಕಾರ್ಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಮತ್ತೊಂದು ಅಚ್ಚರಿಯ ಸಂಗತಿ ಈ ವಿಡಿಯೋದಲ್ಲಿ ರಿವೀಲ್ ಆಗಿದ್ದು, ಈ ಡೇಟಾ ಕಲೆಕ್ಷನ್ ಕೆಲಸಕ್ಕೆ ಆ ತರಕಾರಿ ವ್ಯಾಪಾರಿ ಯುವಕನಿಗೆ ಆತನಿಗೆ ಸಂಬಳ ಕೂಡ ನೀಡಲಾಗುತ್ತಿದೆ. ಪೋಸ್ಟ್ ನಲ್ಲಿ ನೀಡಿರುವ ಮಾಹಿತಿಯಂತೆ, ಈ ವಿಶೇಷ ಕೆಲಸಕ್ಕೆ ವ್ಯಾಪಾರಿಗೆ ಒಂದು ಗಂಟೆಗೆ 350 ರೂಪಾಯಿ ನೀಡಲಾಗುತ್ತದೆ. ಒಂದು ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ, ದಿನಕ್ಕೆ 3500 ರೂಪಾಯಿ ಅಂದರೆ ತಿಂಗಳಿಗೆ ಬರೋಬ್ಬರಿ 1,05,000 ರೂಪಾಯಿಗೂ ಅಧಿಕ ಆದಾಯ ಸಿಗುತ್ತದೆ.
ತಲೆಯ ಮೇಲೆ ಒಂದು ಸ್ಮಾರ್ಟ್ ಫೋನ್ ಹಾಕಿಕೊಂಡು ಓಡಾಡುತ್ತಾ, ಕಾರ್ಪೊರೇಟ್ ಇಂಡಿಯಾದಲ್ಲಿರುವ ಅರ್ಧದಷ್ಟು ಸಾಫ್ಟ್ ವೇರ್ ಉದ್ಯೋಗಿಗಳಿಗಿಂತ ಈ ತರಕಾರಿ ವ್ಯಾಪಾರಿಯೇ ಹೆಚ್ಚು ಆದಾಯ ಗಳಿಸುತ್ತಿದ್ದಾನೆ ಎಂದು ವೈಭವ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದರ ಹಿಂದಿರುವ ಅಸಲಿಗೆ ತಂತ್ರಜ್ಞಾನ ಏನು ಅಂತ ನೆಟ್ಟಿಗರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ಇಗೋ ಸೆಂಟ್ರಿಕ್ ಡೇಟಾ ಕಲೆಕ್ಷನ್ ಎಂದು ಕರೆಯುತ್ತಾರೆ. ಐಫೋನ್ ನಲ್ಲಿರುವ ಲಿಡಾರ್ (LiDAR) ನಂತಹ ಆಧುನಿಕ ಸೆನ್ಸಾರ್ ಸಹಾಯದ ನೆರವಿನಿಂದ ಮನುಷ್ಯ ನಿತ್ಯ ಮಾಡುವ ಕೆಲಸಗಳಾದ ಅಡುಗೆ, ಬಟ್ಟೆ ಫೋಲ್ಡ್ ಮಾಡೋದು, ಪಾತ್ರೆ ತೊಳೆಯುವುದು, ವಸ್ತುಗಳನ್ನು ಅರೇಂಜ್ ಮಾಡುವುದಂತಹ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಫೋನ್ ಮೂಲಕ ರೆಕಾರ್ಡ್ ಮಾಡಲಾಗುತ್ತದೆ. ಈ ಡೇಟಾ ಮುಖ್ಯವಾಗಿ ಅಮೆರಿಕ ರೊಬೊಟಿಕ್ಸ್ ಕಂಪನಿಗಳು ಖರೀದಿ ಮಾಡುತ್ತವಂತೆ. ಅಲ್ಲದೇ ಮನುಷ್ಯನ ವರ್ತನೆಯನ್ನು ರೊಬೊಗಳು ನಿಖರವಾಗಿ ಕಾಪಿ ಮಾಡುವಂತೆ ಟ್ರೈನಿಂಗ್ ನೀಡಲು ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಎಐ ನಿಂದ ಜನರ ಕೆಲಸಗಳು ಊಹೆಗೂ ನಿಲುಕದ ರೀತಿಯಲ್ಲಿ ಬದಲಾಗುತ್ತವೆ ಎಂಬ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮನುಷ್ಯರು ಹೇಗೆ ಕೆಲಸ ಮಾಡ್ತಾರೆ ಎಐಗೆ ತರಬೇತಿ ನೀಡಲು ಇಲ್ಲಿ ಸಾಮಾನ್ಯ ಕಾರ್ಮಿಕರನ್ನು ಬಳಕೆ ಮಾಡುತ್ತಿರುವುದು ವಿಶೇಷ ಎಂದು ಹೇಳಬಹುದು.
Bangalore [Bangalore],Bangalore,Karnataka














