Bengaluru: ಅರಮನೆ ನೋಡೋಕೆ ಮೈಸೂರಿಗೇ ಹೋಗಬೇಕಿಲ್ಲ, ಮೆಜೆಸ್ಟಿಕ್ ಇಂದ 2 ಮೈಲಿ ದೂರದಲ್ಲಿದೆ 18ನೇ ಶತಮಾನದ ಅದ್ಭುತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಟಿಪ್ಪು


Last Updated:

ಬೆಂಗಳೂರು ಕೆ.ಆರ್ ಮಾರುಕಟ್ಟೆ ಹತ್ತಿರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಇಂಡೋ ಇಸ್ಲಾಮಿಕ್ ಶೈಲಿ, ವಸ್ತುಸಂಗ್ರಹಾಲಯ, ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರವಾಸಿಗರ ಆಕರ್ಷಣೆಯಾಗಿದೆ.

+

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ

ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ (Bengaluru KR Market) ಹತ್ತಿರವಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ನಗರದ (Tipu Sultan Summer Palace) ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುತ್ತಲೂ ಸದಾ ವಾಹನಗಳ ಟ್ರಾಫಿಕ್, ವ್ಯಾಪಾರಿಗಳ ಗದ್ದಲ ಮತ್ತು ಮೆಟ್ರೋ ರೈಲಿನ ಸದ್ದು (Namma Metro) ಇರುತ್ತದೆ. ಆದರೆ, ಈ ಅರಮನೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಒಂದು ರೀತಿಯ ಪ್ರಶಾಂತತೆ ಸಿಗುತ್ತದೆ. ಪ್ರಮುಖವಾಗಿ ತೇಗದ ಮರದಿಂದಲೇ ನಿರ್ಮಿಸಲಾದ ಈ ಸುಂದರ ಅರಮನೆಯು ನಮ್ಮನ್ನು ನೇರವಾಗಿ 18ನೇ ಶತಮಾನದ ಮೈಸೂರು ಸಾಮ್ರಾಜ್ಯದ (Mysuru Kings) ಕಾಲಕ್ಕೆ ಕರೆದೊಯ್ಯುತ್ತದೆ. ಸಿಲಿಕಾನ್ ಸಿಟಿಯ ಕಾಂಕ್ರೀಟ್ ಕಟ್ಟಡಗಳ ನಡುವೆ ಈ ಅಪರೂಪದ ಮರದ ಅರಮನೆಯ ಒಂದು ಕಿರು ಪರಿಚಯ ಇಲ್ಲಿದೆ.

ಕಣ್ಣಿಗೆ ಕಟ್ಟುವ ತೇಗದ ಮರದ ಕಲಾಕೃತಿ

ಅರಮನೆಯ ಆವರಣ ಪ್ರವೇಶಿಸುತ್ತಿದ್ದಂತೆ ಮೊದಲು ನಮ್ಮನ್ನು ಸೆಳೆಯುವುದು ಅದರ ಭವ್ಯವಾದ ಮುಂಭಾಗ. ಕಲ್ಲು ಅಥವಾ ಸಿಮೆಂಟ್ ಕಟ್ಟಡಗಳನ್ನು ನೋಡಿ ರೂಢಿಯಾದ ನಮಗೆ, ಸಂಪೂರ್ಣವಾಗಿ ತೇಗದ ಮರದಿಂದ ನಿರ್ಮಿಸಲಾದ ಈ ಎರಡು ಅಂತಸ್ತಿನ ಅರಮನೆ ಅಚ್ಚರಿ ಮೂಡಿಸುತ್ತದೆ. ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಕೆತ್ತಲಾದ ಬೃಹತ್ ಸ್ತಂಭಗಳು ಮತ್ತು ಸುಂದರ ಕಮಾನುಗಳು ರಜಪೂತ ಮತ್ತು ಮೊಘಲ್ ಸಂಸ್ಕೃತಿಯ ಸಮ್ಮಿಲನದಂತೆ ಕಾಣುತ್ತವೆ. ಮರದ ಕಂಬಗಳ ಮೇಲೆ ಬಿಡಿಸಲಾದ ಹೂವಿನ ವಿನ್ಯಾಸಗಳನ್ನು ಕೈಯಿಂದ ಮುಟ್ಟಿ ಅನುಭವಿಸುವುದೇ ಒಂದು ರೋಮಾಂಚನ. ಅಂದಿನ ಕಾಲದಲ್ಲಿ ಇದನ್ನು ‘ರಶ್ಕ್-ಎ-ಜನ್ನತ್’ (ಸ್ವರೂಪದಲ್ಲಿ ಸ್ವರ್ಗದಂತೆ ಇರುವ ತಾಣ) ಎಂದು ಕರೆಯುತ್ತಿದ್ದರು.

ರಾಜ ಗಾಂಭೀರ್ಯದ ದರ್ಬಾರ್ ಹಾಲ್

ಮೆಟ್ಟಿಲುಗಳನ್ನು ಹತ್ತಿ ಮೇಲಿನ ಅಂತಸ್ತಿಗೆ ಹೋದಾಗ ವಿಶಾಲವಾದ ದರ್ಬಾರ್ ಹಾಲ್ ನಮ್ಮನ್ನು ಸ್ವಾಗತಿಸುತ್ತದೆ. ಎರಡು ಬದಿಯ ಬಾಲ್ಕನಿಗಳಲ್ಲಿ ನಿಂತು ನೋಡಿದಾಗ, ಅಂದು ಟಿಪ್ಪು ಸುಲ್ತಾನ್ ತನ್ನ ಮಂತ್ರಿಗಳೊಂದಿಗೆ ಕುಳಿತು ಪ್ರಜೆಗಳ ಅಹವಾಲು ಆಲಿಸುತ್ತಿದ್ದ ದೃಶ್ಯ ಕಣ್ಣಮುಂದೆ ಸುಳಿದುಹೋಗುತ್ತದೆ. ಇಲ್ಲಿನ ಗೋಡೆಗಳ ಮೇಲಿನ ಬಣ್ಣಗಳು ಕೊಂಚ ಮಸುಕಾಗಿದ್ದರೂ, ಅಂದಿನ ಕಾಲದ ರಾಜವೈಭೋಗದ ಕಥೆಯನ್ನು ಇಂದಿಗೂ ಸಾರುತ್ತಿವೆ.

ಇತಿಹಾಸದ ಪುಟಗಳನ್ನು ತೆರೆಯುವ ವಸ್ತುಸಂಗ್ರಹಾಲಯ

ಅರಮನೆಯ ಕೆಳಮಹಡಿಯ ಕೋಣೆಗಳನ್ನು ಈಗ ಒಂದು ಸುಂದರ ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಅಲ್ಲಿ ಹೆಜ್ಜೆ ಇಡುತ್ತಿದ್ದಂತೆ ಯುದ್ಧದ ದಿನಗಳ ತೀವ್ರತೆ ನಮಗೆ ಅರಿವಾಗುತ್ತದೆ. ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿ ಬಳಸುತ್ತಿದ್ದ ಅಂದಿನ ಕಾಲದ ನಾಣ್ಯಗಳು, ಪರ್ಷಿಯನ್ ಭಾಷೆಯ ಶಾಸನಗಳು ಇತಿಹಾಸದ ಆಸಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯನ್ನು ತಲುಪುವುದು ಹೇಗೆ?

ಟಿಪ್ಪು ಬೇಸಿಗೆ ಅರಮನೆಯು ಬೆಂಗಳೂರಿನ ಮೆಜೆಸ್ಟಿಕ್‌ನಿಂದ 4 ಕಿಲೋ ಮೀಟರ್ ದೂರವಿದ್ದು, ಅಲ್ಲಿಂದ ನಿಮಗೆ ಬಿಎಂಟಿಸಿ ಬಸ್ ವ್ಯವಸ್ಥೆಯಿದ್ದು ಬಸ್ ಮೂಲಕ ನೀವು ತಲುಪಬಹುದು. ಕೆ.ಆರ್. ಮಾರುಕಟ್ಟೆಯ ಬಸ್ ನಿಲ್ದಾಣದಿಂದ 1.5 ಕಿಲೋ ಮೀಟರ್ ದೂರವಿದ್ದು, ಕೆ.ಆರ್. ಮಾರುಕಟ್ಟೆಯ ಬಸ್ ನಿಲ್ದಾಣದಿಂದ ನಿಮಗೆ ಆಟೋ ಸೇವೆಗಳು ಲಭ್ಯವಿರುತ್ತದೆ. ನಿಮಗೆ ಬಸ್‌ನ ಗೊಂದಲ ಉಂಟಾದಲ್ಲಿ ರಾಪಿಡೋ, ಊಬರ್ ಬುಕ್ ಮಾಡಿಕೊಂಡು ತೆರಳುವುದು ಉತ್ತಮ.

ಟಿಪ್ಪು ಬೇಸಿಗೆಯ ಅರಮನೆಯು ಈಗ ಪುರಾತತ್ವ ಇಲಾಖೆಯ ಅಧೀನದಲ್ಲಿರುವುದರಿಂದ ಅರಮನೆಯನ್ನು ಪ್ರವೇಶಿಸಲು ಟಿಕೆಟನ್ನು ಖರೀದಿಮಾಡಬೇಕು. ಟಿಕೆಟನ್ನು ಖರೀದಿ ಮಾಡಲು ಪ್ರವೇಶ ದ್ವಾರದಲ್ಲಿ ಒಂದು ಕ್ಯೂ.ಆರ್. ಕೋಡನ್ನು ಇರಿಸಿರುತ್ತಾರೆ. ಆ ಕ್ಯೂ.ಆರ್. ಕೋಡ್ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಭಾರತೀಯರಿಗೆ ಟಿಕೆಟ್ ದರವನ್ನು 20 ರೂಪಾಯಿ ಮತ್ತು ವಿದೇಶಿ ಪ್ರವಾಸಿಗರಿಗೆ 200 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.

ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ

ಅರಮನೆಯ ಪಕ್ಕದಲ್ಲೇ ಇರುವ ಮತ್ತೊಂದು ಐತಿಹಾಸಿಕ ಮತ್ತು ಧಾರ್ಮಿಕ ಪ್ರಮುಖ ತಾಣವೆಂದರೆ “ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ”. ಈ ದೇವಸ್ಥಾನವು ಅಂದಿನ ಬೆಂಗಳೂರು ಕೋಟೆಯ ಆವರಣದಲ್ಲೇ ಇದ್ದಿದ್ದರಿಂದ ಇದಕ್ಕೆ “ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ” ಎಂಬ ಹೆಸರು ಬಂದಿದೆ. ಟಿಪ್ಪು ಸುಲ್ತಾನ್ ಕಾಲದ ಯುದ್ಧಗಳ ಸಂದರ್ಭದಲ್ಲಿ ಈ ದೇವಾಲಯದ ಗೋಡೆಗಳಿಗೆ ಹಾನಿಯಾಗಿದ್ದ ಕುರುಹುಗಳನ್ನು ಇಂದಿಗೂ ಕಾಣಬಹುದು. ನೀವು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ ಭೇಟಿ ನೀಡಿದಾಗ, ಅದರ ಪಕ್ಕದಲ್ಲೇ ಕೃಷ್ಣ ರಾಜೇಂದ್ರ (ಕೆ.ಆರ್) ರಸ್ತೆಯಲ್ಲಿರುವ ಈ ಶಾಂತಿಯುತ ಹಾಗೂ ಐತಿಹಾಸಿಕ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೂ ತಪ್ಪದೇ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed