Last Updated:
ರಾತ್ರಿ ಊಟಕ್ಕೆ ಮಟನ್ ಮತ್ತು ಮೊಸರು ತಿಂದ ವೃದ್ಧ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರ ಆರೋಗ್ಯ ದಿಢೀರ್ ಹದಗೆಟ್ಟಿದ್ದು, 68 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಪತಿ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ಊಟಕ್ಕೆ ಮಟನ್ ಮತ್ತು ಮೊಸರು ತಿಂದ ವೃದ್ಧ ದಂಪತಿ ದುರಂತಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ (Maharashtra) ನಾಶಿಕ್ ಜಿಲ್ಲೆಯ ಬಾಗ್ಲಾನ್ ತಾಲೂಕಿನ ಅಖ್ತವಾಡೆ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಟನ್ (Mutton) ಮತ್ತು ಮೊಸರು (Curd) ತಿಂದ ನಂತರ ವೃದ್ಧ ದಂಪತಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ತೀವ್ರ ವಿಷ ಆಹಾರದ ಅನುಭವವಾಗಿದೆ. ನಂತರ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ 68 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಚಿಕಿತ್ಸೆ ಸಮಯದಲ್ಲಿ ಪತ್ನಿ ಸಾವನಪ್ಪಿದ್ರೆ, ಅವರ 78 ವರ್ಷದ ಪತಿಯ ಸ್ಥಿತಿ ಗಂಭೀರವಾಗಿದೆ. ಈ ಘಟನೆಯು ಸ್ಥಳೀಯವಾಗಿ ಭೀತಿ ಹರಡಿದೆ. ರಾತ್ರಿ ಆರಾಮಾಗಿ ಊಟ ಮಾಡಿದ ದಂಪತಿಗೆ ಇದ್ದಕ್ಕಿದ್ದ ಹಾಗೇ ಹೀಗೆ ಅನಾರೋಗ್ಯವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಭಾನುವಾರ ರಾತ್ರಿ ಶಾಂತಾರಾಮ್ (78) ಮತ್ತು ಅವರ ಪತ್ನಿ ದ್ವಾರಕಾಬಾಯಿ (68) ಮನೆಯಲ್ಲಿ ಮಟನ್ ಬೇಯಿಸಿ ಊಟ ಮಾಡಿದ್ದರು. ಅದರ ಜೊತೆಗೆ ಮೊಸರೂ ಸೇರಿಸಿದ್ದರು. ಊಟ ಮಾಡಿದ ಸ್ವಲ್ಪ ಸಮಯದ ನಂತರ ಇಬ್ಬರಿಗೂ ವಾಂತಿ, ಅತಿಸಾರ ಮತ್ತು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರ ಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಕುಟುಂಬಸ್ಥರು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ಇಬ್ಬರನ್ನೂ ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ದ್ವಾರಕಾಬಾಯಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಶಾಂತಾರಾಮ್ ಅವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಅವರನ್ನು ಮಾಲೆಗಾಂವ್ನ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ವೆಂಟಿಲೇಟರ್ನಲ್ಲಿ ಇರಿಸಿ ನಿಕಟ ನಿಗಾವಹಿಸಲಾಗಿದೆ.
ಈ ಘಟನೆಯ ನಂತರ ಮಟನ್ ಜೊತೆ ಮೊಸರು ತಿಂದರೆ ವಿಷವಾಗುತ್ತದೆ ಎಂಬ ಚರ್ಚೆ ಸ್ಥಳೀಯರಲ್ಲಿ ತೀವ್ರಗೊಂಡಿದೆ. ಆದರೆ ವೈದ್ಯರು ಮತ್ತು ಆಹಾರ ತಜ್ಞರು ಹೇಳುವಂತೆ, ಮಟನ್ ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ನೇರವಾಗಿ ಸಾವಿಗೆ ಕಾರಣವಾಗುವ ಸಾಧ್ಯತೆ ಇಲ್ಲ. ನಿಜವಾದ ಕಾರಣ ಆಹಾರ ವಿಷ (ಫುಡ್ ಪಾಯ್ಸನಿಂಗ್) ಆಗಿರಬಹುದು ಎಂದು ಶಂಕಿಸಲಾಗಿದೆ. ಮಟನ್ ಹಳಸಿರಬಹುದು ಅಥವಾ ಮೊಸರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆದಿರಬಹುದು. ಆರ್ದ್ರ ಮತ್ತು ಬಿಸಿ ವಾತಾವರಣದಲ್ಲಿ ತಯಾರಿಸಿದ ಆಹಾರ ಬೇಗನೆ ಕಲುಷಿತವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಘಟನೆಯ ಗಂಭೀರತೆಯನ್ನು ಗಮನಿಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಮೃತರ ಮನೆಯಿಂದ ಆ ರಾತ್ರಿ ತಯಾರಿಸಲಾದ ಮಟನ್, ಪಾತ್ರೆಗಳು ಮತ್ತು ಮೊಸರಿನ ಮಾದರಿಗಳನ್ನು ಸೀಲ್ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಪುಣೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಮತ್ತು ಆಹಾರ ಮಾದರಿಗಳ ವಿಶ್ಲೇಷಣೆಯ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಈ ಘಟನೆಯು ಅಖ್ತವಾಡೆ ಗ್ರಾಮದಲ್ಲಿ ಭೀತಿ ಹರಡಿದೆ. ನಿವಾಸಿಗಳು ತಮ್ಮ ಮನೆಯಲ್ಲಿ ತಯಾರಿಸುವ ಆಹಾರದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಆಹಾರವನ್ನು ಸರಿಯಾಗಿ ಸಂರಕ್ಷಿಸುವುದು ಮತ್ತು ತಾಜಾ ಆಹಾರವನ್ನೇ ಬಳಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಘಟನೆ ಆಹಾರ ಸುರಕ್ಷತೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಆಹಾರವನ್ನು ಸರಿಯಾಗಿ ಬೇಯಿಸಿ, ಸರಿಯಾದ ಸಮಯದಲ್ಲಿ ತಿನ್ನುವುದು ಮತ್ತು ಉಳಿದ ಆಹಾರವನ್ನು ಸರಿಯಾಗಿ ಸಂಗ್ರಹಿಸುವುದು ಅತ್ಯಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಶಾಂತಾರಾಮ್ ಅವರು ಬೇಗನೆ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Jun 30, 2026 11:09 AM IST













