ಭಗವಾನ್ ದಾದಾ ಅವರು 1913ರ ಆಗಸ್ಟ್ 1ರಂದು ಅಮರಾವತಿಯಲ್ಲಿ ಜನಿಸಿದರು. ಅವರ ತಂದೆ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಭಗವಾನ್ ದಾದಾ ಕೂಡ ಕಾರ್ಮಿಕರಾಗಿ ದುಡಿದಿದ್ದರು.
ಆದರೆ ಬಾಲ್ಯದಿಂದಲೇ ಅವರಿಗೆ ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಇತ್ತು. ಚಿತ್ರರಂಗಕ್ಕೆ ಕಾಲಿಡುವ ಕನಸನ್ನು ಹೊತ್ತಿದ್ದ ಅವರು, ಮೂಕಚಿತ್ರಗಳ ಕಾಲದಲ್ಲೇ ಸಣ್ಣ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಕುಸ್ತಿಯ ಮೇಲಿದ್ದ ಅವರ ಆಸಕ್ತಿಯಿಂದಾಗಿ ಅವರಿಗೆ ದಾದಾ ಎಂಬ ಅಡ್ಡಹೆಸರು ಬಂದಿತ್ತು ಎನ್ನಲಾಗುತ್ತದೆ.
1930 ಮತ್ತು 1940ರ ದಶಕಗಳಲ್ಲಿ ಭಗವಾನ್ ದಾದಾ ಕಡಿಮೆ ಬಜೆಟ್ನ ಆಕ್ಷನ್ ಹಾಗೂ ಸ್ಟಂಟ್ ಸಿನಿಮಾಗಳಲ್ಲಿ ಕೆಲಸ ಮಾಡಿದರು. ಆ ಸಿನಿಮಾಗಳು ವಿಶೇಷವಾಗಿ ಕಾರ್ಮಿಕ ವರ್ಗದ ಪ್ರೇಕ್ಷಕರಲ್ಲಿ ಜನಪ್ರಿಯವಾಗಿದ್ದವು.
ನಟನೆಯ ಜೊತೆಗೆ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಆಸಕ್ತಿ ಬೆಳೆಸಿಕೊಂಡ ಅವರು, ತಮ್ಮದೇ ಆದ ರೀತಿಯಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆದರೆ ಅವರ ಬದುಕಿನ ದೊಡ್ಡ ತಿರುವು ಇನ್ನೂ ಮುಂದೆ ಕಾದಿತ್ತು.
1951ರಲ್ಲಿ ಬಿಡುಗಡೆಯಾದ ಅಲ್ಬೇಲಾ ಸಿನಿಮಾ ಭಗವಾನ್ ದಾದಾ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಸ್ವತಃ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತು. ಗೀತಾ ಬಾಲಿ ನಾಯಕಿಯಾಗಿ ನಟಿಸಿದ್ದರು.
ಅಲ್ಬೇಲಾ ಚಿತ್ರದ ಹಾಡುಗಳು ಆ ಕಾಲದಲ್ಲಿ ಭಾರೀ ಜನಪ್ರಿಯವಾದವು. ಶೋಲಾ ಜೋ ಭಡ್ಕೆ ಮತ್ತು ಓ ಬೇಟಾ ಜಿ ಓ ಬಾಬು ಜಿ ಸೇರಿದಂತೆ ಸಿನಿಮಾದ ಹಾಡುಗಳು ಇಂದಿಗೂ ಹಿಂದಿ ಚಿತ್ರರಂಗದ ಜನಪ್ರಿಯ ಹಳೆಯ ಹಾಡುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅಲ್ಬೇಲಾ ಯಶಸ್ಸಿನ ಬಳಿಕ ಭಗವಾನ್ ದಾದಾ ಅವರ ಜೀವನವೇ ಬದಲಾಯಿತು. ಮುಂಬೈನ ಜುಹುವಿನಲ್ಲಿ ಸಮುದ್ರಕ್ಕೆ ಎದುರಾಗಿರುವ 25 ಕೋಣೆಗಳ ಭವ್ಯ ಬಂಗಲೆಯನ್ನು ಅವರು ಹೊಂದಿದ್ದರು. ಅಷ್ಟೇ ಅಲ್ಲ, ವಾರದ ಏಳು ದಿನಕ್ಕೂ ಒಂದೊಂದು ಐಷಾರಾಮಿ ಕಾರು ಬಳಸುವಷ್ಟು ಶ್ರೀಮಂತ ಜೀವನ ನಡೆಸುತ್ತಿದ್ದರು.
ಅಲ್ಬೇಲಾ ನಂತರ ಭಗವಾನ್ ದಾದಾ ಅವರ ಹಲವು ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಚಿತ್ರಗಳ ವೈಫಲ್ಯದ ಜೊತೆಗೆ ತಪ್ಪು ಹೂಡಿಕೆಗಳು ಮತ್ತು ವೈಯಕ್ತಿಕ ಜೀವನದ ಕೆಲವು ಸಮಸ್ಯೆಗಳು ಅವರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದವು.
ಸ್ವತಃ ತಮ್ಮ ಜೀವನದ ಬಗ್ಗೆ ಮಾತನಾಡಿದ್ದ ಸಂದರ್ಶನವೊಂದರಲ್ಲಿ ಅವರು ತಮ್ಮ ಕೆಲವು ಕೆಟ್ಟ ಅಭ್ಯಾಸಗಳು, ಜೂಜಾಟ ಮತ್ತು ಕುಟುಂಬದ ಕಡೆಗಿನ ನಿರ್ಲಕ್ಷ್ಯ ತಮ್ಮ ಬದುಕಿನ ಮೇಲೆ ಪರಿಣಾಮ ಬೀರಿದ್ದಾಗಿ ಹೇಳಿಕೊಂಡಿದ್ದರು. ಕ್ರಮೇಣ ಸಂಪತ್ತು ಕರಗಿತು. ಕೊನೆಗೆ ಬಂಗಲೆಯನ್ನು ಮಾರಾಟ ಮಾಡಬೇಕಾಯಿತು. ಐಷಾರಾಮಿ ಕಾರುಗಳು ಹರಾಜಾದವು.
ಆದರೂ ಸಿನಿಮಾ ಮೇಲಿನ ಅವರ ಪ್ರೀತಿ ಮಾತ್ರ ಕಡಿಮೆಯಾಗಲಿಲ್ಲ. ಜೀವನದ ಕೊನೆಯ ವರ್ಷಗಳಲ್ಲಿಯೂ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಲೇ ಇದ್ದರು.
ಭಗವಾನ್ ದಾದಾ ಮತ್ತೊಂದು ವಿಶೇಷತೆ ಎಂದರೆ ಅವರ ವಿಶಿಷ್ಟ ನೃತ್ಯ ಶೈಲಿ. ಅವರ ನೃತ್ಯ ಮತ್ತು ಅಭಿನಯದ ಕೆಲವು ಶೈಲಿಗಳನ್ನು ನಂತರದ ತಲೆಮಾರಿನ ನಟರು ಅಳವಡಿಸಿಕೊಂಡರು. ವಿಶೇಷವಾಗಿ ಅಮಿತಾಭ್ ಬಚ್ಚನ್ ಮತ್ತು ಗೋವಿಂದ ಅವರಂತಹ ಜನಪ್ರಿಯ ನಟರ ಮೇಲೂ ಭಗವಾನ್ ದಾದಾ ಅವರ ನೃತ್ಯ ಶೈಲಿಯ ಪ್ರಭಾವವಿತ್ತು ಎಂದು ಹೇಳಲಾಗುತ್ತದೆ.
ವಯಸ್ಸಾದಂತೆ ಭಗವಾನ್ ದಾದಾ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದವು. ಹಿಂದೆ ಜೊತೆಯಲ್ಲಿದ್ದ ಅನೇಕ ಸ್ನೇಹಿತರು ಕೂಡ ದೂರವಾದರು. ಆದರೂ ಕೆಲ ಆಪ್ತರು ಮಾತ್ರ ಕೊನೆಯವರೆಗೂ ಅವರ ಸಂಪರ್ಕದಲ್ಲಿದ್ದರು. ಸಂಗೀತ ಸಂಯೋಜಕ ಸಿ. ರಾಮಚಂದ್ರ, ನಟ ಓಂ ಪ್ರಕಾಶ್ ಮತ್ತು ಗೀತರಚನೆಕಾರ ರಾಜೇಂದ್ರ ಕೃಷ್ಣ ಅವರಂತಹವರು ಅವರನ್ನು ಭೇಟಿ ಮಾಡುತ್ತಿದ್ದರು.
2002ರ ಫೆಬ್ರವರಿ 4ರಂದು ದಾದರ್ನ ಸಣ್ಣ ಚಾಲ್ನಲ್ಲಿ ಭಗವಾನ್ ದಾದಾ ಹೃದಯಾಘಾತದಿಂದ ನಿಧನರಾದರು. ಅವರಿಗೆ ಆಗ 88 ವರ್ಷ ವಯಸ್ಸಾಗಿತ್ತು. ಒಂದು ಕಾಲದಲ್ಲಿ ಬಂಗಲೆ, ಐಷಾರಾಮಿ ಕಾರುಗಳು ಮತ್ತು ಸ್ಟುಡಿಯೋ ಹೊಂದಿದ್ದ ಭಗವಾನ್ ದಾದಾ ಅವರ ಬದುಕು ಕೊನೆಯಲ್ಲಿ ಸರಳವಾದ ಕೋಣೆಯಲ್ಲಿ ಅಂತ್ಯಗೊಂಡಿತು.













