Last Updated:
Actor: ಈತ ಮೊದಲು ಲಾಯರ್ ಆಗಿದ್ದ. ಆಮೇಲೆ ಕೊಲೆ ಮಾಡಿ ಜೈಲು ಸೇರಿದ್ದ. ಆಮೇಲೆ 30 ದಿನ ಪೆರೋಲ್ ಮೇಲೆ ಬಂದು, ಎಸ್ಕೇಪ್ ಆಗಿದ್ದ. ಗೇಟಪ್ ಬದಲಿಸಿಕೊಂಡು 12 ವರ್ಷಗಳ ಕಾಲ ಸಿನಿಮಾ, ಧಾರಾವಾಹಿಯಲ್ಲಿ ನಟಿಸುತ್ತಾ ಆರಾಮಾಗಿದ್ದ. ಆದ್ರೆ ಇದ್ರೀಗ ಮತ್ತೆ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಯಾರು ಆ ನಟ ಅಂತೀರಾ? ಇಲ್ಲಿದೆ ನೋಡಿ..
ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಡೀ ಸಿನಿಮಾ ಸ್ಟೋರಿಯನ್ನೇ ನುಂಗಿ ನೀರು ಕುಡಿಯುವಂತಹ ರೋಮಾಂಚಕ ಘಟನೆಯೊಂದು ಸದ್ಯ ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಕಳೆದ 12 ವರ್ಷಗಳಿಂದ ಸಖತ್ ಸಿನಿಮೀಯ ಶೈಲಿಯಲ್ಲಿ ಪೊಲೀಸರ ಕಣ್ಣಿಗೆ ಮಣ್ಣು ಎರೆಸಿ ತಲೆಮರೆಸಿಕೊಂಡಿದ್ದ ಒಬ್ಬ ಕೊಲೆಗಡುಕ ಕ್ರಿಮಿನಲ್‌ನನ್ನು ಅಹಮದಾಬಾದ್ ಕ್ರೈಂ ಬ್ರಾಂಚ್ (Crime Branch) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 2005 ರ ಭೀಕರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ (Life Imprisonment) ಅನುಭವಿಸುತ್ತಿದ್ದ ಈ ಖತರ್ನಾಕ್ ಆಸಾಮಿ, ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಪರಾರಿಯಾಗಿದ್ದ. ವಿಶೇಷ ಎಂದರೆ, ಪೊಲೀಸರಿಂದ ತಪ್ಪಿಸಿಕೊಂಡ ಈತ ಕದ್ದುಮುಚ್ಚಿ ತಿರುಗುವ ಬದಲು ಹಿಂದಿ, ಗುಜರಾತಿ ಸಿನಿಮಾಗಳು ಹಾಗೂ ವೆಬ್ ಸರಣಿಗಳಲ್ಲಿ ಫೇಮಸ್ ನಟನಾಗಿ ಮಿಂಚುತ್ತಿದ್ದನು!
ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಪಿ.ಎಂ. ಧಕಾಡಾ ಅವರು ಪತ್ರಿಕಾಗೋಷ್ಠಿಯಲ್ಲಿ ಈ ರೋಚಕ ಕಾರ್ಯಾಚರಣೆಯ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಕಲರ್ಸ್ ಗುಜರಾತಿಯ ಪ್ರಸಿದ್ಧ ಧಾರಾವಾಹಿ ‘ಮೋತಿ ಬಾನಿ ನಾನಿ ವಹು’ ಸೆಟ್‌ನಲ್ಲಿ ನಟಿಸುತ್ತಿದ್ದ ಹೇಮಂತ್ ಮೋದಿ ಎಂಬಾತನೇ ಈ ಹಂತಕ. ಪೊಲೀಸರು ಆತನನ್ನು ಬಂಧಿಸಲು ಹೋದಾಗ ಆತನ ಗೆಟಪ್ ಮತ್ತು ಕೇಶವಿನ್ಯಾಸ ಸಂಪೂರ್ಣ ಬದಲಾಗಿದ್ದರಿಂದ ಗುರುತಿಸುವುದೇ ಕಷ್ಟವಾಗಿತ್ತು.
ಆದರೆ ಆತನ ದೇಹದ ಮೇಲಿದ್ದ ಹಳೆಯ ಮಚ್ಚೆ ಮತ್ತು ಗಾಯದ ಗುರುತುಗಳನ್ನು (Identification Marks) ಪೊಲೀಸರು ತಮ್ಮ ಡೇಟಾದೊಂದಿಗೆ ಮ್ಯಾಚ್ ಮಾಡಿದಾಗ ಈ ನಟನ ಅಸಲಿ ಮುಖವಾಡ ಕಳಚಿ ಬಿದ್ದಿದೆ. ತೀವ್ರ ವಿಚಾರಣೆಯ ನಂತರ ತಾನು 12 ವರ್ಷಗಳಿಂದ ಓಡುತ್ತಿದ್ದ ಹಂತಕನೇ ಎಂದು ಒಪ್ಪಿಕೊಂಡಿದ್ದಾನೆ.
