Last Updated:
ಧಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವಲ್ಲಿ ಕಾಕ್ರೋಚ್ ಪಾರ್ಟಿ ಯಶಸ್ವಿಯಾಗಿದೆ. ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಿಜೆಪಿ ಚುನಾವಣೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ ಅನ್ನೋ ಚರ್ಚೆ ಜೋರಾಗಿದೆ. ಈ ಬಗ್ಗೆ ಸಿಜೆಪಿ ಹೇಳಿದ್ದೇನು ಅನ್ನೋದ್ರ ಮಾಹಿತಿ ಇಲ್ಲಿದೆ.
ದೆಹಲಿ: ಜೂನ್ 6 ರಿಂದ ನಿರಂತರ ಹೋರಾಟ. ದೆಹಲಿಯ ಜಂತರ್ಮಂತರ್ನಲ್ಲಿ (Jantar Mantar) ಸಾವಿರಾರು ವಿದ್ಯಾರ್ಥಿಗಳ (Student) ಆಕ್ರೋಶ. ಪೊಲೀಸರ ಲಾಠಿ ಏಟು, ಜಲಫಿರಂಗಿ, ಅಶ್ರುವಾಯುಗೂ ಹೆದರದೇ ಹಗಲು-ರಾತ್ರಿ ಹೋರಾಟ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿಗೆ (Cockroach Janata Party) ಜಯ ಸಿಕ್ಕಿದೆ. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಡೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, 35 ದಿನಗಳ ಪ್ರತಿಭಟನೆಯನ್ನ ಅಂತ್ಯ ಮಾಡಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಸಾಕಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ರು. ಹೀಗಾಗಿ ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ತಾರಕಕ್ಕೇರಿತ್ತು. ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ ಪಟ್ಟು ಹಿಡಿದಿತ್ತು. ಇದಕ್ಕೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸಾಥ್ ನೀಡಿ 26 ದಿನ ಉಪವಾಸ ಸತ್ಯಾಗ್ರಹ ಕೂಡ ಮಾಡಿದ್ರು. ಇದೆಲ್ಲದರ ಮಧ್ಯೆ ಸಂಸತ್ನಲ್ಲೂ ಸಿಜೆಪಿ ಪಕ್ಷದ ಹೋರಾಟ ಹಾಗೂ ಲಾಠಿಚಾರ್ಜ್ ಕೋಲಾಹಲ ಎಬ್ಬಿಸಿತ್ತು. ಇಷ್ಟೆಲ್ಲಾ ಹೋರಾಟಕ್ಕೆ ಮಣಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕಡೆಗೂ ರಾಜೀನಾಮೆ ನೀಡಿದ್ದಾರೆ.
ಧಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬಳಿಕ, ಕಾಕ್ರೋಚ್ ಪಾರ್ಟಿ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿದ್ದು, ತಕ್ಷಣದಿಂದಲೇ ಸಿಜೆಪಿ ಪ್ರತಿಭಟನೆ ಅಂತ್ಯಗೊಳಿಸಲಾಗಿದೆ. ಪ್ರತಿಭಟನಾ ನಿರತ ಎಲ್ಲಾ ವಿದ್ಯಾರ್ಥಿಗಳು ಮನೆಗೆ ಮರಳುವಂತೆ ಮನವಿ ಮಾಡಿದ್ರು. ಏತನ್ಮಧ್ಯೆ, ಸಿಜೆಪಿ ರಾಜಕೀಯ ಪಕ್ಷದ ರಚನೆಯನ್ನು ಘೋಷಿಸಬಹುದೇ ಎಂಬ ಚರ್ಚೆ ಜೋರಾಗಿದ್ದು. ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಈ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಪ್ರತಿಭಟನೆಯು ವಿದ್ಯಾರ್ಥಿಗಳಿಗಾಗಿ ಮತ್ತು ದೇಶದ ವಿದ್ಯಾರ್ಥಿಗಳು ಬಹಳ ಬುದ್ಧಿವಂತರು ಮುಂದೆ ಏನಾಗುತ್ತದೆ ಎಂಬುದನ್ನು ಕಾಲವೇ ಹೇಳುತ್ತದೆ ಎಂದು ಎಬಿಪಿ ನ್ಯೂಸ್ ಹಿಂದಿ ವರದಿ ಮಾಡಿದೆ.
35 ದಿನಗಳಿಂದ ಸಿಜೆಪಿ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸ್ತಿದ್ರು. ಕೇಂದ್ರ ಸರ್ಕಾರದ ಜೊತೆ 2 ಬಾರಿ ಸಂಧಾನ ಸಭೆ ನಡೆದ್ರೂ ಅದು ಯಶಸ್ವಿ ಆಗಿರಲಿಲ್ಲ.. ಆದ್ರೆ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.
ಸಂಧಾನ ಸಭೆ ಬಳಿಕ ಮಾತನಾಡಿದ ಜೆ.ಪಿ ನಡ್ಡಾ, ವಿದ್ಯಾರ್ಥಿಗಳ ಬೇಡಿಕೆಗಳಿಗೆ ಒಪ್ಪಿದ್ದೇವೆ ಅವ್ರ ಮೇಲೆ ಕೇಸ್ ಹಾಕಲ್ಲ ಎಂದು ಭರವಸೆ ನೀಡಿದ್ದಾರೆ. ಸೌರವ್ ದಾಸ್ ಮತ್ತು ರಂಕಾ ಜೊತೆ ನಾವು ಸುದೀರ್ಘ ಚರ್ಚೆ ನಡೆಸಿದ್ದೇವೆ. ಲಿಖಿತ ಪ್ರಸ್ತಾವನೆಯೊಂದಿಗೆ ಅವರು ಆಗಮಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಅಂಶಗಳನ್ನು ಮಂಡಿಸಿದರು. ಯಾವುದೇ ದೂರುಗಳನ್ನ ದಾಖಲಿಸ್ತಿಲ್ಲ. ಯಾವುದೇ ಎಫ್ಐಆರ್ ದಾಖಲಾಗಲ್ಲ. ಎರಡನೇಯದಾಗಿ, ಪರಿಹಾರದ ವಿಷಯದಲ್ಲಿ ನಮಗೂ ಸಹಾನುಭೂತಿಯಿದೆ. ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಪರಿಹಾರವನ್ನು ನೀಡಲಾಗುವುದು. ಸಾಧ್ಯವಿರುವ ಗರಿಷ್ಠ ಮೊತ್ತವನ್ನು ಅವರಿಗೆ ಒದಗಿಸಲಾಗುವುದು ಎಂದು ಜೆಪಿ ನಡ್ಡಾ ತಿಳಿಸಿದರು.














