ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ರೀಲ್‌ಗಳು, ಸಾಹಸ ವೀಡಿಯೊಗಳು ಹಲವರನ್ನು ಇಂತಹ ಚಟುವಟಿಕೆಗಳತ್ತ ಸೆಳೆಯುತ್ತಿವೆ. ಆದರೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲದ ಸಾಹಸಗಳಿಗೆ ಹೋಗುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ.
ಪೊಂಟೆ ಡೊ ಎಸ್ಕ್ವೆಲೆಟೊ ಎಂಬ ಈ ಸೇತುವೆಯನ್ನು ಸುಮಾರು ಮೂರು ದಶಕಗಳ ಹಿಂದೆ ಬಳಸುವುದನ್ನು ನಿಲ್ಲಿಸಲಾಗಿತ್ತು. ಅಧಿಕೃತವಾಗಿ ಇದು ಮುಚ್ಚಲ್ಪಟ್ಟಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಸಾಹಸ ಪ್ರಿಯರು ಮತ್ತು ಪ್ರವಾಸಿಗರು ಇಲ್ಲಿ ಬಂಗೀ ಜಂಪ್, ಫೋಟೋಶೂಟ್, ವೀಡಿಯೊಗಳು ಮಾಡುವ ನೆಚ್ಚಿನ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಅಚ್ಚರಿಯ ಸಂಗತಿಯೇನೆಂದರೆ, ಈ ಸ್ಥಳದಲ್ಲಿ ಸರ್ಕಾರದ ಮೇಲ್ವಿಚಾರಣೆ, ಯಾವುದೇ ಅಧಿಕೃತ ಅನುಮತಿ ಅಥವಾ ಸುರಕ್ಷತಾ ನಿಯಮಗಳ ಜಾರಿ ಇಲ್ಲ. ಆದರೂ ಖಾಸಗಿ ಸಂಸ್ಥೆಗಳು ಇಲ್ಲಿ ಸಾಹಸ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ಮಾರಿಯಾ ಎಡ್ವರ್ಡಾ, ಎಂಟ್ರೆ ಕೊರ್ಡಾಸ್ ಎಂಬ ಖಾಸಗಿ ಸಾಹಸ ಕಂಪನಿಯ ಮೂಲಕ ಬಂಗೀ ಜಂಪ್ ಮಾಡಲು ಸುಮಾರು $290 (ಸುಮಾರು ರೂ. 24,500) ಪಾವತಿಸಿದ್ದಳು. ತನ್ನ ಜೀವನದ ವಿಶೇಷ ಕ್ಷಣಗಳನ್ನು ವೀಡಿಯೊ ರೂಪದಲ್ಲಿ ಸೆರೆಹಿಡಿಯಲು ಅವಳು ಇದನ್ನು ಆಯ್ಕೆ ಮಾಡಿಕೊಂಡಿದ್ದಳು. ಇದುವರೆಗೆ ಆಕೆಯ ಮುಂದೆ ಮೂರು ಜನರು ಅದೇ ಸ್ಥಳದಿಂದ ಬಂಗೀ ಜಂಪ್ ಮಾಡಿದ್ದರು ಮತ್ತು ಎಲ್ಲವೂ ಸಾಮಾನ್ಯವಾಗಿ ನಡೆದಿತ್ತು. ಇದರಿಂದ ಆಕೆಗೆ ಹಾಗೂ ಇತರರಿಗೆ ಯಾವುದೇ ಭಯ ಕಾಣಿಸಿಲ್ಲ.
ಆದರೆ ಆಕೆಯ ಸರದಿ ಬಂದಾಗ ಸಿಬ್ಬಂದಿ ಮಾಡಿದ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಯಿತು. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಸಿಬ್ಬಂದಿ ಸದಸ್ಯರು ಆಕೆಯ ಸುರಕ್ಷತಾ ಹಗ್ಗ ಸರಿಯಾಗಿ ಜೋಡಿಸಲಾಗಿದೆ ಎಂಬ ಪರಿಶೀಲನೆಯನ್ನೇ ಮಾಡಿಲ್ಲ. ಸಾಮಾನ್ಯವಾಗಿ ಬಂಗೀ ಜಂಪ್ ಮುಂಚೆ ಹಗ್ಗವನ್ನು ಕಾಲುಗಳಿಗೆ ಅಥವಾ ದೇಹಕ್ಕೆ ಬಿಗಿಯಾಗಿ ಕಟ್ಟಿ, ಮರು ಪರಿಶೀಲನೆ ಮಾಡುವ ನಿಯಮವಿದೆ. ಆದರೆ ಇಲ್ಲಿ ಸಿಬ್ಬಂದಿ ಅವನ್ನು ಕಡೆಗಣಿಸಿ, ಯಾವುದೇ ತಪಾಸಣೆ ಇಲ್ಲದೇ ಆಕೆಗೆ ಜಿಗಿಯಲು ಸಿಗ್ನಲ್ ನೀಡಿದ್ದಾರೆ.
ಮಾರಿಯಾ ಸೇತುವೆಯಿಂದ ಹಾರುತ್ತಿದ್ದಂತೆ, ಪಕ್ಕದಲ್ಲಿದ್ದವರು ಅವಳ ಕಾಲುಗಳಿಗೆ ಅಥವಾ ದೇಹಕ್ಕೆ ಹಗ್ಗವೇ ಇಲ್ಲ ಎಂಬುದನ್ನು ಕಣ್ಣಾರೆ ನೋಡಿದ್ದಾರೆ. ಅವರು ಭಯದಿಂದ ಕಿರುಚಲು ಶುರುಮಾಡಿದರು, ಆದರೆ ಅದಾಗಲೇ ಎಲ್ಲವೂ ತಡವಾಗಿತ್ತು. ಸುಮಾರು 35 ಮೀಟರ್ (ಸುಮಾರು 115 ಅಡಿ) ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದ ಆಕೆ ಸ್ಥಳದಲ್ಲೇ ಸಾವನಪ್ಪಿದಳು. ವಿಡಿಯೋ ರೆಕಾರ್ಡ್ ಮಾಡಲು ಬಂದಿದ್ದ ಈ ಸಾಹಸವೇ ಅವಳ ಕೊನೆಯ ಕ್ಷಣವಾಗಿ ಮಾರ್ಪಟ್ಟಿತು.
ಘಟನೆಯ ನಂತರ ಅಲ್ಲಿದ್ದ ಪ್ರವಾಸಿಗರು, ಸ್ನೇಹಿತರು ಎಲ್ಲರೂ ಬೆಚ್ಚಿಬಿದ್ದರು. ಕೆಲವರು ಈ ಘಟನೆಯನ್ನು ತಮ್ಮ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡುತ್ತಿದ್ದರು, ಆ ದೃಶ್ಯಗಳು ಸ್ಥಳೀಯ ಮಾಧ್ಯಮಗಳಲ್ಲಿ ಹರಿದಾಡಿ ಜನರ ಮನಸ್ಸು ಕಲಕಿತು. ಆಕೆಯ ಬಿದ್ದುಹೋಗುವ ದೃಶ್ಯ ನೋಡಿದ ನಂತರವೇ ಕಂಪನಿಯವರು ತಮ್ಮ ಭಯಾನಕ ತಪ್ಪನ್ನು ಅರಿತುಕೊಂಡರು ಎಂದು ಹೇಳಲಾಗಿದೆ.
HORRIFIC FOOTAGE: A 21-year-old woman was pushed off a 40-meter bridge in Limeira, Brazil by bungee jump workers who failed to attach her safety rope. She died from the fall. pic.twitter.com/KdZ51iZ2ab
— Open Source Intel (@Osint613) June 13, 2026
ಅಪಘಾತದ ನಂತರ ಎಂಟ್ರೆ ಕೊರ್ಡಾಸ್ ಕಂಪನಿಯ ಸಿಬ್ಬಂದಿ ಭಯದಿಂದ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆ. ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ, ಬೋಧಕರು ಮತ್ತು ಸಿಬ್ಬಂದಿಯನ್ನು ತಡೆದಿದ್ದಾರೆ. ಕೆಲವು ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಈಗಾಗಲೇ 6 ಜನರನ್ನು ಬಂಧಿಸಲಾಗಿದೆ. ಕಂಪನಿಯ ನಿರ್ಲಕ್ಷ್ಯ, ಸರಿಯಾದ ಅನುಮತಿಯಿಲ್ಲದೇ ಇಂತಹ ಸಾಹಸ ಕಾರ್ಯಕ್ರಮಗಳನ್ನು ನಡೆಸಿದ ಹಿನ್ನೆಲೆ ಅವರನ್ನು ಕಾನೂನು ಕ್ರಮ ಎದುರಿಸುವಂತೆ ಮಾಡಿದೆ.
ಈ ಘಟನೆ ಸಾಹಸ ಪ್ರಿಯರಿಗೆ ದೊಡ್ಡ ಎಚ್ಚರಿಕೆಯ ಸಂಕೇತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುವ ಚುಟುಕು ವೀಡಿಯೊಗಳು, ರೀಲ್‌ಗಳು ಎಷ್ಟು ಆಕರ್ಷಕವಾಗಿದ್ದರೂ, ಅವುಗಳ ಹಿಂದೆ ಇರುವ ಸುರಕ್ಷತಾ ವ್ಯವಸ್ಥೆ, ಕಂಪನಿಯ ವಿಶ್ವಾಸಾರ್ಹತೆ, ಸರ್ಕಾರದ ಅನುಮತಿ ಇವೆಲ್ಲವನ್ನು ಪರಿಶೀಲಿಸದೇ ಇಂತಹ ಸಾಹಸಗಳಿಗೆ ಹೋಗುವುದು ಜೀವಕ್ಕೆ ಅಪಾಯವಾಗಬಹುದು. ಮಾರಿಯಾ ಎಡ್ವರ್ಡಾ ಅವರ ದುರಂತ ಸಾವು, ಸಾಹಸಕ್ಕಿಂತ ಸುರಕ್ಷತೆಯೇ ಮುಖ್ಯ ಎಂಬುದನ್ನು ನಾವು ಮರೆಯಬಾರದು ಎಂಬ ಕಠಿಣ ಪಾಠವನ್ನು ಕೊಡುತ್ತದೆ.