ಕೊಲೆ ಹಗರಣಕ್ಕೂ ಮುನ್ನ ಹೇಮಂತ್ ಮೋದಿ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ವಾಸವಾಗಿದ್ದ ಮತ್ತು ವೃತ್ತಿಯಲ್ಲಿ ಸ್ವತಃ ಒಬ್ಬ ಚಾಣಾಕ್ಷ ವಕೀಲನಾಗಿದ್ದ. ಕಳೆದ ಜೂನ್ 12, 2005 ರಂದು ನೆರೆಹೊರೆಯವರ ಜೊತೆಗಿನ ಸಣ್ಣ ಜಗಳದಲ್ಲಿ ಈತ ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಸೇರಿ ನರೇಂದ್ರ ತಮ್ಲೆ ಎಂಬಾತನನ್ನು ಕ್ರೂರವಾಗಿ ಕೊಲೆ ಮಾಡಿದ್ದ.
ತಾನು ವಕೀಲನಾಗಿದ್ದರಿಂದ ತಾನೇ ಖುದ್ದಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಿ ತನ್ನ ಗ್ಯಾಂಗ್ ಅನ್ನು ರಕ್ಷಿಸಲು ನೋಡಿದ್ದ. ಆದರೆ ನ್ಯಾಯಾಲಯ 2008 ರಲ್ಲಿ ಹೇಮಂತ್ ಸೇರಿದಂತೆ ಒಟ್ಟು ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಬರಮತಿ ಜೈಲಿಗೆ ತಳ್ಳಿತ್ತು.
ಕಾನೂನಿನ ಪ್ರತಿಯೊಂದು ಸಣ್ಣ ಸಂದು-ಗೊಂದೂ ತಿಳಿದಿದ್ದ ಹೇಮಂತ್ ಮೋದಿ, ಜೈಲಿನ ಮ್ಯಾನುಯಲ್ ಬಳಸಿ ಅಂದಿನ ಜೈಲರ್ ಕೇಶವ್ ಕುಮಾರ್ ವಿರುದ್ಧವೇ ಸಾಲು ಸಾಲು ಅರ್ಜಿಗಳನ್ನು ಸಲ್ಲಿಸಿ ಕಾಟ ಕೊಟ್ಟಿದ್ದ. ತನಗೆ ಮಾನಸಿಕ ಖಿನ್ನತೆ (Depression) ಇದೆ ಎಂದು ನಾಟಕವಾಡಿ ತನ್ನನ್ನು ಮೆಹ್ಸಾನಾ ಜೈಲಿಗೆ ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅಲ್ಲಿ ಆರು ವರ್ಷ ಕ ಕಳೆದ ನಂತರ ತನ್ನ ಬುದ್ಧಿವಂತಿಕೆಯಿಂದ ಗುಜರಾತ್ ಹೈಕೋರ್ಟ್‌ನಿಂದ 30 ದಿನಗಳ ಪೆರೋಲ್ (Parole) ಗಿಟ್ಟಿಸಿಕೊಂಡಿದ್ದ.
ಪೆರೋಲ್ ಜಂಪ್ ಮಾಡಿದ ನಂತರ ಈತ ತನ್ನ ಹೆಂಡತಿಗೂ ಡಿವೋರ್ಸ್ ನೀಡಿ ಮೊದಲು ಪಟಾನ್‌ನ ವಿವಿಧ ಪಿಜಿಗಳಲ್ಲಿ ತಲೆಮರೆಸಿಕೊಂಡಿದ್ದ. ನಂತರ ಮುಂಬೈಗೆ ಜಿಗಿದು ಅಲ್ಲಿ ತನ್ನ ಹೆಸರನ್ನು ‘ಟ್ವಿಂಕಲ್ ಮುಕುಂದ್‌ಭಾಯ್ ಡೇವ್’ ಎಂದು ಬದಲಾಯಿಸಿಕೊಂಡಿದ್ದ. ಮುಂಬೈನಲ್ಲಿ ಸ್ವಲ್ಪ ದಿನ ಕಷ್ಟಪಟ್ಟು ನಂತರ ನಾಟಕಗಳಲ್ಲಿ ನಟಿಸಲು ಶುರುಮಾಡಿದ. ಅಲ್ಲಿ ತನ್ನ ಹೆಸರನ್ನು ಮತ್ತೆ ‘ಸ್ವಪ್ನಿಲ್ ಮೋದಿ’ (Swapnil Modi) ಎಂದು ರೀ-ಬ್ರ್ಯಾಂಡ್ ಮಾಡಿಕೊಂಡ ಈ ಶತಿರ್ ಕ್ರಿಮಿನಲ್, ಬಾಲಿವುಡ್‌ನ ದೊಡ್ಡ ಸ್ಟಾರ್ ನಟರ ಜೊತೆ ಸೈಡ್ ರೋಲ್‌ಗಳನ್ನು ಗಿಟ್ಟಿಸಿಕೊಳ್ಳಲು ಆರಂಭಿಸಿದ. ಯಾರೂ ಗುರುತಿಸದಂತೆ ತನ್ನ ಹೇರ್‌ಸ್ಟೈಲ್ ಪೂರ್ತಿ ಚೇಂಜ್ ಮಾಡಿಕೊಂಡಿದ್ದ.
