Last Updated:
ಸ್ವತಃ ಸೋಹುಮ್ ಶಾ ಅವರು ಆಲಿಯಾ ಭಟ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು, ಆಲಿಯಾ ಚಿತ್ರದ ಭಾಗವಾಗಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಹಾರರ್-ಫ್ಯಾಂಟಸಿ ಚಿತ್ರಗಳಲ್ಲಿ (Horror-Fantasy Films) ಒಂದೆಂದು ಗುರುತಿಸಿಕೊಂಡಿರುವ ‘ತುಂಬಾಡ್’ (Thumbaad) ಚಿತ್ರದ ಸೀಕ್ವೆಲ್ ಕುರಿತು ಬಹುನಿರೀಕ್ಷಿತ ಮಾಹಿತಿ ಹೊರಬಿದ್ದಿದೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಸೋಹುಮ್ ಶಾ ಅಭಿನಯದ ‘ತುಂಬಾಡ್ 2’ಗೆ ಖ್ಯಾತ ನಟಿ ಆಲಿಯಾ ಭಟ್ (Alia Bhatt) ಎಂಟ್ರಿ ಕೊಟ್ಟಿದ್ದಾರೆ.
2018ರಲ್ಲಿ ಬಿಡುಗಡೆಯಾದ ತುಂಬಾಡ್ ಆರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಾಣದಿದ್ದರೂ, ನಂತರ ತನ್ನ ವಿಶಿಷ್ಟ ಕಥೆ, ಅದ್ಭುತ ದೃಶ್ಯ ವೈಭವದ ಮೂಲಕ ಅಪಾರ ಮೆಚ್ಚುಗೆ ಗಳಿಸಿತು. ಚಿತ್ರದಲ್ಲಿ ಸೋಹುಮ್ ಶಾ ಪ್ರಮುಖ ಪಾತ್ರ ನಿರ್ವಹಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು.
ಮಾನವನ ದುರಾಸೆ, ನಿಗೂಢ ನಿಧಿ ಮತ್ತು ಹಸ್ತಾರ್ ದೇವತೆಯ ಪುರಾಣವನ್ನು ಆಧರಿಸಿ ನಿರ್ಮಿಸಲಾದ ಈ ಸಿನಿಮಾ ಭಾರತೀಯ ಹಾರರ್ ಚಿತ್ರಗಳ ಇತಿಹಾಸದಲ್ಲಿ ವಿಭಿನ್ನ ಸ್ಥಾನ ಪಡೆದುಕೊಂಡಿತು. ಅದರ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಹಾಗೂ ವಿಎಫ್‌ಎಕ್ಸ್ ಕೂಡ ಪ್ರೇಕ್ಷಕರಿಂದ ಪ್ರಶಂಸೆ ಪಡೆದಿದ್ದವು.
ಚಿತ್ರ ಬಿಡುಗಡೆಯಾದ ಕೆಲವು ವರ್ಷಗಳ ಬಳಿಕ ತುಂಬಾಡ್ ಮರುಬಿಡುಗಡೆಯಾಗಿತ್ತು. ವಿಶೇಷವೆಂದರೆ, ರೀ-ರಿಲೀಸ್ ವೇಳೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 27 ಕೋಟಿ ರೂಪಾಯಿ ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿತ್ತು. ಹೊಸ ತಲೆಮಾರಿನ ಪ್ರೇಕ್ಷಕರೂ ಚಿತ್ರವನ್ನು ಮೆಚ್ಚಿಕೊಂಡಿದ್ದು, ಸೀಕ್ವೆಲ್ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿತ್ತು.
ತುಂಬಾಡ್ 2 ಘೋಷಣೆಯಾದ ನಂತರ ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ನಟಿ ಸಮಂತಾ ರುತ್ ಪ್ರಭು, ಜಾಹ್ನವಿ ಕಪೂರ್ ಸೇರಿದಂತೆ ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದವು.
‘ತುಂಬಾಡ್ 2’ನಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ. ಸೋಹುಮ್ ಶಾ ಅವರೊಂದಿಗೆ ನವಾಜುದ್ದೀನ್ ಹಾಗೂ ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸೋಹುಮ್ ಶಾ ಮೊದಲ ಭಾಗದಲ್ಲಿ ನಿರ್ವಹಿಸಿದ್ದ ವಿನಾಯಕ್ ರಾವ್ ಪಾತ್ರವನ್ನೇ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಮೊದಲ ಭಾಗದಲ್ಲಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ್ದ ಹಸ್ತಾರ್ ದೇವತೆಯ ನಿಗೂಢ ಕಥೆ ಮತ್ತು ಮಾನವನ ದುರಾಸೆಯ ಸುತ್ತ ಹೆಣೆದ ಕಥಾಹಂದರ ಎರಡನೇ ಭಾಗದಲ್ಲೂ ಮುಂದುವರಿಯಲಿದೆ. ಭಾರತೀಯ ಪುರಾಣಗಳ ಹಿನ್ನೆಲೆಯೊಂದಿಗೆ ಮತ್ತಷ್ಟು ಭಯಾನಕ ಹಾಗೂ ರೋಚಕ ಅನುಭವವನ್ನು ನೀಡುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ ಎನ್ನಲಾಗಿದೆ.
ಚಿತ್ರವನ್ನು ಆದೇಶ್ ಪ್ರಸಾದ್ ನಿರ್ದೇಶಿಸುತ್ತಿದ್ದು, ತುಂಬಾಡ್ 2 2027ರ ಡಿಸೆಂಬರ್ 3ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅಧಿಕೃತ ಬಿಡುಗಡೆ ದಿನಾಂಕ ಪ್ರಕಟವಾಗಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
Bangalore [Bangalore],Bangalore,Karnataka














