Last Updated:
ಈ ವಿಮಾನ ಅಪಘಾತದಲ್ಲಿ ಒಬ್ಬ ವ್ಯಕ್ತಿ ಬದುಕುಳಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು, ಆದರೆ ನಂತರ ಪತ್ರಿಕಾಗೋಷ್ಠಿಯಲ್ಲಿ ಆ ವ್ಯಕ್ತಿ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಅಧಿಕಾರಿಗಳು ಮೃತಪಟ್ಟವರ ಗುರುತುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.
ನಸ್ಸೌವ್: ಕೆರೀಬಿಯನ್ ದ್ವೀಪ ಸಮುದ್ರದ ಬಹಾಮಾಸ್‌ನಲ್ಲಿ ವಿಮಾನವೊಂದು ಪತನಗೊಂಡು (Plane Crash) ಅದರಲ್ಲಿದ್ದ ಎಲ್ಲಾ 10 ಮಂದಿ ಕೂಡ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ದ್ವೀಪಸಮೂಹದ ರಾಜಧಾನಿಯಾದ ನಸ್ಸೌವಿನ ಪಶ್ಚಿಮಕ್ಕೆ ಇರುವ ಉತ್ತರ ಆಂಡ್ರೋಸ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಬಹಾಮಾಸ್‌ನಲ್ಲಿ ವಿಮಾನ ಪತನಗೊಂಡ ನಂತರ ಈ ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಅತ್ತ ಸ್ಥಳೀಯ ಸರ್ಕಾರವು ಫ್ಲೆಮಿಂಗೊ ಏರ್ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದೆ.
ಉತ್ತರ ಆಂಡ್ರೋಸ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದ್ದು, ವಿಮಾನವು ರಾಜಧಾನಿ ನಸ್ಸೌದಲ್ಲಿರುವ ಲಿಂಡೆನ್ ಪಿಂಡ್ಲಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಯಾನ್ ಆಂಡ್ರೋಸ್‌ಗೆ ಹೊರಟಿತ್ತು. ಪ್ರಾಥಮಿಕ ತನಿಖೆಗಳ ಪ್ರಕಾರ, ಹಾರಾಟದ ಸಮಯದಲ್ಲಿ ವಿಮಾನವು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಅನುಭವಿಸಿತು, ಇದರಿಂದಾಗಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅರಣ್ಯ ಪ್ರದೇಶಕ್ಕೆ ಅಪ್ಪಳಿಸಿತು ಎಂದು ಹೇಳಲಾಗಿದೆ.
ಪೊಲೀಸರ ಪ್ರಕಾರ, ಅಪಘಾತದ ನಂತರ ಆತಂಭದಲ್ಲಿ ಒಬ್ಬ ವ್ಯಕ್ತಿ ಜೀವಂತವಾಗಿ ಪತ್ತೆಯಾಗಿದ್ದಾನೆ, ಆದರೆ ನಂತರ ಅವನು ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೃತರ ಗುರುತುಗಳು ಮತ್ತು ಪ್ರಯಾಣಿಕರ ಪಟ್ಟಿಯನ್ನು ಅವರ ಕುಟುಂಬಗಳಿಗೆ ಅಧಿಕೃತವಾಗಿ ತಿಳಿಸುವವರೆಗೆ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














