Last Updated:
Annamalai: ತಮಿಳುನಾಡಿನ ಬಿಜೆಪಿಯ ಪ್ರಮುಖನಾಯಕ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿಯನ್ನು ಆಕ್ರಮಣಕಾರಿ ರಾಜಕಾರಣದ ಮೂಲಕ ಬೆಳೆಸಿದ ಅಣ್ಣಾಮಲೈ ಅವರ ಈ ನಿರ್ಧಾರ, ರಾಜ್ಯದ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸುವ ಸುಳಿವು ನೀಡಿದೆ. ಹಾಗಾದ್ರೆ, ಅಣ್ಣಾಮಲೈ ರಾಜೀನಾಮೆ ಕೊಟ್ಟಿದ್ಯಾಕೆ? ಬಿಜೆಪಿ ಹೈಕಮಾಂಡ್ಗೆ ಕೊಟ್ಟ ಆ ಖಡಕ್ ಸೂಚನೆ ಏನು?
ಚೆನ್ನೈ (ತಮಿಳುನಾಡು): ದ್ರಾವಿಡ ನಾಡಿನಲ್ಲಿ (Dravidian) ಬಿಜೆಪಿಗೆ ಬುನಾದಿ ಹಾಕಲು ಹೋರಾಡುತ್ತಿದ್ದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಎರಡು ದಿನಗಳ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಇಂದು ಬಿಜೆಪಿಯು (BJP) ಅಣ್ಣಾಮಲೈ ಅವರ ರಾಜೀನಾಮೆಯನ್ನ ಅಂಗೀಕರಿಸಿದೆ. ಇದರ ತರುವಾಯ, ಅಣ್ಣಾಮಲೈ ಅವರು ತಮ್ಮ ರಾಜೀನಾಮೆಯ ಹಿಂದಿನ ಕಾರಣವನ್ನ ಬಿಚ್ಚಿಟ್ಟಿದ್ದಾರೆ.! ಹಾಗಾದ್ರೆ, ಅಣ್ಣಾಮಲೈ ರಾಜೀನಾಮೆ (Annamalai Resigns) ಕೊಟ್ಟಿದ್ಯಾಕೆ?
ನ್ಯೂಸ್ 18 ತಮಿಳು ವರದಿ ಮಾಡಿರುವಂತೆ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿಯ ಪ್ರಭಾವಿ ಮುಖಂಡ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತವಾಗಿ ವಿದಾಯ ಹೇಳಿ ಹೊಸ ರಾಜಕೀಯ ಹಾದಿ ಹಿಡಿಯುವುದಾಗಿ ಘೋಷಿಸಿದ್ದಾರೆ. ಇಂದು ಮಧ್ಯಾಹ್ನ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಮಾತನಾಡಿದ ಅವರು, “ತಮಿಳರ ಸಂಪ್ರದಾಯದಂತೆ ಪಕ್ಷದಿಂದ ಗೌರವದಿಂದ ಹೊರಬರುತ್ತಿದ್ದೇನೆ, ಕಳೆದ ಐದು ವರ್ಷಗಳಿಂದ ಹೊಸ ದಾರಿ ನಿರ್ಮಿಸಲು ಶ್ರಮಿಸಿದ್ದೇನೆ, ಇಂದಿನಿಂದ ಆ ಪ್ರಯಾಣ ಆರಂಭ” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಿಜೆಪಿ-ಎಐಎಡಿಎಂಕೆಯೊಂದಿಗಿನ ಮೈತ್ರಿಯ ನಂತರ, “ಡಿಸೆಂಬರ್ 2025 ರಲ್ಲಿ ಪಕ್ಷ ತೊರೆಯುವ ಇಂಗಿತವನ್ನು ಬಿಜೆಪಿ ನಾಯಕತ್ವಕ್ಕೆ ತಿಳಿಸಿದ್ದೆ” ಎಂದು ಹೇಳಿದ್ದರು. ಆದ್ರೆ, ಪಕ್ಷದ ಹಿರಿಯ ನಾಯಕರು ಔಪಚಾರಿಕವಾಗಿ ರಾಜೀನಾಮೆ ನೀಡುವ ಮೊದಲು ತಮಿಳುನಾಡು ಚುನಾವಣೆಯ ನಂತರ ಪಕ್ಷದಲ್ಲಿಯೇ ಇರಬೇಕೆಂದು ವಿನಂತಿಸಿಕೊಂಡರು ಎಂದು ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಜೂನ್ 2ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಹಾಗಾಗಿ, ಇಂದು ಜೂನ್ 5ರಂದು ಅವರ ರಾಜೀನಾಮೆಯನ್ನು ಪಕ್ಷ ಅಂಗೀಕರಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ 2026ರ ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಜೊತೆ ಮೈತ್ರಿಯಾದ ನಂತರವೇ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಲಾಗಿತ್ತು. ಹಾಗಾಗಿ, ಪಕ್ಷದಲ್ಲಿ ತಮಗೆ ಅವಕಾಶ ಮತ್ತು ಭವಿಷ್ಯ ಇಲ್ಲ ಎಂಬ ಭಾವನೆ ಅವರನ್ನು ಹೊರನಡೆಯುವಂತೆ ಮಾಡಿದೆ ಎನ್ನಲಾಗಿದೆ.
Chennai,Tamil Nadu













