Last Updated:
ಜಮಾತ್-ಎ-ಇಸ್ಲಾಮಿ ಬೆಂಬಲಿತ ‘ಇಸ್ಲಾಮಿ ಛಾತ್ರ ಶಿಬಿರ್’ ವಿದ್ಯಾರ್ಥಿ ಸಂಘಟನೆಯ ಹಿಡಿತದಲ್ಲಿರುವ DUCSU ಮಂಡಳಿಯ ಈ ನಡೆಯ ವಿರುದ್ಧ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದ (Dhaka University) DUCSU ಮ್ಯೂಸಿಯಂನಲ್ಲಿ ದೇಶದ ರಾಷ್ಟ್ರಪಿತ ಹಾಗೂ ವಿಮೋಚನಾ ನಾಯಕ ಶೇಖ್ ಮುಜಿಬುರ್ ರೆಹಮಾನ್ (Sheikh Mujibur Rahman) ಅವರ ಭಾವಚಿತ್ರಗಳನ್ನು ತೆರವುಗೊಳಿಸಿ, ಅವರ ಜಾಗದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ (Muhammad Ali Jinnah) ಅವರ ಫೋಟೋಗಳನ್ನು ಅಳವಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಮಾತ್-ಎ-ಇಸ್ಲಾಮಿ ಬೆಂಬಲಿತ ‘ಇಸ್ಲಾಮಿ ಛಾತ್ರ ಶಿಬಿರ್’ ವಿದ್ಯಾರ್ಥಿ ಸಂಘಟನೆಯ ಹಿಡಿತದಲ್ಲಿರುವ DUCSU ಮಂಡಳಿಯ ಈ ನಡೆಯ ವಿರುದ್ಧ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿನ್ನಾ ಫೋಟೋಗಳನ್ನು ಹರಿದುಹಾಕಿದ ಘಟನೆಯೂ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಂಗ್ಲಾದೇಶದ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಢಾಕಾ ವಿಶ್ವವಿದ್ಯಾಲಯದ DUCSU ಮ್ಯೂಸಿಯಂ ಅನ್ನು ಇತ್ತೀಚೆಗೆ ನವೀಕರಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಈ ಮ್ಯೂಸಿಯಂನಲ್ಲಿದ್ದ ಬಾಂಗ್ಲಾದೇಶದ ಸ್ವತಂತ್ರ ಹೋರಾಟ, 1952ರ ಭಾಷಾ ಚಳವಳಿ, 1966ರ ಆರು ಅಂಶಗಳ ಚಳವಳಿ ಹಾಗೂ 1971ರ ಮಾರ್ಚ್ 7ರ ಶೇಖ್ ಮುಜಿಬುರ್ ರೆಹಮಾನ್ ಅವರ ಐತಿಹಾಸಿಕ ಭಾಷಣದ ಪ್ರಮುಖ ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ.
ಜಿನ್ನಾ ಅವರ ಫೋಟೋಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಿದ್ದನ್ನು ನೋಡಿ ಆಕ್ರೋಶಗೊಂಡ ಅಬು ತಯ್ಯಬ್ ಹಬಿಲ್ದಾರ್ ಎಂಬ ವಿದ್ಯಾರ್ಥಿ ನೇರವಾಗಿ ಮ್ಯೂಸಿಯಂಗೆ ನುಗ್ಗಿ, ಗೋಡೆಯ ಮೇಲಿದ್ದ ಜಿನ್ನಾ ಅವರ ಮೂರೂ ಭಾವಚಿತ್ರಗಳನ್ನು ಕಿತ್ತು ಹರಿದುಹಾಕಿದ್ದಾನೆ. “ಬಂಗಾಳಿ ಭಾಷೆಯನ್ನು ವಿರೋಧಿಸಿ, ಢಾಕಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಬಂಧನಕ್ಕೆ ಆದೇಶಿಸಿದ್ದ ಜಿನ್ನಾಗೆ ಈ ಮ್ಯೂಸಿಯಂನಲ್ಲಿ ಜಾಗವಿಲ್ಲ” ಎಂದು ವಿದ್ಯಾರ್ಥಿ ಗರ್ಜಿಸಿದ್ದಾನೆ. ಜೊತೆಗೆ ಬಿಎನ್ಪಿ ಬೆಂಬಲಿತ ‘ಜಾತೀಯತಾವಾದಿ ಛಾತ್ರ ದಳ’ ಕೂಡ ಈ ನಡೆಯನ್ನು ಉಗ್ರವಾಗಿ ಖಂಡಿಸಿದ್ದು, “ಶಿಬಿರ್ ನಿಯಂತ್ರಣದ DUCSU ಮಂಡಳಿಯು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಆಶಯಗಳನ್ನು ಬಲಿಕೊಟ್ಟು ಪಾಕಿಸ್ತಾನದ ಮೇಲಿನ ತನ್ನ ಪ್ರೇಮವನ್ನು ಪ್ರದರ್ಶಿಸುತ್ತಿದೆ” ಎಂದು ಆರೋಪಿಸಿದೆ.
ಇನ್ನೊಂದೆಡೆ, ಈ ಘಟನೆಯನ್ನು ಢಾಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿಶ್ವವಿದ್ಯಾಲಯದ ಅನುಮತಿ ಇಲ್ಲದೆ ಇಂತಹ ಪ್ರದರ್ಶನಗಳನ್ನು ಏರ್ಪಡಿಸಿ, ‘ಸಮಾಂತರ ಆಡಳಿತ’ ನಡೆಸಲು ಯತ್ನಿಸುತ್ತಿರುವ DUCSU ವಿದ್ಯಾರ್ಥಿ ಒಕ್ಕೂಟದ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.
ಈ ಕುರಿತು ತನಿಖೆ ನಡೆಸಲು ವಿಶ್ವವಿದ್ಯಾಲಯವು ಮೂರು ಪ್ರತ್ಯೇಕ ತನಿಖಾ ಸಮಿತಿಗಳನ್ನು ರಚಿಸಿದೆ. ಅಂತರಾಷ್ಟ್ರೀಯ ಸಂಬಂಧಗಳ ವಿಭಾಗದ ಪ್ರಾಧ್ಯಾಪಕ ಮೊಹಮ್ಮದ್ ತಂಝೀಮುದ್ದೀನ್ ಖಾನ್ ಪ್ರತಿಕ್ರಿಯಿಸಿ, “ನವೀಕರಣದ ಹೆಸರಿನಲ್ಲಿ ಬಾಂಗ್ಲಾದೇಶದ ಸ್ವತಂತ್ರ ಹೋರಾಟದ ನಾಯಕರನ್ನು ಇತಿಹಾಸದಿಂದಲೇ ಅಳಿಸಿಹಾಕಲು ರಾಜಕೀಯ ಪ್ರೇರಿತ ಯತ್ನ ನಡೆಸಲಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
(ವರದಿ: ಚೈತ್ರಾ ಹರೀಶ್, ನ್ಯೂಸ್ 18 ಕನ್ನಡ, ಬೆಂಗಳೂರು)














