Last Updated:
ರೂಪಶ್ರೀ ವರ್ಕಾಡಿ ಅವರಿಗೆ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕನ್ನಡದ ಪೋಷಕ ನಟಿಯೊಬ್ಬರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು.
ಮಂಗಳೂರು: ಬರೋಬ್ಬರಿ 92 ವರ್ಷಗಳ ಸುದೀರ್ಘ ಕನ್ನಡ (Kannada) ಚಲನಚಿತ್ರ ಇತಿಹಾಸದಲ್ಲಿ ಯಾರೂ ಮಾಡದ ಸಾಹಸವನ್ನು ಕರಾವಳಿಯ ಪ್ರತಿಭೆಯೊಂದು ಮಾಡಿ ತೋರಿಸಿದ್ದಾರೆ. ಅದೆಷ್ಟೋ ನಟಿಯರು ತೆರೆಯ ಮೇಲೆ ಮಿಂಚಿ ಮರೆಯಾಗಿದ್ದರೂ, ಕನ್ನಡದ ಪೋಷಕ ನಟಿಯೊಬ್ಬರಿಗೆ (Supporting Actress) ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯ (National Award) ಮನ್ನಣೆ ಈವರೆಗೆ ಸಿಕ್ಕಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಮಿಥ್ಯ’ ಕನ್ನಡ ಸಿನಿಮಾದ ಅದ್ಭುತ ಅಭಿನಯಕ್ಕಾಗಿ ಕರಾವಳಿಯ ಹೆಮ್ಮೆಯ ನಟಿ ರೂಪಶ್ರೀ ವರ್ಕಾಡಿ (Roopashree Varkadi) ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದ್ದು, ಇಡೀ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದ್ದಾರೆ.
9ನೇ ತರಗತಿಯಲ್ಲಿದ್ದಾಗಲೇ ರಂಗಭೂಮಿಗೆ ಕಾಲಿಟ್ಟ ಇವರ ಮೊದಲ ಸಂಪಾದನೆ ಕೇವಲ 500 ರೂಪಾಯಿಗಳಾಗಿತ್ತು. ಅದೇ ಹಣದ ಹುಮ್ಮಸ್ಸಿನಲ್ಲಿ ನಾಟಕ ರಂಗದಲ್ಲಿ ಮುಂದುವರಿದ ಅವರು, ನಂತರ ಸಿನಿಮಾರಂಗಕ್ಕೆ ಪ್ರವೇಶಿಸಿದರು.
ಕಳೆದ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ತುಳು, ಕನ್ನಡ, ಬ್ಯಾರಿ, ಕೊಂಕಣಿ ಹಾಗೂ ಅರೆಭಾಷೆ ಸೇರಿದಂತೆ ಒಟ್ಟು 85ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ತಾವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಕೇವಲ ಪೋಷಕ ನಟಿಯಾಗಿಯೇ ಅಭಿನಯಿಸಿರುವ ರೂಪಶ್ರೀ, ಇಂದು ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕರಾವಳಿಯ ಮಣ್ಣಿನ ಈ ಪ್ರತಿಮೆಯ ಸಾಧನೆ ಈಗ ಇಡೀ ಸ್ಯಾಂಡ್‍ವುಡ್‍ನಲ್ಲಿ ಸಂಚಲನ ಮೂಡಿಸಿದೆ.
Dakshina Kannada,Karnataka














