Aparna: ಕೊನೆಯ ಬಾರಿ ತೆರೆ ಮೇಲೆ ಅಪರ್ಣಾ! ಪತಿಯ ಭಾವುಕ ಪೋಸ್ಟ್ | | ACTPnews

ಅಪರ್ಣಾ


Last Updated:

ಖ್ಯಾತ ನಿರೂಪಕಿ ಹಾಗೂ ನಟಿ ದಿವಂಗತ ಅಪರ್ಣಾ (Aparna) ಅವರ ಕೊನೆಯ ಸಿನಿಮಾ ಗ್ರಾಮಾಯಣ (Gramayana) ಕೊನೆಗೂ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಅಪರ್ಣಾ
ಅಪರ್ಣಾ

ಖ್ಯಾತ ನಿರೂಪಕಿ ಹಾಗೂ ನಟಿ ದಿವಂಗತ ಅಪರ್ಣಾ (Aparna) ಅವರ ಕೊನೆಯ ಸಿನಿಮಾ ಗ್ರಾಮಾಯಣ (Gramayana) ಕೊನೆಗೂ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ದೇವನೂರು ಚಂದ್ರ ನಿರ್ದೇಶನದ ಈ ಸಿನಿಮಾ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದಿವಂಗತ ಅಪರ್ಣಾ ಅವರ ಪಾತ್ರವೂ ಕಥೆಯ ಪ್ರಮುಖ ಭಾಗವಾಗಿದೆ. 

ಅಪರ್ಣಾ ಅಭಿನಯದ ಕೊನೆಯ ಸಿನಿಮಾ

ಅನಾರೋಗ್ಯದಿಂದ 2024ರ ಜುಲೈ 11ರಂದು ನಿಧನರಾದ ಅಪರ್ಣಾ ಅವರು ಕನ್ನಡದ ಜನಪ್ರಿಯ ನಿರೂಪಕಿ, ನಟಿ ಹಾಗೂ ರೇಡಿಯೋ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು. ಅವರು ಅಭಿನಯಿಸಿರುವ ಕೊನೆಯ ಸಿನಿಮಾ ಇದೀಗ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿದೆ. ಅವರ ಅಗಲಿಕೆಯ ಎರಡು ವರ್ಷಗಳ ಬಳಿಕ ಈ ಸಿನಿಮಾ ತೆರೆಗೆ ಬರುತ್ತಿರುವುದರಿಂದ ಚಿತ್ರದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿದೆ.

ಪತ್ನಿಯನ್ನು ನೆನೆದು ಭಾವುಕರಾದ ನಾಗರಾಜ್ ವಸ್ತಾರೆ

ಚಿತ್ರ ಬಿಡುಗಡೆಯ ಮುನ್ನ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಬರಹ ಎಲ್ಲರ ಗಮನ ಸೆಳೆದಿದೆ. ಸಿನಿಮಾದ ಚಿತ್ರೀಕರಣದ ಸಂದರ್ಭದ ಕೆಲವು ಅಪರೂಪದ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿರುವ ಅವರು, ಈ ಸಂತಸದ ಕ್ಷಣವನ್ನು ಪತ್ನಿಯೊಂದಿಗೆ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Samantha Ruth Prabhu: ಗರ್ಭಿಣಿಯಾದ ಮೇಲೆ ಸಿಕ್ಸ್ ಪ್ಯಾಕ್ ಮಿಸ್ ಮಾಡ್ಕೊಳ್ತಿದ್ದಾರಂತೆ ಸಮಂತಾ

ಅಪರ್ಣಾ ಅವರ ಆರೋಗ್ಯ ತೀರಾ ಹದಗೆಟ್ಟಿದ್ದರೂ ಗ್ರಾಮಾಯಣ ಸಿನಿಮಾದಲ್ಲಿ ನಟಿಸಲೇಬೇಕೆಂಬ ಅಪಾರ ಆಸೆ ಹೊಂದಿದ್ದರು. ಕೋವಿಡ್‌ಗೂ ಮುನ್ನ ಆರಂಭವಾಗಿ ಬಳಿಕ ಸ್ಥಗಿತಗೊಂಡಿದ್ದ ಈ ಚಿತ್ರವನ್ನು 2023ರಲ್ಲಿ ಮತ್ತೆ ಆರಂಭಿಸುವ ವೇಳೆ ನಿರ್ದೇಶಕ ದೇವನೂರು ಚಂದ್ರ ಅವರನ್ನು ಸಂಪರ್ಕಿಸಿದ್ದರು. ಆ ಸಮಯದಲ್ಲಿ ಕುಟುಂಬದ ಪರಿಸ್ಥಿತಿ ಕಷ್ಟಕರವಾಗಿದ್ದರೂ, ಈ ಪಾತ್ರವನ್ನು ಅಪರ್ಣಾ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದೇನೆ ಎಂಬ ನಿರ್ದೇಶಕರ ಮಾತು ಅವರಿಗೆ ಧೈರ್ಯ ನೀಡಿತ್ತು.

