Bangladesh: ಢಾಕಾ ವಿಶ್ವವಿದ್ಯಾಲಯದಲ್ಲಿ ‘ಜಿನ್ನಾ’ ಫೋಟೋ ಪ್ರದರ್ಶನ! ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಢಾಕಾ ವಿಶ್ವವಿದ್ಯಾಲಯ


Last Updated:

ಜಮಾತ್-ಎ-ಇಸ್ಲಾಮಿ ಬೆಂಬಲಿತ ‘ಇಸ್ಲಾಮಿ ಛಾತ್ರ ಶಿಬಿರ್’ ವಿದ್ಯಾರ್ಥಿ ಸಂಘಟನೆಯ ಹಿಡಿತದಲ್ಲಿರುವ DUCSU ಮಂಡಳಿಯ ಈ ನಡೆಯ ವಿರುದ್ಧ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಢಾಕಾ ವಿಶ್ವವಿದ್ಯಾಲಯ
ಢಾಕಾ ವಿಶ್ವವಿದ್ಯಾಲಯ

ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದ (Dhaka University) DUCSU ಮ್ಯೂಸಿಯಂನಲ್ಲಿ ದೇಶದ ರಾಷ್ಟ್ರಪಿತ ಹಾಗೂ ವಿಮೋಚನಾ ನಾಯಕ ಶೇಖ್ ಮುಜಿಬುರ್ ರೆಹಮಾನ್ (Sheikh Mujibur Rahman) ಅವರ ಭಾವಚಿತ್ರಗಳನ್ನು ತೆರವುಗೊಳಿಸಿ, ಅವರ ಜಾಗದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ (Muhammad Ali Jinnah) ಅವರ ಫೋಟೋಗಳನ್ನು ಅಳವಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಮಾತ್-ಎ-ಇಸ್ಲಾಮಿ ಬೆಂಬಲಿತ ‘ಇಸ್ಲಾಮಿ ಛಾತ್ರ ಶಿಬಿರ್’ ವಿದ್ಯಾರ್ಥಿ ಸಂಘಟನೆಯ ಹಿಡಿತದಲ್ಲಿರುವ DUCSU ಮಂಡಳಿಯ ಈ ನಡೆಯ ವಿರುದ್ಧ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿನ್ನಾ ಫೋಟೋಗಳನ್ನು ಹರಿದುಹಾಕಿದ ಘಟನೆಯೂ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಂಗ್ಲಾದೇಶದ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಢಾಕಾ ವಿಶ್ವವಿದ್ಯಾಲಯದ DUCSU ಮ್ಯೂಸಿಯಂ ಅನ್ನು ಇತ್ತೀಚೆಗೆ ನವೀಕರಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಈ ಮ್ಯೂಸಿಯಂನಲ್ಲಿದ್ದ ಬಾಂಗ್ಲಾದೇಶದ ಸ್ವತಂತ್ರ ಹೋರಾಟ, 1952ರ ಭಾಷಾ ಚಳವಳಿ, 1966ರ ಆರು ಅಂಶಗಳ ಚಳವಳಿ ಹಾಗೂ 1971ರ ಮಾರ್ಚ್ 7ರ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ಭಾಷಣದ ಪ್ರಮುಖ ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ.

