Last Updated:
ಬೆಂಗಳೂರು ಟ್ರಾಫಿಕ್ ಪೊಲೀಸ್ BTP ಹೊಸ AI ಆಧಾರಿತ ASTRAM ಆಪ್ ಲಾಂಚ್, ಲೈವ್ ಟ್ರಾಫಿಕ್ ಮ್ಯಾಪ್, ಅಲರ್ಟ್, ದೂರು, ಫೈನ್ ಪಾವತಿ, SOS, ಆಂಬ್ಯುಲೆನ್ಸ್ e-Path ಸೌಲಭ್ಯಗಳು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಜಗತ್ಪ್ರಸಿದ್ಧ. ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಕಷ್ಟಪಡುವ ವಾಹನ ಸವಾರರಿಗೆ ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಅತ್ಯಾಧುನಿಕ ತಂತ್ರಜ್ಞಾನದ ಬಂಪರ್ ಗಿಫ್ಟ್ ಒಂದನ್ನು ನೀಡಿದೆ! ಹೌದು, ನಗರದ ಸಂಚಾರ ದಟ್ಟಣೆಯನ್ನು ಸ್ಮಾರ್ಟ್ ಆಗಿ ನಿಯಂತ್ರಿಸಲು ಮತ್ತು ಸಾರ್ವಜನಿಕರ ಪ್ರಯಾಣವನ್ನು ಸುಲಭಗೊಳಿಸಲು ಬಿಟಿಪಿ ‘ASTRAM’ (Actionable Intelligence for Sustainable Traffic Management) ಎಂಬ ವಿನೂತನ AI-ಆಧಾರಿತ ಅಪ್ಲಿಕೇಶನ್ ಹಾಗೂ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದೆ.
ಇದು ಕೇವಲ ಸಾಮಾನ್ಯ ಮ್ಯಾಪ್ ಆಪ್ ಅಲ್ಲ; ಇದು ಬಿಗ್ ಡೇಟಾ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುವ ಒಂದು ಸಮಗ್ರ ಡಿಜಿಟಲ್ ವ್ಯವಸ್ಥೆಯಾಗಿದೆ. ಈ ಆಪ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ? ಇದನ್ನು ಬಳಸುವುದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ಗೈಡ್
‘ASTRAM’ ಅಪ್ಲಿಕೇಶನ್‌ನ ಸೂಪರ್ ಫೀಚರ್‌ಗಳು!
- ರಿಯಲ್-ಟೈಮ್ ಲೈವ್ ಟ್ರಾಫಿಕ್ ಮ್ಯಾಪ್: ಗೂಗಲ್ ಮ್ಯಾಪ್ಸ್‌ನಂತೆಯೇ ನಿಮ್ಮ ಪ್ರಸ್ತುತ ಲೊಕೇಶನ್ ಸುತ್ತಮುತ್ತಲಿನ ರಸ್ತೆಗಳ ಟ್ರಾಫಿಕ್ ಸ್ಥಿತಿಯನ್ನು ಬಣ್ಣಗಳ ಮೂಲಕ ಲೈವ್ ಆಗಿ ತೋರಿಸುತ್ತದೆ. ರಸ್ತೆ ಹಸಿರು ಬಣ್ಣದಲ್ಲಿದ್ದರೆ ಸುಲಭ ಸಂಚಾರ, ಹಳದಿ ಬಣ್ಣದಲ್ಲಿದ್ದರೆ ಮಧ್ಯಮ ಕಾಂಗೆಶನ್ ಹಾಗೂ ಕೆಂಪು ಬಣ್ಣದಲ್ಲಿದ್ದರೆ ಭಾರಿ ಟ್ರಾಫಿಕ್ ಜಾಮ್ ಇರುವುದನ್ನು ಸೂಚಿಸುತ್ತದೆ.
- ನಿಮ್ಮ ದಿನನಿತ್ಯದ ಮನೆ-ಕಚೇರಿ ರೂಟ್ ಅನ್ನು ಇದರಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು. ಆ ಹಾದಿಯಲ್ಲಿ ಏನಾದರೂ ಅಪಘಾತ, ರಸ್ತೆ ಕಾಮಗಾರಿ, ಪ್ರತಿಭಟನೆ ಅಥವಾ ರೋಡ್ ಬ್ಲಾಕ್ ಇದ್ದರೆ ತಕ್ಷಣವೇ ನಿಮ್ಮ ಮೊಬೈಲ್‌ಗೆ ಪುಶ್ ನೋಟಿಫಿಕೇಶನ್ ಅಲರ್ಟ್ ಬರುತ್ತದೆ.
- ಇದು ನಿಮ್ಮ ಸುತ್ತಲಿನ 5 ಕಿ.ಮೀ ರೇಡಿಯಸ್‌ನಲ್ಲಿ ನಡೆಯುವ ಅಪ್‌ಡೇಟ್‌ಗಳನ್ನು ನೀಡುತ್ತದೆ. ರಸ್ತೆಯಲ್ಲಿ ಸಣ್ಣಪುಟ್ಟ (Minor) ಅಪಘಾತಗಳಾದರೆ ಇನ್ನು ಮುಂದೆ ಪೊಲೀಸ್ ಸ್ಟೇಷನ್‌ಗೆ ಅಲೆಯಬೇಕಾಗಿಲ್ಲ!
- ಅಪಘಾತದ ಸ್ಥಳ, ಸಮಯ ಮತ್ತು ಫೋಟೋಗಳನ್ನು ಆಪ್‌ನಲ್ಲಿ ಅಪ್‌ಲೋಡ್ ಮಾಡಿದರೆ, ಇನ್ಶೂರೆನ್ಸ್ ಕ್ಲೈಮ್ ಮಾಡಲು ಬಳಸಬಹುದಾದ ತ್ವರಿತ ಅಕ್ನಾಲೆಜ್‌ಮೆಂಟ್ ಮತ್ತು ಯುನಿಕ್ ID/QR ಕೋಡ್ ಲಭ್ಯವಾಗುತ್ತದೆ.
- ರಸ್ತೆಯಲ್ಲಿ ಯಾರಾದರೂ ಸಿಗ್ನಲ್ ಜಂಪ್ ಮಾಡಿದರೆ, ಹೆಲ್ಮೆಟ್ ಧರಿಸದಿದ್ದರೆ, ತಪ್ಪು ಪಾರ್ಕಿಂಗ್ ಅಥವಾ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದರೆ ಸಾರ್ವಜನಿಕರೇ ಫೋಟೋ/ವೀಡಿಯೋ ತೆಗೆದು ಆಪ್ ಮೂಲಕ ದೂರು ದಾಖಲಿಸಬಹುದು.
- ಕಾಲೇಜು ವಿದ್ಯಾರ್ಥಿಗಳಿಗಾಗಿ ‘Police Marshals’ ಎಂಬ ವಿಶೇಷ ಲಾಗಿನ್ ವ್ಯವಸ್ಥೆಯೂ ಇಲ್ಲಿದೆ. ನಿಮ್ಮ ವಾಹನದ ಮೇಲಿರುವ ಟ್ರಾಫಿಕ್ ದಂಡಗಳನ್ನು (Fines) ಸುಲಭವಾಗಿ ಪರಿಶೀಲಿಸಬಹುದು ಮತ್ತು ಆನ್‌ಲೈನ್ ಮೂಲಕವೇ ಪಾವತಿಸಬಹುದು. ಒಂದು ವೇಳೆ ತಪ್ಪು ಫೈನ್ ಬಿದ್ದಿದ್ದರೆ ಅದರ ವಿರುದ್ಧ ಆಕ್ಷೇಪಣೆ (Dispute) ಸಲ್ಲಿಸುವ ಅವಕಾಶವೂ ಇದೆ.
- ರಸ್ತೆಯಲ್ಲಿ ಪ್ರಯಾಣಿಸುವಾಗ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತ್ವರಿತ ಸಹಾಯಕ್ಕಾಗಿ ಆಪ್‌ನಲ್ಲಿ SOS ಬಟನ್ ನೀಡಲಾಗಿದೆ.
ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ʼASTRAMʼ ಅಪ್ಲಿಕೇಶನ್ ತೆರೆಯಿರಿ (Android ಗಾಗಿ Google Play Store ಮತ್ತು iOS ಗಾಗಿ App Store ನಲ್ಲಿ “BTP ASTraM” ಎಂದು ಸರ್ಚ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು). ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಮಾಡಿ ಅಥವಾ ‘ಗೆಸ್ಟ್ ಮೋಡ್’ ಮೂಲಕವೂ ಬಳಸಬಹುದು. ಹೋಮ್ ಸ್ಕ್ರೀನ್‌ನಲ್ಲಿಯೇ ನಿಮಗೆ Live Traffic Map ಕಾಣಿಸುತ್ತದೆ. ಅಲ್ಲಿ ಜೂಮ್ ಇನ್ ಅಥವಾ ಔಟ್ ಮಾಡಿ ಆಯಾ ಏರಿಯಾದ ಟ್ರಾಫಿಕ್ ಸ್ಥಿತಿ (ಹಸಿರು/ಹಳದಿ/ಕೆಂಪು ಬಣ್ಣ) ತಿಳಿಯಬಹುದು. ಮೆನುವಿನಲ್ಲಿರುವ My Routes ಗೆ ಹೋಗಿ ನಿಮ್ಮ ದಿನನಿತ್ಯದ ದಾರಿಯನ್ನು ಸೇವ್ ಮಾಡಿಟ್ಟುಕೊಳ್ಳಿ. ಯಾವುದೇ ಪ್ರಮುಖ ಈವೆಂಟ್ ಅಥವಾ ರೋಡ್ ಬ್ಲಾಕ್ ವಿವರಗಳಿಗಾಗಿ ಮೇಲಿನ ಬಾರ್‌ನಲ್ಲಿರುವ Traffic Alerts ಅಥವಾ Live Updates ಆಯ್ಕೆಯನ್ನು ಕ್ಲಿಕ್ ಮಾಡಿ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಈ ಆಧುನಿಕ ಪ್ಲಾಟ್‌ಫಾರ್ಮ್ ಅನ್ನು ಡೇಟಾ ಅನಾಲಿಟಿಕ್ಸ್ ಮತ್ತು AI ಮಾಡೆಲಿಂಗ್‌ನಲ್ಲಿ ಪರಿಣತಿ ಹೊಂದಿರುವ ಡಚ್ ಕಂಪನಿ ‘Arcadis’ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಇದು ನಗರದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳಿಂದ ಡೇಟಾ ಪಡೆದು ಟ್ರಾಫಿಕ್ ಜ್ಯಾಮ್ ಆಗುವುದನ್ನು ಮುಂಚಿತವಾಗಿಯೇ ಊಹಿಸುತ್ತದೆ . ಅಷ್ಟೇ ಅಲ್ಲ, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಿಗೆ ಆದ್ಯತೆ ನೀಡಿ ಸಿಗ್ನಲ್‌ಗಳನ್ನು ಕ್ಲಿಯರ್ ಮಾಡಲು ಇದರಲ್ಲಿ ‘e-Path’ (ಗ್ರೀನ್ ಕಾರಿಡಾರ್) ವೈಶಿಷ್ಟ್ಯವನ್ನು ನೀಡಲಾಗಿದೆ.
ನೀವೇನು ಮಾಡಬೇಕು?
ಆಪ್ ಸರಿಯಾಗಿ ಕೆಲಸ ಮಾಡಲು ನಿಮ್ಮ ಮೊಬೈಲ್‌ನ ‘ಲೊಕೇಶನ್ ಪರ್ಮಿಷನ್’ (GPS) ಆನ್ ಇಟ್ಟಿರುವುದನ್ನು ಖಚಿತಪಡಿಸಿಕೊಳ್ಳಿ. ದೊಡ್ಡ ಕ್ರಿಕೆಟ್ ಪಂದ್ಯಗಳು, ರಾಜಕೀಯ ರ್ಯಾಲಿಗಳು ಅಥವಾ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ಆಪ್‌ನ ಟ್ರಾಫಿಕ್ ಪ್ರೆಡಿಕ್ಷನ್ ನಿಮಗೆ ಫರ್ಫೆಕ್ಟ್ ರೂಟ್ ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಿಮ್ಮ ಅಮೂಲ್ಯವಾದ ಸಮಯ ಮತ್ತು ಇಂಧನವನ್ನು ಉಳಿಸಲು ಈ ಆಪ್ ಅತ್ಯುತ್ತಮ ಟೂಲ್ ಆಗಿದೆ. ತಕ್ಷಣವೇ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಬೆಂಗಳೂರಿನ ಸ್ನೇಹಿತರೊಂದಿಗೆ ಶೇರ್ ಮಾಡಿ!
Bangalore [Bangalore],Bangalore,Karnataka
May 27, 2026 12:02 PM IST













