Last Updated:
ಅದೊಂದು ಪಕ್ಕಾ ಫ್ರೀ ಪ್ಲಾನ್ಡ್ ಮರ್ಡರ್. ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಗ್ಯಾಂಗ್, ಹೊಂಚು ಹಾಕಿ ಹೆಣ ಉರುಳಿಸಿದೆ. ತಾವೇ ಅಪಘಾತ ಮಾಡಿ, ತಾವೇ ಆಸ್ಪತ್ರೆಗೆ ಸೇರಿಸೋ ನಾಟಕ ಆಡಿದವ್ರು ಅಂದರ್ ಆಗಿದ್ದಾರೆ.
ಬೆಂಗಳೂರು: ಆಗ ತಾನೇ ಕತ್ತಲು ಆವರಿಸಿತ್ತು. ರಸ್ತೆ ತುಂಬೆಲ್ಲಾ ವಾಹನಗಳು (Busy Traffic) ಓಡಾಡ್ತಿದ್ವು. ನೂರಾರು ಜನರಿದ್ದ ಏರಿಯಾ ಬೇರೆ. ಇಂತಾ ಜಾಗದಲ್ಲೇ ಹೇಗೆ ಹೊಂಚು ಹಾಕಿ ಹೊಡೆದಿದ್ದಾರೆ ನೋಡಿ. ಈ ಭೀಕರ ಅಪಘಾತದ (Accident) ದೃಶ್ಯ ನೋಡ್ತಿದ್ರೆ, ಇದೊಂದು ಪಕ್ಕಾ ಆ್ಯಕ್ಸಿಡೆಂಟೇ ಅಂತಾ ಎಲ್ರೂ ಅಂದ್ಕೊಳ್ತಾರೆ. ಆದರೆ ಇದರ ಹಿಂದಿನ ಕಥೆಯೇ ಬೇರೆ ಇದೆ. ನೋಡೋದಕ್ಕೆ ಆ್ಯಕ್ಸಿಡೆಂಟ್ ರೀತಿ ಕಂಡರೂ, ಹಂತಕರು ಹೊಂಚು ಹಾಕಿ ಜೀವ ತೆಗೆದಿದ್ದಾರೆ (Bengaluru Police). ಆ್ಯಕ್ಸಿಡೆಂಟ್ ರೂಪದಲ್ಲಿ ಹೆಣ್ಮಗಳ (Woman) ಜೀವ ತೆಗೆದವರಿಗೆ ಪೊಲೀಸರು ಕಂಬಿ ತೊಡೆಸಿದ್ದಾರೆ.
ಇದೊಂಥರ ಸಿನಿಮಾ ಶೈಲಿಯ ಖದೀಮರ ಕರಾಮತ್ತು. ಪಕ್ಕಾ ಬ್ಲ್ಯೂ ಪ್ರಿಂಟ್ ರೆಡಿ ಮಾಡ್ಕೊಂಡೇ ಸಂಚು ರೂಪಿಸೋ ಹಂತಕರ ಗ್ಯಾಂಗ್. ಈ ಹೆಣ್ಮಗಳ ಹೆಸರು ವಿಜಯಲಕ್ಷ್ಮಿ ಅಂತಾ. ಮಹಾಲಕ್ಷ್ಮಿ ಲೇಔಟ್ ನಿವಾಸಿ. ಒಬ್ಬಂಟಿಯಾಗಿದ್ದ ಹೆಣ್ಮಗಳಿಗೆ ಹಿಂದೆ ಮುಂದೆ ಇರ್ಲಿಲ್ಲ. ಅಲ್ಲದೆ ಸ್ವಲ್ಪ ಹಣದ ಜೊತೆಗೆ ಚಿನ್ನಾಭರಣವನ್ನೂ ಇಟ್ಕೊಂಡಿದ್ದರು. ಇದೇ ನೋಡಿ ಇವ್ರ ಜೀವ ತೆಗೆಯುವಂತೆ ಮಾಡಿದ್ದು. ಆರೋಪಿ ಚೇತನ್ ಅನ್ನೋ ಈ ಒಂಟಿ ಹೆಣ್ಮಗಳ ಮೇಲೆ ಕಣ್ಣಿಟ್ಟಿದ್ದ. ಇವರ ಮನೆಗೆ ಹೊಕ್ಕರೆ ಒಂದೊಳ್ಳೆ ಗಂಟನ್ನೇ ಕೊಳ್ಳೆ ಹೊಡೀಬಹುದು ಅಂತಾ ಪ್ಲ್ಯಾನ್ ರೂಪಿಸಿದ್ದ. ಹೀಗಾಗಿಯೇ ನಾಲ್ಕೈದು ಜನರ ಗ್ಯಾಂಗ್ ಕಟ್ಟಿದ್ದಾನೆ. ವಿಜಯಲಕ್ಷ್ಮಿ ಎಲ್ಲಿಗೆ ಹೋಗ್ತಾಳೆ. ಎಷ್ಟೊತ್ತಿಗೆ ಹೊರ ಬರ್ತಾಳೆ ಅನ್ನೋದನ್ನೆಲ್ಲಾ ಸ್ಟಡಿ ಮಾಡಿದ್ದಾರೆ. ನಂತರ 21ನೇ ತಾರೀಖು ವಿಜಯಲಕ್ಷ್ಮಿ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದಳು. ಆಗಲೇ ನೋಡಿ ಹಂತಕ ಪಡೆ ಅಟ್ಟಹಾಸ ಮೆರೆದಿದ್ದು.
ರಸ್ತೆ ಬಡಿ ನಡೆದುಕೊಂಡು ಹೋಗ್ತಿದ್ದವ ವೇಳೆ ಹಿಂದಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಹಾರಿ ಬಿದ್ದವ್ಳು ಅಲ್ಲೇ ಒದ್ದಾಡಿ ಹೋಗಿದ್ಲು. ಇದೇ ಹೊತ್ತಲ್ಲೇ ಹೆಣ್ಮಗಳನ್ನ ಸುತ್ತುವರಿದ ಇನ್ನುಳಿದ ಹಂತಕರು ಆಸ್ಪತ್ರೆಗೆ ಸೇರಿಸೋ ನಾಟಕವಾಡಿದ್ದಾರೆ. ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದರು. ಇದರ ಮದ್ಯೆಯೇ ಆರೋಪಿ ಮಂಜುನಾಥ ವಿಜಯಲಕ್ಷ್ಮಿ ಬ್ಯಾಗ್‌ನಲ್ಲಿದ್ದ ಕೀ ಎತ್ಕೊಂಡು ಅಸಲಿ ಆಟ ಶುರು ಮಾಡಿದ್ದ. ಆ ಕಡೆ ಒಂದಿಷ್ಟು ಮಂದಿ ಗಾಯಾಳುವನ್ನ ಆಸ್ಪತ್ರೆ ಸೇರಿಸಿದರೆ, ಈ ಕಡೆ ಮಂಜುನಾಥ ವಿಜಯಲಕ್ಷ್ಮಿಯ ಮನೆಗೆ ಬಂದಿದ್ದಾನೆ.
ಆರೋಪಿ ಮಂಜುನಾಥ್
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯರಾದ ಚಂದ್ರಶೇಖರ್, ಅಪಘಾತ ಆದ ಅರ್ಧ ಗಂಟೆ ಬಳಿಕ ಹುಡುಗರು ಬಂದು ಮನೆ ಸರ್ಚ್ ಮಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಹುಡುಗರನ್ನು ವಿಚಾರ ಮಾಡಿದ ವೇಳೆ ಆಧಾರ್ ಕಾರ್ಡ್ ಬೇಕು ಅಂತ ನಾಟಕ ಮಾಡಿದ್ದರಂತೆ. ಅಪಘಾತ ಆಯ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈಗ ಯಾಕೆ ಬಂದರೂ ಎಂಬ ಅನುಮಾನ ಎದುರಾಗಿತ್ತಂತೆ ಎಂದು ತಿಳಿಸಿದ್ದಾರೆ.
ಹೆಣ್ಮಗಳ ಬಾಡಿಗೆ ಮನೆಗೆ ಬಂದ ಮಂಜುನಾಥ, ಮನೆ ಕೀ ತೆಗೆದು ಸಿಕ್ಕಸಿಕ್ಕ ವಸ್ತುಗಳನ್ನ ಹುಡುಕಾಡೋದಕ್ಕೆ ಶುರು ಮಾಡಿದ್ದ. ಇದನ್ನ ನೋಡಿದ ಮನೆ ಮಾಲೀಕನಿಗೆ ಅನುಮಾನ ಬಂದಿದೆ. ಯಾರು ನೀನು ಅಂತಾ ಪ್ರಶ್ನಿಸ್ತಿದ್ದಂತೆ ನಾನು ವಿಜಯಲಕ್ಷ್ಮಿ ಕಡೆಯವ್ನು. ಆಸ್ಪತ್ರೆಗೆ ದಾಖಲಿಸಲು ಆಧಾರ್ ಕಾರ್ಡ್ ಬೇಕಿತ್ತು. ಹೀಗಾಗಿ ಹುಡುಕಾಡ್ತಿದ್ದೇನೆ ಎಂದಿದ್ದ. ಆದರೆ, ಅದ್ಯಾಕೋ ಮನೆ ಮಾಲೀಕರಿಗೆ ಅನುಮಾನ ಹೋಗಿರ್ಲಿಲ್ಲ. ಹೀಗಾಗಿ ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಯಾವಾಗ ಖಾಕಿ ಪಡೆ ಎಂಟ್ರಿಕೊಡ್ತೋ ಅಸಲಿ ಕಹಾನಿ ತೆರೆದುಕೊಂಡಿದೆ. ಮಂಜುನಾಥನನ್ನ ಎತ್ತಾಕೊಂಡು ಹೋಗಿ ತನಿಖೆ ಮಾಡ್ತಿದ್ದಂತೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.
ಉತ್ತರ ವಿಭಾಗ ಡಿಸಿಪಿ ನೇಮಗೌಡ
ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉತ್ತರ ವಿಭಾಗ ಡಿಸಿಪಿ ನೇಮಗೌಡ, ಒಂಟಿ ಮಹಿಳೆಯಾಗಿದ್ದ ವಿಜಯಲಕ್ಷ್ಮೀ ಅವರ ಬಳಿ ಇದ್ದ ಹಣ, ಚಿನ್ನ ತೆಗೆದುಕೊಂಡು ಹೋಗಲು ಸಂಚು ಮಾಡಿರೋದು ಗೊತ್ತಾಗಿದೆ. ಈ ತಂಡದ ಸದಸ್ಯ ಮನೆಯ ಬಳಿ ಬಂದಿರೋದರ ಬಗ್ಗೆ ದೂರು ಬಂದಿತ್ತು. ಇದರಂತೆ ತನಿಖೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ ಎಂದು ವಿವರಿಸಿದ್ದಾರೆ.
ಇನ್ನು ಪೊಲೀಸರ ಕೈಯಲ್ಲಿ ಬಂಧಿಯಾಗಿದ್ದ ಮಂಜುನಾಥ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾನೆ. ಪೊಲೀಸರ ವಶದಲ್ಲಿರುವಾಗಲೇ ಉಸಿರು ನಿಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಇನ್ನೊಂದ್ಕಡೆ 2 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ ವಿಜಯಲಕ್ಷ್ಮಿ ಕೂಡಾ ಜೀವ ಬಿಟ್ಟಿದ್ದಾಳೆ. ಒಟ್ಟಿನಲ್ಲಿ ಹಂತಕರ ಹಣದ ಆಸೆಗೆ ಒಂಟಿ ಹೆಣ್ಮಗಳು ಪ್ರಾಣ ಕಳ್ಕೊಂಡಿದ್ದು ಮಾತ್ರ ದುರಂತ. (ವರದಿ: ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18, ಬೆಂಗಳೂರು)
Bangalore [Bangalore],Bangalore,Karnataka
May 09, 2026 11:47 AM IST













