Last Updated:
ತಾಯಿ ಮತ್ತು ಮಗ ಒಟ್ಟಿಗೆ ಯೂಟ್ಯೂಬ್ ನೋಡಿ ಸರಗಳ್ಳತನ ಹೇಗೆ ಮಾಡಬೇಕು ಎಂದು ಕಲಿತುಕೊಂಡಿದ್ದರು. ಇದರಂತೆ ಪ್ಲ್ಯಾನ್ ಮಾಡಿ, ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು. ಸಂತ್ರಸ್ತ ವೃದ್ಧೆ ನೀಡಿದ್ದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.
ಆಕೆ ಐಷಾರಾಮಿ ಜೀವನಕ್ಕೆ ಅಭ್ಯಾಸ ಆಗಿದ್ದಳು (Luxury Lifestyle). ಮನಸ್ಸಿಗೆ ಬಂದಂತೆ ಸಾಲ ಮಾಡಿ ಕಷ್ಟಗಳನ್ನು ತಂದುಕೊಂಡಿದ್ದಳು. ಸಾಲಗಾರರು (Creditors) ಹಿಂದೆ ಬಿದ್ದ ಕಾರಣ ಪತಿಯನ್ನು ಬಿಟ್ಟು ಬಂದಿದ್ದರು. ಆಕೆಗೆ ಸಾಲ ತೀರುವುದು ಹೇಗೆ ಎಂದು ತಿಳಿಯದೇ, ಸುಲಭವಾಗಿ ಹಣ ಮಾಡುವ ದಾರಿಗಾಗಿ ಯೂಟ್ಯೂಬ್ (Youtube) ನೋಡಿ ಕಳ್ಳತನ ಮಾಡೋದನ್ನು ಕಲಿತಿದ್ದರು. ಇದರೊಂದಿಗೆ ಮಗನೊಂದಿಗೆ (Mother and Son) ಸೇರಿ ಕಳ್ಳತನ ಮಾಡಲು ಪ್ರಾರಂಭಿಸಿದ್ದರು. ಆದರೆ ಯಾರು ಊಹೆಯೇ ಮಾಡದಂತೆ ಇಬ್ಬರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ವಿಶಾಖಪಟ್ಟಣದಲ್ಲಿ (Visakhapatnam) ನಡೆದ ಘಟನೆಯ ವಿವರಗಳು ಈ ಕೆಳಗಿನಂತಿವೆ.
ವಿಶಾಖಪಟ್ಟಣದ ರಾಮಾ ಟಾಕೀಸ್ ಪ್ರದೇಶದಲ್ಲಿ ಧನಲಕ್ಷ್ಮಿ, ಗೋಪಿಕೃಷ್ಣ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗೆ ಪದವಿ ಪೂರ್ಣಗೊಳಿಸಿದ್ದ ಮಗ ಕೂಡ ಇದ್ದಾನೆ. ಗೋಪಿಕೃಷ್ಣ ಕಾರು ಚಾಲಕ ಆಗಿದ್ದು, ಧನಲಕ್ಷ್ಮೀ ಚೀಟಿಗಳನ್ನು ನಡೆಸುತ್ತಿದ್ದರಂತೆ. ಚೀಟಿ ನಡೆಸುತ್ತಿದ್ದ ಕಾರಣ ಕೈಯಲ್ಲಿ ಹೆಚ್ಚು ಹೆಚ್ಚು ಹಣ ಓಡಾಡುತ್ತಿತ್ತು. ಇದರೊಂದಿಗೆ ಆಕೆಯ ಮನಸ್ಸಿಗೆ ಬಂದಂತೆ ಹಣವನ್ನು ಖರ್ಚು ಮಾಡಲು ಶುರು ಮಾಡಿದ್ದರಂತೆ. ಅಲ್ಲದೇ ನಗರದಲ್ಲಿ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದಳಂತೆ, ಆದರೆ ಕೆಲವು ಇಎಂಐಗಳನ್ನು ಮಾತ್ರ ಸರಿಯಾಗಿ ಪಾವತಿ ಮಾಡಿರಲಿಲ್ಲವಂತೆ.
