Last Updated:
ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.
ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ವಾಗ್ಲೆ ಕಿ ದುನಿಯಾ, ಕುಂಕುಮ್ ಭಾಗ್ಯ (Kumkum Bhagya) ಮತ್ತು ಇತ್ತೀಚಿನ ಛಾವಾ (Chhaava) ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಂಚಿತಾ ಅವರ ಅಕಾಲಿಕ ಅಗಲಿಕೆ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಸಂಚಿತಾ ಉಗ್ಲೆ ಅವರು ಮುಂಬೈ ಸಮೀಪದ ನಲಸೋಪರಾ ಪೂರ್ವದ ಅಚೋಲೆ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಜೂನ್ 14ರ ಸಂಜೆ ಅವರ ನಿವಾಸದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಅಚೋಲೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾನೂನು ಪ್ರಕ್ರಿಯೆಯ ಭಾಗವಾಗಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ಮುಂದುವರಿದಿದೆ.
ಸಂಚಿತಾ ಉಗ್ಲೆ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದರು. ವಿಶೇಷವಾಗಿ ವಾಗ್ಲೆ ಕಿ ದುನಿಯಾ ಧಾರಾವಾಹಿಯ ಮೂಲಕ ಅವರು ಮನೆಮಾತಾಗಿದ್ದರು. ಅವರ ಸಹಜ ಅಭಿನಯ ಮತ್ತು ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
ಕುಂಕುಮ್ ಭಾಗ್ಯ ಧಾರಾವಾಹಿಯಲ್ಲಿಯೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿಂದಿ ಕಿರುತೆರೆ ಪ್ರೇಕ್ಷಕರಲ್ಲಿ ಉತ್ತಮ ಜನಪ್ರಿಯತೆ ಗಳಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ನಿರಂತರವಾಗಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದ ಅವರು ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದರು.
ಇತ್ತೀಚೆಗೆ ಬಿಡುಗಡೆಯಾದ ಛಾವಾ ಚಿತ್ರದಲ್ಲಿಯೂ ಸಂಚಿತಾ ಉಗ್ಲೆ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅವರು ಮಹಾರಾಣಿ ತಾರಾ ರಾಣಿ ಪಾತ್ರ ನಿರ್ವಹಿಸಿ ಸಿನಿಪ್ರಿಯರ ಗಮನ ಸೆಳೆದಿದ್ದರು.
ಸಂಚಿತಾ ಅವರ ನಿಧನದ ಸುದ್ದಿ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿಅಭಿಮಾನಿಗಳು ಸಂತಾಪದ ಸೂಚಿಸಿದ್ದಾರೆ. ಇನ್ನೂ ಸಾಕಷ್ಟು ಸಾಧನೆ ಮಾಡಬಹುದಾಗಿದ್ದ ಯುವ ಪ್ರತಿಭೆಯ ಅಗಲಿಕೆ ಮನರಂಜನಾ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Bangalore [Bangalore],Bangalore,Karnataka













