Last Updated:
ಬೊಲೆರೊ ಕಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಸಹೋದರರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.
ಸುಮಾರು 500 ಅಡಿ ಆಳದ ಕಂದಕಕ್ಕೆ ಬಿದ್ದು ಬೊಲೆರೋ ಕಾರು ಭೀಕರ (Car Accident) ಅಪಘಾತಕ್ಕೀಡಾಗಿದೆ. ಹಿಮಾಚಲ ಪ್ರದೇಶ ಮತ್ತೊಮ್ಮೆ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ಚಂಬಾ ಜಿಲ್ಲೆಯ ಚುರಾಹ್ ಪ್ರದೇಶದಲ್ಲಿ ನಡೆದ ಈ ದುರಂತದಲ್ಲಿ ಒಂದೇ ಕುಟುಂಬದ ಮೂವರು ಸಹೋದರರು (Brothers) ಸೇರಿದಂತೆ ಒಟ್ಟು 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಬುಧವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಚುರಾಹ್ ತಾಲ್ಲೂಕಿನ ಪುಖ್ರಿ-ಮಸ್ರುಂದ್ ರಸ್ತೆಯಲ್ಲಿ, ಮಣಿ ಝೀರೋ ಎಂಬ ಸ್ಥಳದ ಬಳಿ ಸಂಭವಿಸಿದೆ.
ಕುತೇಡ್ ಪಂಚಾಯತ್‌ನ ಮಹಲ್ ಗ್ರಾಮಕ್ಕೆ ಸೇರಿದ ಬೊಲೆರೊ ವಾಹನವು ಕಾಕಡೋತ್ ಗ್ರಾಮದಲ್ಲಿ ನಡೆದ ಮುಂಡಾನ್ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಸುಮಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.
ಈ ಕಾರು ಕಂದಕಕ್ಕೆ ಬಿದ್ದ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಎಲ್ಲ 7 ಪ್ರಯಾಣಿಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 4 ಮಂದಿ ಪುರುಷರು ಮತ್ತು 3 ಮಂದಿ ಮಹಿಳೆಯರು ಇದ್ದಾರೆ. ಇವರೆಲ್ಲರೂ ಚುರಾಹ್‌ನ ಕುತೇಡ್ ಗ್ರಾಮದವರಾಗಿದ್ದು, ಸಂಪೂರ್ಣ ಗ್ರಾಮವೇ ಶೋಕದಲ್ಲಿ ಮುಳುಗಿದೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಹತ್ತಿರದ ಗ್ರಾಮದ ನಿವಾಸಿಗಳು ಘಟನಾ ಸ್ಥಳಕ್ಕೆ ಧಾವಿಸಿ, ಕಂದಕದೊಳಗಿದ್ದ ಶವಗಳನ್ನು ಬಹಳ ಕಷ್ಟಪಟ್ಟು ಹೊರತೆಗೆದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾನೂನು ಕ್ರಮಗಳನ್ನು ಆರಂಭಿಸಿದ್ದಾರೆ. ಚಂಬಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಕ್ಲಾನಿ ಅವರ ಹೇಳಿಕೆಯ ಪ್ರಕಾರ, ಎಲ್ಲಾ ಶವಗಳನ್ನು ಕಂದಕದಿಂದ ಹೊರತೆಗೆದಿದ್ದು, ಮೃತರ ಗುರುತುಪಡಿಸುವ ಕೆಲಸ ನಡೆಯುತ್ತಿದೆ.
ಸ್ಥಳೀಯರ ಪ್ರಕಾರ, ಈ ಮಾರ್ಗದಲ್ಲಿ ಸುರಕ್ಷತಾ ತಡೆಗೋಡೆಗಳು ಇಲ್ಲದಿರುವುದು ಅಪಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ರಸ್ತೆಯ ಬದಿಯಲ್ಲಿ ಗಾರ್ಡ್ ರೇಲ್ ಅಥವಾ ತಡೆಗೋಡೆಗಳು ಇದ್ದಿದ್ದರೆ, ವಾಹನ ಕಂದಕಕ್ಕೆ ಬಿದ್ದು ಇಷ್ಟು ದೊಡ್ಡ ದುರಂತ ಸಂಭವಿಸದೇ ಇರಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಭಾಗದಲ್ಲಿ ಹಲವು ಸ್ಥಳಗಳಲ್ಲಿ ಇಂತಹ ತಡೆಗೋಡೆಗಳ ಕೊರತೆ ಇದ್ದು, ಇದು ಜನರ ಪ್ರಾಣಕ್ಕೆ ಅಪಾಯವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಚುರಾಹ್ ಕ್ಷೇತ್ರದ ಶಾಸಕ ಹನ್ಸ್ ರಾಜ್ ಕೂಡ ಈ ಘಟನೆ ಬಗ್ಗೆ ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ. ಅವರು ಬೆಳಿಗ್ಗೆ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ತಮ್ಮ ಪ್ರತಿಕ್ರಿಯೆ ನೀಡಿದ್ದು, ಮೃತರಲ್ಲಿ ಒಬ್ಬರ ಕುಟುಂಬವು ಸೈನಿಕ ಸೇವೆಯ ಜೊತೆ ಸಂಪರ್ಕ ಹೊಂದಿದ್ದು, ಅವರು ನಮ್ಮ ಸ್ನೇಹಿತರು ಎಂದು ಹೇಳಿದ್ದಾರೆ. ಒಂದೇ ಕುಟುಂಬದ 6 ಸದಸ್ಯರನ್ನು ಕಳೆದುಕೊಳ್ಳುವುದು ತುಂಬಾ ದೊಡ್ಡ ದುಃಖದ ಸಂಗತಿ ಎಂದು ಅವರು ಹೇಳಿದರು. ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಪೊಲೀಸರು ಮತ್ತು ಆಸ್ಪತ್ರೆ ಆಡಳಿತಕ್ಕೆ ತಕ್ಷಣವೇ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಜೊತೆಗೆ, ಈ ಪ್ರದೇಶದಲ್ಲಿ ಅಪಘಾತ ತಡೆಗೋಡೆಗಳ ಕೊರತೆಯಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವುದು ಗಂಭೀರ ಸಮಸ್ಯೆಯಾಗಿದ್ದು, ಇದನ್ನು ತಕ್ಷಣ ಸರಿದೂಗಿಸಬೇಕೆಂದು ಕೋರಿದ್ದಾರೆ.
ಚಂಬಾ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿ. ಮೇ 31 ರಂದು ಬೈರಾಗಢ-ಸಚ್ ಪಾಸ್-ಕಿಲಾಡ್ ರಸ್ತೆಯಲ್ಲಿ ಇನ್ನೋವಾ ಕಾರು ದುರಂತಕ್ಕೀಡಾಗಿ 8 ಜನರು ಸಾವನ್ನಪ್ಪಿದ ಘಟನೆಯ ಸ್ಮೃತಿ ಇನ್ನೂ ಹೊಸದೇ ಆಗಿದೆ. ಅದೇ ರೀತಿ ಜೂನ್ 17 ರಂದು ಕೂಡ ಚಂಬಾದಲ್ಲಿಯೇ ನಡೆದ ಮತ್ತೊಂದು ಕಾರು ಅಪಘಾತದಲ್ಲಿ 2 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಮತ್ತೆ 7 ಪ್ರಾಣಗಳನ್ನು ಕಸಿದುಕೊಂಡಿರುವ ಈ ಘಟನೆ, ಚಂಬಾದ ರಸ್ತೆ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಈ ಸರಣಿ ಅಪಘಾತಗಳು ರಸ್ತೆಗಳ ಗುಣಮಟ್ಟ, ಸುರಕ್ಷತಾ ತಡೆಗೋಡೆಗಳ ಕೊರತೆ, ರಾತ್ರಿ ಸಮಯದ ಸಂಚಾರದ ಅಪಾಯ ಇತ್ಯಾದಿ ವಿಷಯಗಳನ್ನು ಮರುಪರಿಶೀಲಿಸುವ ಅಗತ್ಯವನ್ನು ನೆನಪಿಸುತ್ತಿವೆ. ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಪೊಲೀಸರು ಎಲ್ಲರೂ ಸೇರಿ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಇಂತಹ ದುರಂತಗಳನ್ನು ಭವಿಷ್ಯದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ. ಈಗಾಗಲೇ ಶೋಕ ಸಾಗರದಲ್ಲಿ ಮುಳುಗಿರುವ ಕುತೇಡ್ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಈ ದುರಂತದಿಂದ ಹೊರಬರಲು ಬಹಳ ಸಮಯ ಬೇಕಾಗಲಿದೆ.
Himachal Pradesh
Jun 18, 2026 10:57 AM IST













