Last Updated:
ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಸಿಬಿಎಸ್ಇ ತ್ರಿಭಾಷಾ ಸೂತ್ರ ಭಿನ್ನಾಭಿಪ್ರಾಯದ ನಡುವೆ ಪಕ್ಷದಿಂದ ದೂರವಾಗಿ ಮಕ್ಕಳ್ ಶಕ್ತಿ ಇಯಕ್ಕಂ ಹೆಸರಿನಲ್ಲಿ ಹೊಸ ಆಂದೋಲನಕ್ಕೆ ಸಜ್ಜು, ದೆಹಲಿಯಲ್ಲಿ ಭೇಟಿಯ ಕುತೂಹಲ.
ತಮಿಳುನಾಡು ರಾಜಕೀಯದಲ್ಲಿ ಸಂಚಲನಾತ್ಮಕ (Tami Nadu Politics) ಬದಲಾವಣೆಗಳು ನಡೆಯುತ್ತಿವೆ. ತಮಿಳುನಾಡು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಹೊಸ ಆಂದೋಲನಕ್ಕೆ ಮುಂದಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಎದುರಾದ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಅಣ್ಣಾಮಲೈ, ತಮಿಳುನಾಡಿನಲ್ಲಿ ಸಾಮಾಜಿಕ ಹಾಗೂ ರಾಜಕೀಯ ಆಂದೋಲನವನ್ನು (Social and Political Movement) ಆರಂಭಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆ ಕೇಂದ್ರ ಬಿಜೆಪಿ ನಾಯಕರು, ಅಣ್ಣಾಮಲೈ ಅವರಿಗೆ ದೆಹಲಿಗೆ (Delhi) ಬರುವಂತೆ ಆಹ್ವಾನ ನೀಡಿದ್ದಾರೆ. ಇದರಂತೆ ಅಣ್ಣಾಮಲೈ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ, ಅದರಲ್ಲೂ ಯುವ ಸಮುದಾಯದೊಂದಿಗೆ ಒಂದು ಬಲವಾದ ಸೈನ್ಯವನ್ನು ನಿರ್ಮಿಸುವ ಗುರಿಯೊಂದಿಗೆ ಅವರು ಹೆಜ್ಜೆ ಹಾಕುತ್ತಿದ್ದಾರಂತೆ. ಈ ಕಾರಣಕ್ಕಾಗಿಯೇ ಅವರು ‘ಮಕ್ಕಳ್ ಶಕ್ತಿ ಇಯಕ್ಕಂ’ (ಪ್ರಜಾ ಶಕ್ತಿ ಉದ್ಯಮ) ಆಂದೋಲನದ ಹೆಸರಿನಲ್ಲಿ ಹೊಸ ವೇದಿಕೆಯನ್ನು ನಿರ್ಮಿಸಿ ಜನರು ಬಳಿ ಹೋಗಲು ಸಿದ್ಧರಾಗಿದ್ದಾರೆ ಎಂಬ ಮಾತು ತಮಿಳುನಾಡು ರಾಜಕೀಯ ರಂಗದಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಇತ್ತೀಚೆಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಷನ್ (ಸಿಬಿಎಸ್ಇ) 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರಸ್ತಾಪಿಸಿದ ತ್ರಿಭಾಷಾ ಸೂತ್ರವನ್ನು ಜಾರಿ ಮಾಡುವ ವಿಚಾರದಲ್ಲಿ ಅಣ್ಣಾಮಲೈ ಹಾಗೂ ಕೇಂದ್ರ ನಾಯಕರ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಎದುರಾಗಿತ್ತಂತೆ. ತಮಿಳುನಾಡಿನಲ್ಲಿ ಈ ವಿಧಾನವನ್ನು ಜಾರಿ ಮಾಡುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಅನಗತ್ಯ ಒತ್ತಡ ಹೆಚ್ಚಾಗುತ್ತದೆ ಎಂದು ಅಣ್ಣಾಮಲೈ ಭಾವಿಸಿದ್ದರಂತೆ. ಈ ನಿರ್ಧಾರವನ್ನು ಹಿಂಪಡೆಯಲು ಕೇಂದ್ರಕ್ಕೆ ಬಲವಾಗಿ ಮನವಿ ಮಾಡಿದ್ದರಂತೆ. ಈ ಕುರಿತಂತೆ ಎಕ್ಸ್ ಖಾತೆಯಲ್ಲೂ ಬಹಿರಂಗವಾಗಿ ಪೋಸ್ಟ್ ಮಾಡಿದ್ದ ಅಣ್ಣಾಮಲೈ ತಮ್ಮ ಬೇಸರವನ್ನು ಹೊರ ಹಾಕಿದ್ದರು. ಈ ಎಲ್ಲಾ ಪರಿಣಾಮಗಳು ಅವರನ್ನು ಹೊಸ ಆಂದೋಲನ ಆರಂಭಿಸುವ ಕಡೆಗೆ ಹೆಜ್ಜೆ ಹಾಕುವಂತೆ ಮಾಡಿತ್ತಂತೆ.
