Last Updated:
ಇರಾನ್-ಯುಎಸ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಮಧ್ಯೆ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ. ಪೆಟ್ರೋಲ್-ಡೀಸೆಲ್-ಎಲ್ಪಿಜಿ ಬಿಕ್ಕಟ್ಟು ಬಗೆಹರಿಸಲು ಮಹತ್ವದ ಹೆಜ್ಜೆ ಇಟ್ಟಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದ (Iran US War) ಹಾರ್ಮುಜ್ ಜಲಸಂಧಿ (Strait Of Hormuz) ಭಾಗದಲ್ಲಿ ದೊಡ್ಡ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಜಲಸಂಧಿಯ ಮೂಲಕವೇ ವಿಶ್ವದ ಸುಮಾರು 20% ಕಚ್ಚಾ ತೈಲ (Crude Oil) ಸಾಗಣೆ ಆಗುತ್ತದೆ. ಇಲ್ಲಿ ಯುದ್ಧ ಮತ್ತು ಗಲಭೆಗಳ ಕಾರಣದಿಂದ ತೈಲ ಸಾಗಣೆ ಮೂರು ತಿಂಗಳಿನಿಂದ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರೀ ಏರಿಕೆ ಕಂಡಿವೆ. ಇದರ ಹೊರೆ ಭಾರತದಂತ ದೊಡ್ಡ ಆಮದು ದೇಶಗಳ ಮೇಲೂ ಬಿದ್ದಿದೆ.
ಅಮೆರಿಕದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸುಮಾರು 50% ಹೆಚ್ಚಾಗಿವೆ. ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರಗಳನ್ನು ಏರಿಸಲು ಸರ್ಕಾರ ಮುಂದಾಗಿದೆ. ಎಲ್ಪಿಜಿ ಸಿಲಿಂಡರ್ ಪೂರೈಕೆಯ ಮೇಲೂ ಈ ಬಿಕ್ಕಟ್ಟಿನ ಪರಿಣಾಮ ಕಂಡುಬರುತ್ತಿದೆ. ತೈಲಕ್ಕೆ ಪರ್ಯಾಯ ಮೂಲಗಳನ್ನು ಹುಡುಕುವುದು ತುಂಬಾ ಸಮಯ ತೆಗೆದುಕೊಳ್ಳುವ ಮತ್ತು ದುಬಾರಿ ಕೆಲಸ. ಹೀಗಿರುವಾಗ ಭಾರತ ಒಂದು ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತ ತನ್ನ ಸಾಂಪ್ರದಾಯಿಕ, ವಿಶೇಷವಾಗಿ ಮಧ್ಯಪ್ರಾಚ್ಯದ ದೇಶಗಳಿಂದ ಬರುತ್ತಿದ್ದ ತೈಲ ಆಮದು ಮುಂದುವರಿಸಲು ಬಯಸುತ್ತಿದೆ. ಇದಕ್ಕಾಗಿ ಒಂದು ಮಹತ್ವದ ಯೋಜನೆಯನ್ನು ಭಾರತ ಆರಂಭಿಸಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಶಿಪ್ಪಿಂಗ್ ಕಾರ್ಪೊರೇಶನ್ನ ಟ್ಯಾಂಕರ್ಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಮತ್ತೆ ತೈಲ ಸಾಗಣೆಗೆ ಕಳುಹಿಸುವ ಯೋಚನೆ ಇದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಈ ಟ್ಯಾಂಕರ್ಗಳು ಪರ್ಷಿಯನ್ ಕೊಲ್ಲಿಯಿಂದ ಅಮೆರಿಕದ ಕಡೆಗೆ ಹೋಗಲು ಸಿದ್ಧವಾಗಿವೆ. ಆದರೆ ಭಾರತೀಯ ನೌಕಾಪಡೆ ಮತ್ತು ತೈಲ ಸಂಸ್ಕರಣಾಗಾರಗಳಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿವೆ. ಇರಾನ್-ಯುಎಸ್-ಇಸ್ರೇಲ್ ನಡುವಿನ ಸಂಘರ್ಷ ತೀವ್ರವಾದ ನಂತರ ಮೊದಲ ಬಾರಿಗೆ ಭಾರತ ಇಂತಹ ಸಾಹಸಮಯ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಈ ಟ್ಯಾಂಕರ್ಗಳು ಮಧ್ಯಪ್ರಾಚ್ಯದ ತೈಲ ಸರಬರಾಜು ಮಾಡುವ ದೇಶಗಳಿಗೆ ತೆರಳಿ ತೈಲವನ್ನು ಸಂಗ್ರಹಿಸಿ ಭಾರತಕ್ಕೆ ತರುತ್ತವೆ. ಸಂಪೂರ್ಣ ಯೋಜನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಯಾವಾಗಿನಿಂದ ಟ್ಯಾಂಕರ್ಗಳು ಹೊರಡುತ್ತವೆ, ಎಷ್ಟು ಹಡಗುಗಳನ್ನು ಕಳುಹಿಸಲಾಗುತ್ತದೆ ಎಂಬ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಸರ್ಕಾರವೇ ಈ ಯೋಜನೆಯನ್ನು ಅಧಿಕೃತವಾಗಿ ಅನುಮೋದಿಸಿತೇ ಇಲ್ಲವೇ ಅನ್ನುವುದೂ ಸ್ಪಷ್ಟವಾಗಿಲ್ಲ.
