Last Updated:
ಮಾಜಿ ವೇಗಿ ತನ್ವೀರ್ ಅಹ್ಮದ್ ವೈಭವ್ ಸೂರ್ಯವಂಶಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವೈಭವ್ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ರೆ, ಬೆತ್ತಲೆಯಾಗಿ ಓಡಾಡ್ತೇನೆ ಎಂದು ವಿಲಕ್ಷಣ ಸವಾಲು ಹಾಕಿದ್ದಾರೆ.
ಇಡೀ ಕ್ರಿಕೆಟ್ ಜಗತ್ತು ವೈಭವ್ ಸೂರ್ಯವಂಶಿ (Vaibhav Sooryavanshi) ಬ್ಯಾಟಿಂಗ್ ಕಂಡು ಕೊಂಡಾಡ್ತಿದೆ. 15 ವರ್ಷದ ಬಾಲಕನ ಬ್ಯಾಟಿಂಗ್ಗೆ ಕ್ರಿಕೆಟ್ ಅಭಿಮಾನಿಗಳು ತಲೆ ಬಾಗಿದ್ದಾರೆ. ದಿಗ್ಗಜ ಕ್ರಿಕೆಟಿಗರೇ ವೈಭವ್ ಸೂರ್ಯವಂಶಿಗೆ ಬಹುಪರಾಕ್ ಎಂದಿದ್ದಾರೆ. ಆದ್ರೆ, ಪಾಕಿಸ್ತಾನದ (Pakistan) ಮಾಜಿ ಕ್ರಿಕೆಟಿಗನೊಬ್ಬ ವೈಭವ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇಂಗ್ಲೆಂಡ್ (England) ವಿರುದ್ಧ ವೈಭವ್ ಸೆಂಚುರಿ ಬಾರಿಸಿದ್ರೆ, ಬೆತ್ತಲಾಗಿ ಓಡಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡೋದನ್ನ ಕಣ್ತುಂಬಿಕೊಳ್ಳಲು ಇಡೀ ಭಾರತವೇ ಕಾತರದಿಂದ ಕಾಯ್ತಿದೆ. ಹೀಗಿರುವಾಗಲೇ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್ ವೈಭವ್ ಸೂರ್ಯವಂಶಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಐಪಿಎಲ್ ಅಥವಾ ಏಷ್ಯಾ ಪಿಚ್ಗಳಲ್ಲಿ ರನ್ ಗಳಿಸುವುದು ಸುಲಭ. ಇಂಗ್ಲೆಂಡ್ನ ಸ್ವಿಂಗ್ ಮತ್ತು ಸೀಮಿಂಗ್ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡೋದು ನಿಜವಾದ ಪರೀಕ್ಷೆ ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಕೇವಲ 15 ವರ್ಷ ವಯಸ್ಸಿನಲ್ಲೇ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದು, ಅವರನ್ನು ಭಾರತದ ಮುಂದಿನ ಸೂಪರ್ಸ್ಟಾರ್ ಎಂದು ಪರಿಗಣಿಸಲಾಗುತ್ತಿದೆ. ಆದ್ರೆ, ಕೆಲ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮಾತ್ರ ಪಾಡ್ ಕಾಸ್ಟ್ ಅನ್ನೋ ಹೆಸರಿನಲ್ಲಿ ರೀಚ್ಗೋಸ್ಕರ ಈ ರೀತಿಯಾದ ಹೇಳಿಕೆ ನೀಡ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.
ಇನ್ನು, ಐಪಿಎಲ್ 2026 ರಲ್ಲಿ 776 ರನ್ ಗಳಿಸಿದ ವೈಭವ್ ಸೂರ್ಯವಂಶಿ ಅವರನ್ನು ಮೊದಲ ಬಾರಿಗೆ ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೇವಲ 15 ವರ್ಷ ವಯಸ್ಸಿನಲ್ಲಿ, ಅವರು ನಿರಂತರವಾಗಿ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಬೆಲ್ಫಾಸ್ಟ್ನಲ್ಲಿ ನಡೆಯುವ ಮೊದಲ ಟಿ 20 ಐನಲ್ಲಿ ಪಾದಾರ್ಪಣೆ ಮಾಡಬಹುದು ಎನ್ನಲಾಗುತ್ತಿದೆ.













