Last Updated:
ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ (29 ಎಸೆತಗಳಲ್ಲಿ 94), ನಾಯಕ ತಿಲಕ್ ವರ್ಮಾ (90 ಎಸೆತಗಳಲ್ಲಿ 67) ಸಿಡಿಸಿದ ಅರ್ಧಶತಕಗಳ ನೆರವಿನಿಂದ 377 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಡಂಬುಲ್ಲಾದಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ. ಈ ಪ್ರಶಸ್ತಿ ಪಂದ್ಯದಲ್ಲಿ, ಶ್ರೀಲಂಕಾ ನಾಯಕ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ (29 ಎಸೆತಗಳಲ್ಲಿ 94), ನಾಯಕ ತಿಲಕ್ ವರ್ಮಾ (90 ಎಸೆತಗಳಲ್ಲಿ 67) ಸಿಡಿಸಿದ ಅರ್ಧಶತಕಗಳ ನೆರವಿನಿಂದ 370 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ಮೊದಲ ವಿಕೆಟ್ಗೆ 132 ರನ್ ಸೇರಿಸಿತು. ಟಿ20ಯಂತೆ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿ ಕೇವಲ 6 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. ಅವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ಗಳಿದ್ದವು. ವೈಭವ್ ಮೊಹಮ್ಮದ್ ಶಿರಾಜ್ ಎಸೆದ 3ನೇ ಓವರ್ನಲ್ಲೇ 26 ರನ್ ಗಳಿಸಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ತಲುಪುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.
ಇವರಿಗೆ ಸಾಥ್ ಕೊಟ್ಟ ಪ್ರಿಯಾಂಶ್ 29 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ಗಳಿಸಿ ಔಟ್ ಆದರು. ಇವರಿಬ್ಬರ ವಿಕೆಟ್ ಪತನದ ನಂತರ ಭಾರತದ ರನ್ಗತಿಗೆ ಕಡಿವಾಣ ಬಿದ್ದಿತು. ಉಪನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ 3ನೇ ವಿಕೆಟ್ ಜೊತೆಯಾಟದಲ್ಲಿ 106 ಎಸೆತಗಳನ್ನಾಡಿ 84 ರನ್ ಸೇರಿಸಿದರು. ಗಾಯಕ್ವಾಡ್ 51 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 40 ರನ್ಗಳಿಸಿ ಔಟ್ ಆದರು. ನಂತರ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ 4ನೇ ವಿಕೆಟ್ಗೆ 63 ರನ್ ಸೇರಿಸಿದರು. ಕುಶಾಗ್ರ 39 ಎಸೆತಗಳಲ್ಲಿ 36 ರನ್ಗಳಿಸಿ ಔಟ್ ಆದರು.
ತಿಲಕ್ ವರ್ಮಾ 90 ಎಸೆತಗಳನ್ನಾಡಿ 4 ಬೌಂಡರಿ, 1 ಸಿಕ್ಸರ್ ಸಹಿತ 67 ರನ್ಗಳಿಸಿ ಕುಶಾಗ್ರ ಔಟ್ ಆದ ಮುಂದಿನ ಓವರ್ನಲ್ಲೇ ಔಟ್ ಆದರು. ಆ ನಂತರ ಭಾರತ ತಂಡದಿಂದ ದೊಡ್ಡ ಜೊತೆಯಾಟ ಬರಲಿಲ್ಲ. ಬಂದ ಬ್ಯಾಟರ್ಗಳೆಲ್ಲಾ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಸೂರ್ಯಾಂಶ್ ಶೆಡ್ಗೆ 2, ನಿಶಾಂತ್ ಸಿಂಧು 16, ವಿಪ್ರಜ್ ನಿಗಮ್ 27 ರನ್ಗಳಿಸಿ ಔಟ್ ಆದರು. ಕೊನೆಯ ಎರಡು ಓವರ್ಗಳಲ್ಲಿ ಅಬ್ಬರಿಸಿದ ಅನುಕುಲ್ ರಾಯ್ 15 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ಗಳ ಸಹಿತ 39 ರನ್ಗಳಿಸಿ ತಂಡದ ಮೊತ್ತವನ್ನ 370ರ ಗಡಿ ದಾಟಿಸಿದರು.
ಶ್ರೀಲಂಕಾ ಎ ಪರ ರವಿಂದು ಫರ್ನಾಂಡೊ 72ಕ್ಕೆ2, ವನುಜಾ ಸಹಾನ್ 39ಕ್ಕೆ2, ಕುಗುದಾಸ್ ಮಾತುಲನ್ 82ಕ್ಕೆ1, ದುಲಜ್ ಸಮುದಿತಾ 54ಕ್ಕೆ1, ಸಹಾನ್ ಅರಾಚಿಗೆ 35ಕ್ಕೆ1, ಮೊಹಮ್ಮದ್ ಶಿರಾಜ್ 56ಕ್ಕೆ1 ವಿಕೆಟ್ ಪಡೆದರು.