ಮತ್ತೊಂದೆಡೆ, ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಮತ್ತು ಇರಾನ್ ಎರಡೂ ದೇಶಗಳು ಪ್ರಭಾವ ಸಾಧಿಸಲು ಪ್ರಯತ್ನಿಸುತ್ತಿವೆ. ಈ ಪ್ರದೇಶಕ್ಕೆ ಯಾರೇ ಹಡಗು ಕಳುಹಿಸಿದರೂ ಅವರ ಅನುಮೋದನೆ ಇಲ್ಲದೆ ಹೋಗುವುದು ಅಪಾಯಕರ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯ ವ್ಯಕ್ತವಾಗುತ್ತಿದೆ. ಭಾರತ ಕೈಗೊಂಡಿರುವ ಈ ಯೋಜನೆಗೆ ಅಮೆರಿಕ ಮತ್ತು ಇರಾನ್ ಎರಡೂ ಒಪ್ಪಿಗೆಯಿದ್ಯಾ? ಇಲ್ಲವೇ ಎನ್ನುವುದು ಇನ್ನೂ ತಿಳಿದಿಲ್ಲ. ಇದರ ನಡುವೆಯೇ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರನ್ನು ಭೇಟಿ ಮಾಡಿದ್ದಾರೆ. ತೈಲದ ಭದ್ರ ಪೂರೈಕೆಯನ್ನು ಕುರಿತು ಅವರು ಚರ್ಚಿಸಿ ಇರಬಹುದು ಎಂದು ಊಹಿಸಲಾಗಿದೆ, ಆದರೆ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಹೆಚ್ಚು ಬಿಕ್ಕಟ್ಟು ತಾಳದಂತೆ ನೋಡಿಕೊಳ್ಳಲು ಭಾರತೀಯ ನೌಕಾಪಡೆ ತನ್ನ ಯುದ್ಧನೌಕೆಗಳ ಸಂಖ್ಯೆಯನ್ನು ಈ ಪ್ರದೇಶದಲ್ಲಿ ದ್ವಿಗುಣಗೊಳಿಸಿದೆ. ಭಾರತೀಯ ಧ್ವಜ ಹಾರಿಸುವ ಟ್ಯಾಂಕರ್ಗಳಿಗೆ ಭದ್ರತಾ ಕವಚವಾಗಿ ಈ ಯುದ್ಧನೌಕೆಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ಭಾರತದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಮತ್ತು ಭಾರತೀಯ ನೌಕಾಪಡೆಯು ಈ ಯೋಜನೆ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಒಟ್ಟಿನಲ್ಲಿ, ಇರಾನ್-ಅಮೆರಿಕ ಸಂಘರ್ಷ, ಹಾರ್ಮುಜ್ ಜಲಸಂಧಿಯ ಅಸ್ತವ್ಯಸ್ತತೆ ಮತ್ತು ತೈಲದ ಬೆಲೆ ಏರಿಕೆ ನಡುವೆ ಭಾರತ ತನ್ನ ತೈಲ ಭದ್ರತೆಯನ್ನು ಕಾಪಾಡಿಕೊಳ್ಳಲು ಕಠಿಣ ಮತ್ತು ಅಪಾಯಕರ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
May 20, 2026 11:51 AM IST