ಇತ್ತ ಸಾಲಗಾರರು ಧನಲಕ್ಷ್ಮೀ ಹಿಂದೆ ಬೀಳುತ್ತಿದ್ದಂತೆ, ಪತಿಯೊಂದಿಗೆ ಜಗಳ ಮಾಡಿಕೊಂಡು ದೂರ ಆಗಿದ್ದರಂತೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳಂತೆ. ಆದರೆ ಧೈರ್ಯ ಬಾರದೆ ಸುಲಭವಾಗಿ ಹಣ ಮಾಡಲು ಯೂಟ್ಯೂಬ್ ನೋಡಿ ಪ್ಲ್ಯಾನ್ ರೂಪಿಸಿದ್ದಳಂತೆ. ಇದರಂತೆ ಮಗನೊಂದಿಗೆ ಸೇರಿ ಸರಗಳ್ಳತನ ಮಾಡಲು ಆರಂಭಿಸಿದ್ದರಂತೆ. ಯಾರಿಗೂ ಸಿಗದಂತೆ ತಪ್ಪಿಸಿಕೊಳ್ಳುವುದು ಹೇಗೆ ಅಂತ ಯೂಟ್ಯೂಬ್ ಮೂಲಕ ಕಲಿತು ಮುನ್ನೆಚ್ಚರಿಕೆಗಳನ್ನು ಕಲಿತಿದ್ದರಂತೆ.
ಸರಗಳ್ಳತನಕ್ಕೆ ಹೋದ ಸಂದರ್ಭದಲ್ಲಿ ಯಾರಿಗೂ ಸಿಗದಂತೆ ಬೈಕ್ ಹಿಂದಿನ ನಂಬರ್ ಪ್ಲೇಟ್ ಬಿಚ್ಚಿಟ್ಟಿದ್ದರಂತೆ. ಬೈಕ್ ಮುಂದಿರುವ ನಂಬರ್ ಪ್ಲೇಟ್ ಕಾಣಿಸದಂತೆ ರಿಬ್ಬನ್ ಕಟ್ಟಿದ್ದರಂತೆ. ಮಗ ಕ್ಯಾಪ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದರೆ, ಧನಲಕ್ಷ್ಮೀ ಹಿಂದೆ ವೇಲ್ನೊಂದಿಗೆ ಮುಖಕ್ಕೆ ಸುತ್ತಿಕೊಂಡು ಯಾರಿಗೂ ಗುರುತು ಸಿಗದಂತೆ ಎಚ್ಚರಿಕೆ ವಹಿಸಿದ್ದಳಂತೆ. ಕಳೆದ ತಿಂಗಳು 27 ರಂದು ಇಬ್ಬರು ಒಟ್ಟಾಗಿ ಸುಜಾತ ನಗರಕ್ಕೆ ಹೋಗಿ, ಅಲ್ಲಿ ಒಂಟಿಯಾಗಿದ್ದ ವೃದ್ಧೆ ಚೆಲ್ಲಯ್ಯಮ್ಮ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರಂತೆ. ವೃದ್ಧೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಆಕೆ ಕುತ್ತಿಗೆಯಲ್ಲಿದ್ದ 5 ತೊಲ ಚಿನ್ನವನ್ನು ಕಿತ್ತುಕೊಂಡು ಅಲ್ಲಿಂದ ಯಶಸ್ವಿಯಾಗಿ ಪರಾರಿಯಾಗಿದ್ದರಂತೆ.
ಘಟನೆ ಸಂಬಂಧ ದೂರು ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತಾಯಿ-ಮಗ ಪೊಲೀಸರಿಗೆ ಸಿಗದಂತೆ ಕ್ಯಾಮೆರಾಗಳಿಂದ ಎಸ್ಕೇಪ್ ಆಗಿದ್ದರು. ಆದರೂ ಪೊಲೀಸರು ತಂತ್ರಜ್ಞಾನ ನೆರವು ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಸುಲಭದ ಹಣಕ್ಕಾಗಿ ಯೂಟ್ಯೂಬ್ ನಲ್ಲಿ ನೋಡಿ ಕಳ್ಳತನ ಮಾಡಿದ ತಾಯಿ-ಮಗನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ ಎಂದು ಸಮಯಂ ವರದಿ ಮಾಡಿದೆ.
Visakhapatnam,Visakhapatnam,Andhra Pradesh
Chain Snatching Case: ಯೂಟ್ಯೂಬ್ ನೋಡಿ ತಾಯಿ-ಮಗನಿಂದ ಸರಗಳ್ಳತನ; ತಪ್ಪಿಸಿಕೊಂಡಿದ್ದೇವೆ ಅಂತ ಸಂತೋಷದಲ್ಲಿದ್ದಾಗಲೇ ಬಿಗ್ ಶಾಕ್!