ಸುಮಾರು ಹದಿನೈದು ದಿನಗಳ ಕಾಲ ಕಡೂರು ಸುತ್ತಮುತ್ತ ನಡೆದ ಚಿತ್ರೀಕರಣದಲ್ಲಿ ಅಪರ್ಣಾ ಭಾಗವಹಿಸಿದ್ದರು. ದೈಹಿಕವಾಗಿ ಆರೋಗ್ಯ ಉತ್ತಮವಾಗಿರದಿದ್ದರೂ, ತಮ್ಮ ಪಾತ್ರವನ್ನು ಅತ್ಯಂತ ಸಮರ್ಪಣಾಭಾವದಿಂದ ಪೂರ್ಣಗೊಳಿಸಿದ್ದರು. ಚಿತ್ರದ ಕ್ಲೈಮಾಕ್ಸ್‌ನ ಒಂದು ದೃಶ್ಯ ಮಾತ್ರ ಬಾಕಿಯಿದೆ ಎಂದು ಅವರು ಆಗಾಗ ಹೇಳುತ್ತಿದ್ದರು ಎಂದು ನಾಗರಾಜ್ ವಸ್ತಾರೆ ತಮ್ಮ ಬರಹದಲ್ಲಿ ನೆನಪಿಸಿಕೊಂಡಿದ್ದಾರೆ.

ಕೊನೆಯ ದಿನಗಳಲ್ಲಿ ‘ಮುಗಿಸುತೀನೋ ಇಲ್ಲವೋ, ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು’ ಎಂದು ಅಪರ್ಣಾ ಹೇಳುತ್ತಿದ್ದ ಮಾತುಗಳು ಇಂದಿಗೂ ಮನಸ್ಸಿನಲ್ಲಿ ಉಳಿದಿವೆ ಎಂದು ಅವರು ತಿಳಿಸಿದ್ದಾರೆ. ಈಗ ಆ ಕ್ಷಣಗಳನ್ನು ನೆನಪಿಸಿಕೊಂಡಾಗ, ಈ ಸಿನಿಮಾವನ್ನು ಪೂರ್ಣಗೊಳಿಸಬೇಕೆಂಬ ಅವರ ದೃಢಸಂಕಲ್ಪವೇ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಕೆಗೆ ಕಾರಣವಾಗಿರಬಹುದೆಂಬ ಭಾವನೆ ಮೂಡುತ್ತಿದೆ ಎಂದು ಭಾವುಕರಾಗಿದ್ದಾರೆ.

ಇತ್ತೀಚೆಗೆ ನಡೆದ ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ ಬಂದ ಬಳಿಕ ಮನಸ್ಸು ಮತ್ತೆ ತಳಮಳಗೊಂಡಿತು ಎಂದು ನಾಗರಾಜ್ ವಸ್ತಾರೆ ಬರೆದಿದ್ದಾರೆ. ಇಂತಹ ವಿಶೇಷ ಕ್ಷಣವನ್ನು ಸಂಭ್ರಮಿಸಲು ಅಪರ್ಣಾ ಜೊತೆಗಿಲ್ಲ ಎಂಬ ಕೊರಗು ಕಾಡುತ್ತಿದೆ. ಆದರೆ ಸಿನಿಮಾದ ಮೂಲಕ ಮತ್ತೊಮ್ಮೆ ಅವರ ಅಭಿನಯವನ್ನು ನೋಡುವ ಅವಕಾಶ ಸಿಗುತ್ತಿರುವುದು ಸಮಾಧಾನ ತಂದಿದೆ. ಗ್ರಾಮಾಯಣ ಚಿತ್ರಕ್ಕೆ ಉತ್ತಮ ಯಶಸ್ಸು ಸಿಗಲಿ ಎಂದು ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಪರ್ಣಾ ಅವರ ಕಲಾ ಬದುಕಿನ ಪಯಣ

ಕನ್ನಡದ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ ಅವರು 1984ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದರು.

90ರ ದಶಕದಲ್ಲಿ ಚಂದನ ವಾಹಿನಿಯ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಿಸುವ ಮೂಲಕ ಅವರು ಮನೆಮಾತಾದರು. ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿಯೂ ಸೇವೆ ಸಲ್ಲಿಸಿದರು. 1998ರಲ್ಲಿ ದೀಪಾವಳಿ ವಿಶೇಷ ಕಾರ್ಯಕ್ರಮವನ್ನು ನಿರಂತರ ಎಂಟು ಗಂಟೆಗಳ ಕಾಲ ನಿರೂಪಿಸಿ ದಾಖಲೆ ನಿರ್ಮಿಸಿದ್ದರು.

ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ ಅವರು, ಬಿಗ್ ಬಾಸ್ ಕನ್ನಡ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ನಂತರ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದ ಮೂಲಕ ಪ್ರೇಕ್ಷಕರಿಗೂ ಮತ್ತಷ್ಟು ಹತ್ತಿರವಾದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports