Last Updated:
ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ (IPL 2026) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ (Rajasthan Royals) ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ ಮುಲ್ಲನ್ಪುರದಲ್ಲಿ ವಿಧ್ವಂಸ ಸೃಷ್ಟಿಸಿದರು. ಕೇವಲ 29 ಎಸೆತಗಳಲ್ಲಿ 97 ರನ್ಗಳಿಸಿ ದಾಖಲೆಯ ಮೊತ್ತಕ್ಕೆ ಕಾರಣರಾದರು. ಧ್ರುವ್ ಜುರೆಲ್ 51 ರನ್ ಹಾಗೂ ರಿಯಾನ್ ಪರಾಗ್ 26 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ರಾಜಸ್ಥಾನ್ ರಾಯಲ್ಸ್ಗೆ ಸೂರ್ಯವಂಶಿ ಭರ್ಜರಿ ಆರಂಭ ನೀಡಿದರು. ಪವರ್ ಪ್ಲೇನಲ್ಲಿ ಎಲ್ಲಾ ಬೌಲರ್ಗಳನ್ನ ಬೆಂಡೆತ್ತಿದ 15 ವರ್ಷದ ಆಟಗಾರ 60 ರನ್ ಚಚ್ಚಿದರು. 8ನೇ ಓವರ್ನ ಕೊನೆಯ ಎಸೆತದಲ್ಲಿ ಔಟ್ ಆದ ವೈಭವ್ ಕೇವಲ 3 ರನ್ಗಳಿಂದ ಐಪಿಎಲ್ನ ವೇಗದ ಶತಕ ಸಿಡಿಸುವ ಅವಕಾಶ ಮಿಸ್ ಮಾಡಿಕೊಂಡರು. 29 ಎಸೆತಗಳನ್ನಾಡಿದ ವೈಭವ್ ಸೂರ್ಯವಂಶಿ 12 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ಸಹಿತ 97 ರನ್ಗಳಿಸಿ ಪ್ರಫುಲ್ ಹಿಂಗೆಗೆ ವಿಕೆಟ್ ಒಪ್ಪಿಸಿದರು. ಆ ಓವರ್ನಲ್ಲಿ 29 ರನ್ ಸಿಡಿಸಿದ್ದ ವೈಭವ್ ಕೊನೆಯ ಎಸೆತದಲ್ಲೂ ಸಿಕ್ಸರ್ ಬಾರಿಸಲು ಮುಂದಾಗಿ ಸ್ಮರಣ್ಗೆ ಕ್ಯಾಚ್ ನೀಡಿ ಔಟ್ ಆದರು.
ವೈಭವ್ ನಂತರ ಯಶಸ್ವಿ ಜೈಸ್ವಾಲ್ ಕೂಡ ನಿರ್ಗಮಿಸಿದರು. ಜೈಸ್ವಾಲ್ ನಿರ್ಣಾಯಕ ಪಂದ್ಯದಲ್ಲಿ ದೊಡ್ಡ ಮೊತ್ತ ಸಿಡಿಸಲು ವಿಫಲರಾದರು. ಕೇವಲ 29 ಎಸೆತಗಳಲ್ಲಿ 29 ರನ್ಗಳಿಸಿ ಶಿವಾಂಗ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಧ್ರುವ್ ಜುರೆಲ್ ಹಾಗೂ ನಾಯಕ ರಿಯಾನ್ ಪರಾಗ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ತೋರಿದರು. ಈ ಜೋಡಿ 3ನೇ ವಿಕೆಟ್ಗೆ 55 ರನ್ಗಳಿಸಿತು. ಜುರೆಲ್ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ 50 ರನ್ಗಳಿಸಿದರೆ, ಪರಾಗ್ 12 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 26 ರನ್ಗಳಿಸಿ ಇಬ್ಬರೂ ಪ್ರಫುಲ್ ಹಿಂಗೆಗೆ ವಿಕೆಟ್ ಒಪ್ಪಿಸಿದರು.
ಈ ಜೋಡಿ ಬ್ರೇಕ್ ಆಗುತ್ತಿದ್ದಂತೆ ರಾಜಸ್ಥಾನ್ ರಾಯಲ್ಸ್ ದಿಢೀರ್ ಕುಸಿತ ಕಂಡಿತು. ದಾಸುನ್ ಶನಕಾ 3 ಎಸೆತಗಳಲ್ಲಿ 5 ರನ್ಗಳಿಸಿ ಇಶಾನ್ ಮಾಲಿಂಗಾಗೆ ವಿಕೆಟ್ ಒಪ್ಪಿಸಿದರೆ, ಡೋನೊವನ್ ಫೆರೇರಾ 9 ಎಸೆತಗಳಲ್ಲಿ 12 ರನ್ಗಳಿಸಿ ರನ್ಔಟ್ ಆದರು. ಜೋಫ್ರಾ ಆರ್ಚರ್ 5 ಎಸೆತಗಳಲ್ಲಿ 4 ರನ್ಗಳಿಸಿ ನಿತೀಶ್ ರೆಡ್ಡಿಗೆ ವಿಕೆಟ್ ಒಪ್ಪಿಸಿದರು. ನಾಂಡ್ರೆ ಬರ್ಗರ್ 1 ರನ್ಗಳಿಸಿ ರನ್ಔಟ್ ಆದರು. ಜಡೇಜಾ ಅಜೇಯ 12 ರನ್ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ 5 ಓವರ್ಗಳಲ್ಲಿ ರನ್ಗಳಿಸಲು ಪರದಾಡಿತು. 15 ಓವರ್ಗಳ ಅಂತ್ಯಕ್ಕೆ 207 ರನ್ಗಳಿಸಿದ್ದ ರಾಯಲ್ಸ್ ಮುಂದಿನ 5 ಓವರ್ಗಳಲ್ಲಿ 36 ರನ್ ಮಾತ್ರ ಗಳಿಸಿತು. 15 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ರಾಯಲ್ಸ್ ಕೊನೆಯ 5 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ವೈಭವ್ ಧ್ರುವ್ ಜುರೆಲ್ ಆಟ ನೋಡಿದಾಗ 270-280 ರನ್ ಸುಲಭವಾಗಿ ಗಳಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ರಾಯಲ್ಸ್ ದಯನೀಯ ವೈಫಲ್ಯ ಅನುಭವಿಸಿತು.
ಸನ್ರೈಸರ್ಸ್ ಹೈದರಾಬಾದ್ ಪರ ಪ್ರಫುಲ್ ಹಿಂಗೆ 54ಕ್ಕೆ3, ಇಶಾನ್ ಮಾಲಿಂಗ 40ಕ್ಕೆ1, ಶಿವಾಂಗ್ ಕುಮಾರ್ 19ಕ್ಕೆ1, ನಿತೀಶ್ ಕುಮಾರ್ ರೆಡ್ಡಿ 12ಕ್ಕೆ1 ವಿಕೆಟ್ ಪಡೆದರು. ಆದರೆ ನಾಯಕ ಪ್ಯಾಟ್ ಕಮಿನ್ಸ್ 64 ರನ್ ಹಾಗೂ ಸಕಿಬ್ ಹುಸೇನ್ 52 ರನ್ ಬಿಟ್ಟುಕೊಟ್ಟು ದುಬಾರಿಯಾದರು.
SRH vs RR, IPL 2026: ಎಲಿಮಿನೇಟರ್ನಲ್ಲಿ ವಿಧ್ವಂಸ ಸೃಷ್ಟಿಸಿದ ವೈಭವ್! ಹೈದರಾಬಾದ್ಗೆ ದಾಖಲೆಯ 244 ರನ್ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್