2020ರಲ್ಲಿ ಐಪಿಎಲ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ಅಣ್ಣಾಮಲೈ ಬಿಜೆಪಿ ಮೂಲಕ ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಕಡಿಮೆ ಸಮಯದಲ್ಲಿಯೇ ಅವರು ಪ್ರಮುಖ ನಾಯಕರಾಗಿ ಬೆಳೆದಿದ್ದರು. 2021ರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ 2025ರ ವರೆಗೂ ಮುಂದುವರೆದಿದ್ದರು. ಭ್ರಷ್ಟಾಚಾರ ರಹಿತ ಹಾಗೂ ನೇರ ನಡೆಯ ಮೂಲಕ ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅದರಲ್ಲೂ ಬೂತ್ ಮಟ್ಟದಲ್ಲಿ ಬಿಜೆಪಿಗೆ ಕಾರ್ಯಕರ್ತರು ಇರುವಂತೆ ಮಾಡುವ ಮೂಲಕ ಹೊಸ ಹೆಜ್ಜೆ ಗುರುತುಗಳನ್ನು ಸೃಷ್ಟಿಸಿದ್ದರು. ಆಕ್ರಮಣಕಾರಿ ಶೈಲಿ ಹಾಗೂ ಮಾಧ್ಯಮಗಳಲ್ಲಿ ಅವರಿಗೆ ಸಿಗುತ್ತಿದ್ದ ಜನಪ್ರಿಯತೆಯ ಕಾರಣ ದೆಹಲಿ ನಾಯಕರು ಕೂಡ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.
ಆದರೆ, ಕೆಲವು ಸಂದರ್ಭದಲ್ಲಿ ಅವರ ಆಕ್ರಮಣಕಾರಿ ಶೈಲಿಗೆ ಕೆಲವು ರಾಜಕೀಯ ವ್ಯೂಹಗಳು ಉಲ್ಟಾ ಆಗಲು ಕಾರಣವಾಗಿತ್ತು. ತಮಿಳುನಾಡಿನ ಹಿರಿಯ ನಾಯಕರಾದ ಜಯಲಲಿತಾ ಮತ್ತು ಸಿ.ಎನ್. ಅಣ್ಣಾದೊರೈ ಅವರ ವಿರುದ್ಧ ಅವರು ನೀಡಿದ್ದ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದರೊಂದಿಗೆ ತಮಿಳುನಾಡಿನಲ್ಲಿ ಮೈತ್ರಿಕೂಟದಲ್ಲಿದ್ದ ಇತರೇ ಪಕ್ಷಗಳು ಅವರನ್ನು ತೀವ್ರವಾಗಿ ವಿರೋಧಿಸಿದ್ದವು. ಇದರೊಂದಿಗೆ ಚುನಾವಣೆಗೆ ಬೇರೆ ಬೇರೆಯಾಗಿಯೇ ಸ್ಪರ್ಧೆ ಮಾಡಿದ್ದರು. ಆದರೆ ಇದೇ ಸಮಯದಲ್ಲಿ ಡಿಎಂಕೆ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿ ಸರ್ಕಾರ ರಚನೆ ಮಾಡಿತ್ತು.
#WATCH | Tamil Nadu | BJP leader K. Annamalai leaves for Delhi from Chennai.
