Last Updated:
Akhil Joyan: ಕಾಸರಗೋಡು ಮೂಲದ ಹಡಗು ನಾವಿಕ ಅಖಿಲ್ ಜೋಯಾನ್ ಎಂಬುವರೇ ಮೃತಪಟ್ಟ ವ್ಯಕ್ತಿ. ಇನ್ನು ಎರಡೇ ತಿಂಗಳಲ್ಲಿ ಅಖಿಲ್ ಜೋಯಾನ್ ವಿವಾಹ ನಿಶ್ಚಯವಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕ ಆವರಿಸಿದೆ.
ಕಾಸರಗೋಡು, ಕೇರಳ: ನಿನ್ನೆ ಉಕ್ರೇನ್ನ (Ukraine) ಒಡೆಸ್ಸಾ ನಗರದ (Odessa City) ಬಳಿ ರಷ್ಯಾ (Russia) ಭೀಕರ ದಾಳಿ ನಡೆಸಿತ್ತು. ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದ್ದು, ಈ ಕ್ಷಿಪಣಿ ದಾಳಿಯಲ್ಲಿ ಮಲಯಾಳಿ ವ್ಯಾಪಾರಿ ನೌಕಾಪಡೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ನಿನ್ನೆ ವರದಿಯಾಗಿತ್ತು. ಕಾಸರಗೋಡು ಮೂಲದ ಮತ್ತು ಸರಕು ಸಾಗಣೆ ಹಡಗಿನ ಎಂವಿ ಗೋಲ್ಡನ್ ಲಿಯೋದಲ್ಲಿ ನಾವಿಕನಾಗಿದ್ದ ಅಖಿಲ್ ಜೋಯಾನ್ (Akhil Joyan) ಎಂಬುವರೇ ಮೃತಪಟ್ಟ ಕಾಸರಗೋಡು (Kasaragod) ವ್ಯಕ್ತಿ. ಇನ್ನು ಎರಡೇ ತಿಂಗಳಲ್ಲಿ ಅಖಿಲ್ ಜೋಯಾನ್ ವಿವಾಹ ನಿಶ್ಚಯವಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕ ಆವರಿಸಿದೆ.
ಉಕ್ರೇನ್ನಿಂದ ಜೋಳವನ್ನು ಸಾಗಿಸುತ್ತಾ ಹೊರಟಿದ್ದ ಗಿನಿಯಾ ಬಿಸ್ಸೌ ಧ್ವಜ ಹೊತ್ತ ಹಡಗಿನ ಮೇಲೆ ರಷ್ಯಾದ ಸೇನೆ ಒಡೆಸ್ಸಾ ಬಂದರಿನಲ್ಲಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಮೂವರು ಭಾರತೀಯರು ಮತ್ತು ಐದು ಸಿರಿಯನ್ನರು ಸೇರಿದಂತೆ ಇತರ 10 ಸಿಬ್ಬಂದಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಹಡಗಿನಲ್ಲಿದ್ದ ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಕೇರಳಂ ರಾಜ್ಯದ ಕಾಸರಗೋಡು ಜಿಲ್ಲೆಯ 26 ವರ್ಷದ ನೌಕೆಯ ನಾವಿಕ ಅಖಿಲ್ ಜೋಯಾನ್ ಕೂಡ ಸೇರಿದ್ದಾರೆ.

ಅಖಿಲ್ ಜೋಯಾನ್ ಕಾಸರಗೋಡಿನ ಎಲೆಕ್ಟ್ರಿಕಲ್ ಅಂಗಡಿ ಉದ್ಯೋಗಿ ಜೋನ್ ಮತ್ತು ವಿಮಾ ಏಜೆಂಟ್ ಸ್ಯಾಲಿ ಎಂಬ ದಂಪತಿಯ ಏಕೈಕ ಪುತ್ರ. 26 ವರ್ಷದ ಅಖಿಲ್ ಜೋಯಾನ್ ಕಳೆದ ಆರು ವರ್ಷಗಳಿಂದ ಹಡಗಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಖಿಲ್ ಶೀಘ್ರದಲ್ಲೇ ಬೇರೆ ಕಂಪನಿಗೆ ವರ್ಗಾವಣೆಯಾಗಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. 19 ನೇ ವಯಸ್ಸಿನಲ್ಲಿ ಮರ್ಚೆಂಟ್ ನೇವಿ ಅಖಿಲ್ ಜೋಯಾನ್ ಸೇರಿದ್ದರು ಎನ್ನಲಾಗಿದೆ.
