Last Updated:
ಭಾರತದ ಯಶ್‌ವೀರ್ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಜಾವಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದರೆ, ರೋಹಿತ್ ಯಾದವ್ (Rohit Yadav) ಮೂರನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
2026ರ ಏಷ್ಯನ್ ಗೇಮ್ಸ್‌ನ (Asian Games) ಜಾವೆಲಿನ್ ಎಸೆತ (Javelin throw) ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಏಕಕಾಲದಲ್ಲಿ ಎರಡು ಪದಕಗಳ (ಡಬಲ್ ಪೋಡಿಯಂ) ಹೆಮ್ಮೆಯ ಕ್ಷಣವನ್ನು ತಂದುಕೊಟ್ಟಿದ್ದಾರೆ. ಭಾರತದ ಯಶ್‌ವೀರ್ ಸಿಂಗ್ (Yashvir Singh)ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದರೆ, ರೋಹಿತ್ ಯಾದವ್ (Rohit Yadav) ಮೂರನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಶ್ರೀಲಂಕಾದ ರುಮೇಶ್ ಪತಿರಾಗೆ ಅವರು ನಿರೀಕ್ಷೆಯಂತೆಯೇ 88.55 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ರುಮೇಶ್ ಕಾಮನ್‌ವೆಲ್ತ್ ಗೇಮ್ಸ್ನಲ್ಲು ಚಿನ್ನದ ಪದಕ ಗೆದ್ದಿದ್ದರು.
ಹರಿಯಾಣ ಮೂಲದ 24 ವರ್ಷದ ಯುವ ಅಥ್ಲೀಟ್ ಯಶ್‌ವೀರ್ ಸಿಂಗ್, ತಮ್ಮ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ 85.72 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ (Personal-best) ನೀಡಿದರು. ಈ ಮೂಲಕ ಸಹ ಆಟಗಾರ ರೋಹಿತ್ ಯಾದವ್ ಅವರ 84.35 ಮೀಟರ್ ದಾಖಲೆಯನ್ನು ಹಿಂದಿಕ್ಕಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ವರ್ಷದ ಆರಂಭದಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ಯಶ್‌ವೀರ್‌ಗೆ, ಈ ಬೆಳ್ಳಿ ಪದಕವು ಅವರ ವೃತ್ತಿಜೀವನದ ಮತ್ತೊಂದು ದೊಡ್ಡ ಸಾಧನೆಯಾಗಿದೆ.
ಮತ್ತೊಂದೆಡೆ, ಉತ್ತರದ ಪ್ರದೇಶದ 25 ವರ್ಷದ ಯುವ ಆಟಗಾರ ರೋಹಿತ್ ಯಾದವ್ ಅಂತಿಮ ಸುತ್ತಿನಲ್ಲಿ ಯಶ್‌ವೀರ್ ಅವರಿಂದ ಎರಡನೇ ಸ್ಥಾನವನ್ನು ಕಳೆದುಕೊಂಡು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಇತ್ತೀಚಿನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ತಪ್ಪಿಸಿಕೊಂಡಿದ್ದ ರೋಹಿತ್, ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರಮುಖ ಪದಕದ ಆಶಯವಾಗಿದ್ದರು ಮತ್ತು ಅದರಂತೆಯೇ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಸ್ಪರ್ಧೆಯ ಆರಂಭದಿಂದಲೂ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದ ಶ್ರೀಲಂಕಾದ ರುಮೇಶ್ ಪತಿರಾಗೆ ಇಡೀ ಸ್ಪರ್ಧೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಆರಂಭದ ಮೂರು ಪ್ರಯತ್ನಗಳಲ್ಲಿ 83.34 ಮೀಟರ್ ಎಸೆಯುವ ಮೂಲಕ ನಿಧಾನಗತಿಯ ಆರಂಭ ಪಡೆದ ಪತಿರಾಗೆ, ನಂತರ ಲಯಕ್ಕೆ ಮರಳಿ ಕೊನೆಯ ಎರಡು ಪ್ರಯತ್ನಗಳಲ್ಲಿ ಕ್ರಮವಾಗಿ 88.33 ಮೀಟರ್ ಮತ್ತು 88.55 ಮೀಟರ್‌ಗಳ ದೈತ್ಯ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಜಯಿಸಿದರು.
ಭಾರತದ ಸ್ಟಾರ್ ಅಥ್ಲೀಟ್, ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರು ಗಾಯದ (ಲಿಗಮೆಂಟ್ ಇಂಜುರಿ) ಕಾರಣದಿಂದ ಈ ಕೂಟದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಭಾರತದ ಪದಕದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಯಶ್‌ವೀರ್ ಮತ್ತು ರೋಹಿತ್ ಜೋಡಿ ದೇಶದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಇದೇ ವೇಳೆ, ಒಲಿಂಪಿಕ್ ಚಾಂಪಿಯನ್ ಆಗಿರುವ ಪಾಕಿಸ್ತಾನದ ಅರ್ಷದ್ ನದೀಮ್ ಹಲವು ಫಾಲ್ಸ್ ಥ್ರೋ ಎಸೆದ ಕಾರಣದಿಂದ ಕೇವಲ 80.29 ಮೀಟರ್ ಎಸೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಭಾರತ ತಂಡ 10ನೇ ದಿನ 8 ಪದಕಗಳನ್ನ ತನ್ನ ಖಾತೆಗೆ ಸೇರಿಸಿಕೊಂಡಿದೆ. ಭಾರತೀಯ ಕ್ರೀಡಾಪಟುಗಳು ಸೋಮವಾರ ತಲಾ 4 ಬೆಳ್ಳಿ ಹಾಗೂ ಕಂಚಿನ ಪದಕವನ್ನ ತನ್ನದಾಗಿಸಿಕೊಂಡರು. ಈ ಮೂಲಕ ಭಾರತ 4 ಚಿನ್ನ, 17 ಬೆಳ್ಳಿ, 19 ಕಂಚು ಸೇರಿದಂತೆ 40 ಪದಗಳನ್ನ ಗೆದ್ದಿದೆ. ಸೋಮವಾರ ಜಾವಲಿನ್ನಲ್ಲಿ ಪುರುಷರ 1500 ಮೀಟರ್ ಓಟದ ಫೈನಲ್‌ನಲ್ಲಿ ಗುಲ್ವೀರ್ ಸಿಂಗ್ಯಶ್‌ವೀರ್ ಸಿಂಗ್, ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್ ಫೈನಲ್‌ನಲ್ಲಿ ಇಶಾ ಸಿಂಗ್ ಹಾಗೂ ಲಾಂಗ್ ಜಂಪ್ನಲ್ಲಿ ಮುರುಳಿ ಶ್ರೀಶಂಕರ್ ಬೆಳ್ಳಿ ಗೆದ್ದರೆ, ರೋಹಿತ್ ಯಾದವ್ ಜಾವಲಿನ್ನಲ್ಲಿ, 400 ಮೀಟರ್ ಹರ್ಡಲ್ಸ್ನಲ್ಲಿ ವಿದ್ಯಾ ರಾಮರಾಜ್, 5000 ಮೀಟರ್ನಲ್ಲಿ ಪಾರುಲ್ ಚೌಧರಿ ಹಾಗೂ ಕುರಾಶ್‌ನಲ್ಲಿ ಪಿಂಕಿ ಬಲ್ಹಾರಾಗೆ ಕಂಚಿನ ಪದಗಳನ್ನ ಗೆದ್ದರು.