ಜಿನ್ನಾ ಅವರ ಫೋಟೋಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಿದ್ದನ್ನು ನೋಡಿ ಆಕ್ರೋಶಗೊಂಡ ಅಬು ತಯ್ಯಬ್ ಹಬಿಲ್ದಾರ್ ಎಂಬ ವಿದ್ಯಾರ್ಥಿ ನೇರವಾಗಿ ಮ್ಯೂಸಿಯಂಗೆ ನುಗ್ಗಿ, ಗೋಡೆಯ ಮೇಲಿದ್ದ ಜಿನ್ನಾ ಅವರ ಮೂರೂ ಭಾವಚಿತ್ರಗಳನ್ನು ಕಿತ್ತು ಹರಿದುಹಾಕಿದ್ದಾನೆ. “ಬಂಗಾಳಿ ಭಾಷೆಯನ್ನು ವಿರೋಧಿಸಿ, ಢಾಕಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಬಂಧನಕ್ಕೆ ಆದೇಶಿಸಿದ್ದ ಜಿನ್ನಾಗೆ ಈ ಮ್ಯೂಸಿಯಂನಲ್ಲಿ ಜಾಗವಿಲ್ಲ” ಎಂದು ವಿದ್ಯಾರ್ಥಿ ಗರ್ಜಿಸಿದ್ದಾನೆ. ಜೊತೆಗೆ ಬಿಎನ್‌ಪಿ ಬೆಂಬಲಿತ ‘ಜಾತೀಯತಾವಾದಿ ಛಾತ್ರ ದಳ’ ಕೂಡ ಈ ನಡೆಯನ್ನು ಉಗ್ರವಾಗಿ ಖಂಡಿಸಿದ್ದು, “ಶಿಬಿರ್ ನಿಯಂತ್ರಣದ DUCSU ಮಂಡಳಿಯು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಆಶಯಗಳನ್ನು ಬಲಿಕೊಟ್ಟು ಪಾಕಿಸ್ತಾನದ ಮೇಲಿನ ತನ್ನ ಪ್ರೇಮವನ್ನು ಪ್ರದರ್ಶಿಸುತ್ತಿದೆ” ಎಂದು ಆರೋಪಿಸಿದೆ.

ಇನ್ನೊಂದೆಡೆ, ಈ ಘಟನೆಯನ್ನು ಢಾಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿಶ್ವವಿದ್ಯಾಲಯದ ಅನುಮತಿ ಇಲ್ಲದೆ ಇಂತಹ ಪ್ರದರ್ಶನಗಳನ್ನು ಏರ್ಪಡಿಸಿ, ‘ಸಮಾಂತರ ಆಡಳಿತ’ ನಡೆಸಲು ಯತ್ನಿಸುತ್ತಿರುವ DUCSU ವಿದ್ಯಾರ್ಥಿ ಒಕ್ಕೂಟದ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.

ಮೂರು ಪ್ರತ್ಯೇಕ ತನಿಖಾ ಸಮಿತಿ

ಈ ಕುರಿತು ತನಿಖೆ ನಡೆಸಲು ವಿಶ್ವವಿದ್ಯಾಲಯವು ಮೂರು ಪ್ರತ್ಯೇಕ ತನಿಖಾ ಸಮಿತಿಗಳನ್ನು ರಚಿಸಿದೆ. ಅಂತರಾಷ್ಟ್ರೀಯ ಸಂಬಂಧಗಳ ವಿಭಾಗದ ಪ್ರಾಧ್ಯಾಪಕ ಮೊಹಮ್ಮದ್ ತಂಝೀಮುದ್ದೀನ್ ಖಾನ್ ಪ್ರತಿಕ್ರಿಯಿಸಿ, “ನವೀಕರಣದ ಹೆಸರಿನಲ್ಲಿ ಬಾಂಗ್ಲಾದೇಶದ ಸ್ವತಂತ್ರ ಹೋರಾಟದ ನಾಯಕರನ್ನು ಇತಿಹಾಸದಿಂದಲೇ ಅಳಿಸಿಹಾಕಲು ರಾಜಕೀಯ ಪ್ರೇರಿತ ಯತ್ನ ನಡೆಸಲಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಬಾಂಗ್ಲಾದೇಶದಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಗಳು ಮತ್ತು ಚಿತ್ರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆಯಾದರೂ, ಅವರ ಜಾಗದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಫೋಟೋಗಳನ್ನು ತಂದು ಕೂರಿಸುತ್ತಿರುವುದು ಬಾಂಗ್ಲಾದೇಶ ರಾಜಕೀಯ ಹಾಗೂ ಶೈಕ್ಷಣಿಕ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇತಿಹಾಸವನ್ನು ಮರುಬರೆಯುವ ಈ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಇನ್ಯಾವ ಮಟ್ಟದ ವಿದ್ಯಾರ್ಥಿ ಸಂಘರ್ಷಕ್ಕೆ ಹಾದಿಮಾಡಿಕೊಡಲಿವೆ ಎಂಬುದನ್ನು ಕಾದು ನೋಡಬೇಕಿದೆ.

(ವರದಿ: ಚೈತ್ರಾ ಹರೀಶ್, ನ್ಯೂಸ್ 18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed