Last Updated:
ಹಾಸನದ ಮೋಹಿತ್ ಎಚ್.ಎಸ್. 2026ರ FIH ಪುರುಷರ ಹಾಕಿ ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಏಕೈಕ ಆಟಗಾರರಾಗಿರುವ ಅವರು ಭಾರತ 50 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ಕನಸಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.
ಕೊಡಗಿನ (Kodagu) ಕೂಡಿಗೆಯ ಕ್ರೀಡಾಶಾಲೆಯಲ್ಲಿ ಆರಂಭವಾದ ಕನಸು ಈಗ ವಿಶ್ವ ಹಾಕಿ ವೇದಿಕೆಯನ್ನು ತಲುಪಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಮೋಹಿತ್ ಎಚ್.ಎಸ್. ಅವರು 2026ರ ಎಫ್ಐಎಚ್ (FIH) ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತದ ರಾಷ್ಟ್ರೀಯ ತಂಡದಲ್ಲಿ (Indian National Team) ಸ್ಥಾನ ಪಡೆದಿದ್ದು, ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ ತಂದಿದ್ದಾರೆ. ಆಗಸ್ಟ್ 15ರಿಂದ 30ರವರೆಗೆ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ 16ನೇ ಆವೃತ್ತಿಯ FIH ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ (India) ಗೋಲ್ಪೋಸ್ಟ್ ಕಾಯುವ ಜವಾಬ್ದಾರಿ ಇದೀಗ ಈ ಕನ್ನಡಿಗ ಆಟಗಾರನ ಹೆಗಲೇರಿದೆ.
24 ವರ್ಷದ ಮೋಹಿತ್ ಎಚ್.ಎಸ್. ಅವರು 2015ರಲ್ಲಿ ಕೂಡಿಗೆಯ ಕ್ರೀಡಾಶಾಲೆಗೆ ಆಯ್ಕೆಯಾಗಿದ್ದರು. ಅಲ್ಲಿ 2018ರವರೆಗೆ ಹಾಕಿ ತರಬೇತುದಾರ ಸಂಜಯ್ ಬಾಣದ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, ಆರಂಭದಿಂದಲೇ ಗೋಲ್ಕೀಪರ್ ಸ್ಥಾನದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಅದೇ ಪರಿಶ್ರಮ ಇಂದು ಅವರನ್ನು ಭಾರತದ ಹಿರಿಯ ರಾಷ್ಟ್ರೀಯ ತಂಡದ ಗೋಲ್ಕೀಪರ್ ಆಗಿ ವಿಶ್ವಕಪ್ ಆಡಲು ಅರ್ಹರನ್ನಾಗಿಸಿದೆ.
ಈ ಬಾರಿಯ ವಿಶ್ವಕಪ್ಗೆ ಆಯ್ಕೆಯಾದ ಭಾರತದ ತಂಡದಲ್ಲಿ ಕರ್ನಾಟಕದಿಂದ ಸ್ಥಾನ ಪಡೆದಿರುವ ಏಕೈಕ ಆಟಗಾರ ಮೋಹಿತ್ ಎಚ್.ಎಸ್. ಎಂಬುದು ಮತ್ತೊಂದು ವಿಶೇಷ. ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಶಶಿಕುಮಾರ್ ಹಾಗೂ ಆಶಾರಾಣಿ ದಂಪತಿಯ ಪುತ್ರ. ಗ್ರಾಮೀಣ ಹಿನ್ನೆಲೆಯಿಂದ ರಾಷ್ಟ್ರೀಯ ತಂಡದವರೆಗೆ ಏರಿದ ಇವರ ಪಯಣ ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.
ಮೋಹಿತ್ ಈಗಾಗಲೇ ಭಾರತದ ಜೂನಿಯರ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
- 2023 FIH ಜೂನಿಯರ್ ವಿಶ್ವಕಪ್ – ಭಾರತ ನಾಲ್ಕನೇ ಸ್ಥಾನ
- ಸುಲ್ತಾನ್ ಆಫ್ ಜೋಹಾರ್ ಕಪ್ – ಕಂಚಿನ ಪದಕ
- ಜೂನಿಯರ್ ಏಷ್ಯಾ ಕಪ್ – ಚಿನ್ನದ ಪದಕ
- FIH ಪ್ರೊ ಲೀಗ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ‘Player of the Match’ ಪ್ರದರ್ಶನ
ಈ ಸಾಧನೆಗಳೇ ಅವರಿಗೆ ಹಿರಿಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ತಂದುಕೊಟ್ಟಿವೆ.
ಕರ್ನಾಟಕದ ಯುವಕರಿಗೆ ಹೊಸ ಸ್ಪೂರ್ತಿ
ಕೂಡಿಗೆಯ ಕ್ರೀಡಾಶಾಲೆಯಲ್ಲಿ ಆರಂಭವಾದ ಪಯಣ ಇಂದು ವಿಶ್ವಕಪ್ ವೇದಿಕೆಯನ್ನು ತಲುಪಿರುವುದು ಕರ್ನಾಟಕದ ಕ್ರೀಡಾ ಕ್ಷೇತ್ರಕ್ಕೂ ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಹಿನ್ನೆಲೆಯಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಏರಿದ ಮೋಹಿತ್ ಎಚ್.ಎಸ್. ಅವರ ಸಾಧನೆ, ಪರಿಶ್ರಮ ಮತ್ತು ಶಿಸ್ತು ಇದ್ದರೆ ಯಾವುದೇ ಕನಸು ಅಸಾಧ್ಯವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
Kodagu,Karnataka