When asked on speculations about him expected to launch a new party, he says, “Please wait. We will sit down and talk in two days” pic.twitter.com/5qOZfp7OHD
— ANI (@ANI) June 1, 2026
ಹೀನಾಯ ಸೋಲಿನ ಬಳಿಕ ಬಿಜೆಪಿಯ ಮೈತ್ರಿಕೂಟ ಪಕ್ಷಗಳು ಮತ್ತೆ ಒಂದಾಗಲು ಯೋಜನೆ ರೂಪಿಸಿದ್ದವು. ಈ ವೇಳೆ ಕೇಂದ್ರದ ಎದುರು ತಮಿಳುನಾಡು ಬಿಜೆಪಿ ನಾಯಕತ್ವವನ್ನು ಬದಲಾವಣೆ ಮಾಡಲು ಒತ್ತಾಯ ಮಾಡಿದ್ದವು. ಇದರೊಂದಿಗೆ ಕೇಂದ್ರದ ನಾಯಕರು ಅಣ್ಣಾಮಲೈ ಅವರ ಸ್ಥಾನಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದರು. ಈ ಎಲ್ಲಾ ಪರಿಣಾಮಗಳಿಂದ ಪಕ್ಷದಿಂದ ಅಣ್ಣಾಮಲೈ ಅವರು ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಿತ್ತು. ಸದ್ಯ ಜನರ ನಡುವೆ ತಮ್ಮ ಶಕ್ತಿಯನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ನೂತನ ವೇದಿಕೆಯನ್ನು ಅಣ್ಣಾಮಲೈ ಸಿದ್ಧಪಡಿಸುತ್ತಿದ್ದಾರಂತೆ. ಈ ಆಂದೋಲನ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗೆ ಕಾರಣವಾಗುತ್ತದೆ ಅಂತ ಕಾದುನೋಡಬೇಕಿದೆ.
ಇದರ ನಡುವೆಯೇ ಅಣ್ಣಾಮಲೈ ಅವರ ಪೋಸ್ಟರ್ಗಳು ತಮಿಳುನಾಡಿನ ಕೊಯಮತ್ತೂರು, ಮಧುರೈ ನಗರದ ಹಲವು ಭಾಗಗಳಲ್ಲಿ ರಾರಾಜಿಸುತ್ತಿದ್ದು, ಬಿಜೆಪಿ ತನ್ನ ಕೇಂದ್ರ ಸಮಿತಿ ಸಭೆಯನ್ನು ಕೊಯಮತ್ತೂರಿನಲ್ಲಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಅಣ್ಣಾಮಲೈ ಅವರ ಅಭಿಮಾನಿಗಳ ವೇದಿಕೆಯೂ ಹೊಸ ಸದಸ್ಯರ ನೊಂದಣಿಗೆ ಮುಂದಾಗಿದೆ ಎನ್ನಲಾಗಿದೆ. ಆದರೆ ಈ ಬೆಳವಣಿಗೆಗಳ ಬಗ್ಗೆ ಅಣ್ಣಾಮಲೈ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರ ನಡುವೆಯೇ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್, ತಮಿಳುನಾಡಿನಲ್ಲಿ ಹೊಸ ಪಕ್ಷ ಉದಯಿಸುವ ಪ್ರಕ್ರಿಯೆ ವೇಗಗೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಇದರ ನಡುವೆಯೇ ಕೇಂದ್ರ ಬಿಜೆಪಿ ನಾಯಕ ಅಣ್ಣಾಮಲೈ ಅವರ ಭೇಟಿಗೆ ಆಹ್ವಾನ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದ್ದು, ಇನ್ನು ಮಂಗಳವಾರವೇ ಅಧಿಕೃತವಾಗಿ ಅಣ್ಣಾಮಲೈ ಅವರು ಬಿಜೆಪಿ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಿಂದ ಅಣ್ಣಾಮಲೈ ಅವರು ಹೊರ ನಡೆದರೂ ಪಕ್ಷದ ನಾಯಕರೊಂದಿಗೆ ಯಾವುದೇ ಘರ್ಷಣೆಗೆ ಆಗದಂತೆ ಸೌಹಾರ್ದಯುತವಾಗಿ ಅವರು ಹೊರ ನಡೆಯಲು ತೀರ್ಮಾನ ಮಾಡಿದ್ದಾರಂತೆ.