ಇತ್ತ ಅಖಿಲ್ ಜೋಯಾನ್ ಮದುವೆಗೆ ಮನೆಯಲ್ಲಿ ಭಾರೀ ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ಈಗಾಗಲೇ ಹುಡುಗಿ ನೋಡಿದ್ದು, ವಿವಾಹವೂ ನಿಶ್ಚಯವಾಗಿತ್ತು. ಇನ್ನು ಎರಡೇ ತಿಂಗಳಲ್ಲಿ ಅಖಿಲ್ ಜೋಯಾನ್ ಅದ್ಧೂರಿ ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು ಎನ್ನಲಾಗಿದೆ.

ಇನ್ನೆರಡು ತಿಂಗಳಲ್ಲಿ ಮದುವೆ ನಡೆಯಲಿರುವಾಗಲೇ ಇಡೀ ಕುಟುಂಬವೇ ಕಣ್ಣೀರು ಹಾಕುವ ಈ ದುರಂತದ ಸುದ್ದಿ ಬಂದಿದೆ. ಮೂರು ತಿಂಗಳ ಹಿಂದೆ ಅಲಪ್ಪುಳದ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಖಿಲ್ ಒಂದು ತಿಂಗಳ ಹಿಂದೆ ಕೆಲಸಕ್ಕೆ ಮರಳಿದ್ದರು. ಆದರೆ ನಿನ್ನೆ ರಷ್ಯಾ ಕ್ಷಿಪಣಿ ದಾಳಿಯಲ್ಲಿ ಅಖಿಲ್ ಜೋಯಾನ್ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಶಿಪ್ಪಿಂಗ್ ಕಂಪನಿ ಕಳುಹಿಸಿದ ಇ ಮೇಲ್ ಮೂಲಕ ಕುಟುಂಬಕ್ಕೆ ಈ ಸುದ್ದಿ ತಿಳಿಯಿತು.
ಅಖಿಲ್ ಆ ಗ್ರಾಮದಲ್ಲಿ ಎಲ್ಲರಿಗೂ ಬೇಕಾದ ಹುಡುಗನಾಗಿದ್ದ ಎನ್ನಲಾಗಿದೆ. ಅವರದು ಸಾಮಾನ್ಯ ಕುಟುಂಬ, ಮತ್ತು ಅವರ ಇಡೀ ಮನೆ ಭವಿಷ್ಯವು ಹೆಚ್ಚಾಗಿ ಅಖಿಲ್ ಮೇಲೆ ಅವಲಂಬಿತವಾಗಿದೆ. ಅವರು ಇತ್ತೀಚೆಗೆ ಮನೆ ನಿರ್ಮಿಸಿದ್ದರು” ಎಂದು ಬಲಾಲ್ ಗ್ರಾಮ ಪಂಚಾಯತ್ನ ವೆಲ್ಲರಿಕ್ಕುಂಡುವಿನ ವಾರ್ಡ್ ಸದಸ್ಯೆ ಶೋಬಿ ಜೋಸೆಫ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಅಖಿಲ್ ಅವರ ಮೃತದೇಹವನ್ನು ಆದಷ್ಟು ಬೇಗ ಮನೆಗೆ ತರಲು ಕ್ರಮ ಕೈಗೊಳ್ಳಬೇಕೆಂದು ಅವರ ತಂದೆ ವಿನಂತಿಸಿದ್ದಾರೆ. ಘಟನೆಯಲ್ಲಿ ವಿದೇಶಾಂಗ ಸಚಿವಾಲಯ ಮತ್ತು ರಷ್ಯನ್ ಕಾನ್ಸುಲೇಟ್ಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇರಳಂ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
Kasaragod,Kasaragod,Kerala