ಈ ಖತರ್ನಾಕ್ ನಟ ಕೇವಲ ಸಣ್ಣಪುಟ್ಟ ಸೀರಿಯಲ್ ಅಷ್ಟೇ ಅಲ್ಲ, ಬರೋಬ್ಬರಿ 40 ಕ್ಕೂ ಹೆಚ್ಚು ಚಲನಚಿತ್ರಗಳು, ಧಾರಾವಾಹಿಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸಿದ್ದಾನೆ. ಇದರಲ್ಲಿ 5 ಬಾಲಿವುಡ್ (Bollywood) ಚಿತ್ರಗಳು, 20 ಗುಜರಾತಿ ಸಿನಿಮಾಗಳು ಸೇರಿವೆ. ಅಮೀರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದೂಸ್ತಾನ್’, ರಣವೀರ್ ಸಿಂಗ್ ಅವರ ‘ಜಯೇಶ್‌ಭಾಯ್ ಜೋರ್ದಾರ್’, ‘ಮೆಟ್ರೋ ಇನ್ ಡಿನೋ’, ‘ವಾಗ್ಲೆ ಕಿ ದುನಿಯಾ’ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಸನ್ನಿ ಡಿಯೋಲ್ ಅವರ ಬಿಗ್ ಮೂವಿ ‘ಲಾಹೋರ್ 1947’ ಚಿತ್ರದಲ್ಲೂ ಈ ಕೊಲೆಗಡುಕ ನಟಿಸಿದ್ದಾನೆ ಅಂದರೆ ನಂಬಲೇಬೇಕು!
ಮುಂಬೈನಲ್ಲಿ ಮೆರೆದು ಇತ್ತೀಚೆಗೆ ಅಹಮದಾಬಾದ್‌ಗೆ ವಾಪಸ್ ಬಂದಿದ್ದ ಈತ, ಅಲ್ಲಿನ ಕೋಟ್ ಪ್ರದೇಶದಲ್ಲಿ ಸುಳ್ಳು ಹೇಳಿ ಬಾಡಿಗೆ ಮನೆ ಪಡೆದಿದ್ದ. ಸುತ್ತಮುತ್ತಲಿನ ಜನರಿಗೆ ತಾನು ಮುಂಬೈನ ದೊಡ್ಡ ನಟ ಎಂದು ಶೋ ಆಫ್ ಮಾಡುತ್ತಿದ್ದ. ಆದರೆ ಈತನ ಅತಿಯಾದ ಚಲನವಲನ ನೋಡಿ ಅಲ್ಲಿನ ಒಬ್ಬ ಸಮಾಜ ಸೇವಕನಿಗೆ (Social Worker) ಡೌಟ್ ಬಂದಿದೆ. ಜೊತೆಗೆ ಮನೆ ಮಾಲೀಕನಿಗೆ ಈತ ಆಧಾರ್ ಕಾರ್ಡ್ (Aadhaar Card) ಸೇರಿದಂತೆ ಯಾವುದೇ ಐಡಿ ಪ್ರೂಫ್ ಕೊಟ್ಟಿರಲಿಲ್ಲ. ಇದೇ ವೇಳೆ ಅಲ್ಲಿದ್ದ ಮತ್ತೊಬ್ಬ ವಕೀಲನಿಗೆ ಈತನ ಮುಖ ಹಳೇ ಕ್ರಿಮಿನಲ್‌ನಂತೆ ಕಾಣಿಸಿದ್ದು, ತಕ್ಷಣ ಪೊಲೀಸರಿಗೆ ಇನ್ಫಾರ್ಮೇಷನ್ ತಲುಪಿಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ನಟನ ಮನೆಯ ಸುತ್ತ ಮೌನವಾಗಿ ಕಾವಲು ನಿಲ್ಲಿಸಿ ಯೋಜನೆ ಮಾಡಿದರು. ಆತ ಮನೆಯಿಂದ ಹೊರಬಂದ ಕ್ಷಣವೇ ಸಿನಿಮೀಯ ಶೈಲಿಯಲ್ಲಿ ಮುತ್ತಿಗೆ ಹಾಕಿ ಬಂಧಿಸಿದರು. ಇದರೊಂದಿಗೆ ಕಳೆದ 12 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಬೆಳ್ಳಿತೆರೆಯ ಮೇಲೆ ಸ್ಟಾರ್ ನಟರ ಜೊತೆ ಫೋಟೋಗೆ ಪೋಸ್ ಕೊಡುತ್ತಿದ್ದ ಒಬ್ಬ ಕ್ರೂರ ಹಂತಕನ ನಿಜ ಜೀವನದ ಡ್ರಾಮಾಗೆ ಕೊನೆಗೂ ಕ್ಲೈಮ್ಯಾಕ್ಸ್ (Climax) ಬಂದಿದೆ. ಸದ್ಯ ಈ ಸುದ್ದಿ ಇಡೀ ಸಿನಿಮಾರಂಗವನ್ನು ನಡುಗಿಸಿದೆ.
May 22, 2026 11:14 AM IST













