Last Updated:
ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು.
ಕಾರ್ಡಿಫ್: ಬುಧವಾರ ನಡೆದ 2026ರ ಮಹಿಳಾ ಟಿ20 ವಿಶ್ವಕಪ್ನ (ICC Women’s T20 World Cup) ಮೊದಲ ಅಭ್ಯಾಸ ಪಂದ್ಯದಲ್ಲಿ, ಇಂಗ್ಲೆಂಡ್ ವಿರುದ್ಧ (India Women vs England Women) ಭಾರತ ತಂಡ 5 ರನ್ಗಳ ರೋಚಕ ಸೋಲು ಕಂಡಿದೆ. ಕೊನೆಯವರೆಗೂ ರೋಚಕವಾಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲುವ ಸ್ಥಿತಿಯಿಂದ ಗೆಲುವಿನ ಸನಿಹ ಬಂದು ಕೈಯಲ್ಲಿದ್ದ ಗೆಲುವನ್ನ ಕಳೆದುಕೊಂಡಿತು. ರಿಚಾ ಘೋಷ್ ನಡೆಸಿದ ಏಕಾಂಗಿ ಹೋರಾಟ ವ್ಯರ್ಥವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು.
172 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ ಕೇವಲ 2.4 ಓವರ್ಗಳಲ್ಲಿ ಆರಂಭಿಕರಿಬ್ಬರನ್ನ ಕಳೆದುಕೊಂಡಿತು. ಮಂಧಾನ 6 ಎಸೆತಗಳಲ್ಲಿ 1, ಶಪಾಳೊ 6 ಎಸೆತಗಳಲ್ಲಿ 11 ರನ್ಗಳಿಸಿ ನಿರ್ಗಮಿಸಿದರು. ನಂತರ ಒಂದಾದ ಹರ್ಮನ್ಪ್ರೀತ್ ಕೌರ್ ಹಾಗೂ ಯಸ್ತಿಕಾ ಭಾಟಿಯಾ 30 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಆದರೆ ಇಬ್ಬರೂ 2 ಓವರ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಭಾಟಿಯಾ 17 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ 15 ರನ್ಗಳಿಸಿದರೆ, ಹರ್ಮನ್ಪ್ರೀತ್ ಕೌರ್ 18 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಸಹಿತ 17 ರನ್ಗಿಳಿಸಿರು. ಈ ಇಬ್ಬರು ರನ್ಗಳಿಸಲು ಪರದಾಟಿದ್ದಲ್ಲದೆ, ಸಾಕಷ್ಟು ಎಸೆತಗಳನ್ನ ಪೋಲು ಮಾಡಿದರು.
ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತಿ ಫುಲ್ಮುಲಿ ಕೂಡ 17 ಎಸೆತಗಳಲ್ಲಿ 18 ರನ್ಗಳಿಸಿದರು. ತಂಡದ ಮೊತ್ತ 87ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ರಿಚಾ ಹಾಗೂ ರಾಧಾ ಯಾದವ್ 19 ಎಸೆತಗಳಲ್ಲಿ 33 ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ ಮತ್ತೆ ಭಾರತ ಕುಸಿತ ಕಂಡಿತು. ರಾಧಾ ಯಾದವ್ 9 ಎಸೆತಗಳಲ್ಲಿ 16 ರನ್ಗಳಿಸಿ ಔಟ್ ಆದರೆ, ನಂತರ ಬಂದ ಶ್ರೇಯಾಂಕ ಪಾಟೀಲ್ 5 ಎಸೆತಗಳಲ್ಲಿ 1, ಕ್ರಾಂತಿ ಗೌಡ್ 2 ಎಸೆತಗಳಲ್ಲಿ 1 ರನ್ಗಳಿಸಿ 18ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯ 12 ಎಸೆತಗಳಲ್ಲಿ ಭಾರತಕ್ಕೆ ಗೆಲ್ಲಲು 37 ರನ್ಗಳ ಅಗತ್ಯವಿತ್ತು.
19ನೇ ಓವರ್ನಲ್ಲಿ ಶ್ರೀಚರಣಿ 5 ರನ್ ಸಿಡಿಸಿದರೆ ಹಾಗೂ ರಿಚಾ 15 ರನ್ ಸಿಡಿಸಿದರು. ಒಂದು ವೈಡ್ ಸಹಿತ ಆ ಓವರ್ನಲ್ಲಿ ಭಾರತಕ್ಕೆ 21 ರನ್ ಸಿಕ್ಕಿತು. 20ನೇ ಓವರ್ನಲ್ಲಿ ಗೆಲ್ಲಲು ಭಾರತ ತಂಡಕ್ಕೆ 17 ರನ್ಗಳ ಅಗತ್ಯವಿತ್ತು. ಮೊದಲ 3 ಎಸೆತಗಳಲ್ಲಿ 11 ರನ್ ಬಂದಿತು. ಗೆಲುವಿಗೆ 6 ರನ್ಗಳ ಅಗತ್ಯಿದ್ದಾಗ ರಿಚಾ 4ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ರೀಸ್ ಬಿಟ್ಟು ಸ್ಟಂಪ್ ಆದರು. 5ನೇ ಎಸೆತದಲ್ಲಿ ರೇಣುಕಾ ಕೂಡ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಭಾರತ ಇನ್ನೂ 1 ಎಸೆತ ಇರುವಂತೆಯೇ ಆಲೌಟ್ ಆಯಿತು. ರಿಚಾ ಘೋಷ್ 36 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 68 ರನ್ಗಳಿಸಿ ನಡೆಸಿದ ಹೋರಾಟ ವ್ಯರ್ಥವಾಯಿತು.
ಇಂಗ್ಲಿಷ್ ಬೌಲರ್ಗಳಲ್ಲಿ, ಲಿನ್ಸೆ ಸ್ಮಿತ್ ಮೂರು ವಿಕೆಟ್ಗಳನ್ನು ಪಡೆದರು; ಡೀನ್, ಕೋಲ್ಮನ್ ಮತ್ತು ಗಿಬ್ಸನ್ ತಲಾ ಎರಡು ವಿಕೆಟ್ಗಳನ್ನು ಪಡೆದರು; ಮತ್ತು ವಾಂಗ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಆಮಿ ಜೋನ್ಸ್ (64) ಮತ್ತು ನಾಯಕಿ ನ್ಯಾಟ್ ಸಿವರ್-ಬ್ರಂಟ್ (57) ಅರ್ಧಶತಕ ಹಾಗೂ ಕೊನೆಯಲ್ಲಿ ಡೇನಿಯಲ್ ಗಿಬ್ಸನ್ (ಔಟಾಗದೆ 30) ಆಕ್ರಮಣಕಾರಿ ಆಟದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಈ ಮೂವರನ್ನ ಹೊರೆತುಪಡಿಸಿದರೆ ಎಲ್ಲಾ ಆಟಗಾರ್ತಿಯರೂ ಒಂದಂಕಿಯ ಸ್ಕೋರ್ಗಳಿಗೆ ಸೀಮಿತರಾದರು. ಭಾರತೀಯ ಬೌಲರ್ಗಳಲ್ಲಿ, ಶ್ರೇಯಾಂಕ ಪಾಟೀಲ್ ಎರಡು ವಿಕೆಟ್ಗಳನ್ನು ಪಡೆದರೆ, ಶಫಾಲಿ, ರೇಣುಕಾ, ಶ್ರೀ ಚರಣಿ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಈ ವಿಶ್ವಕಪ್ನ ನಿಯಮಿತ ಪಂದ್ಯಗಳು ಜೂನ್ 12 ರಂದು ಪ್ರಾರಂಭವಾಗುತ್ತವೆ. ಇಂಗ್ಲೆಂಡ್ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಭಾರತ ತಂಡವು ಜೂನ್ 14 ರ ಭಾನುವಾರದಂದು ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಆರಂಭವಾಗಲಿದೆ.













