Last Updated:
ಪ್ರಕರಣದ ಆರೋಪಿ ಪ್ರದೋಷ್ ನ ಮಾಫಿ ಸಾಕ್ಷಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮೀ (Vijaya Lakshmi) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.
ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ (Renukaswamy Case) ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಪ್ರದೋಷ್ ನ ಮಾಫಿ ಸಾಕ್ಷಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮೀ (Vijaya Lakshmi) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 7ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
ವಿಜಯಲಕ್ಷ್ಮೀ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೇ. ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ನಡೆಸಲಿದೆ. ಪ್ರದೋಷ್ ನ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ.
ಇತ್ತ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಮುಂದುವರಿದಿದೆ. ಇತ್ತೀಚೆಗಷ್ಟೇ ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೋಷ್ ನ ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಅಕ್ಟೋಬರ್ 5ರಂದು ಕೂಡ ಪ್ರದೋಷ್ ವಿಚಾರಣೆ ಹಾಗೂ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಿತು. ಸತತ ನಾಲ್ಕು ದಿನಗಳ ಕಾಲ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದ್ದು, ಇಂದು ಅದು ಪೂರ್ಣಗೊಂಡಿದೆ. ನಾಳೆಯಿಂದ ಪ್ರಕರಣದಲ್ಲಿ ಡಾಕ್ಯುಮೆಂಟ್ ಮಾರ್ಕಿಂಗ್ ಪ್ರಕ್ರಿಯೆ ನಡೆಯಲಿದೆ.
ಪ್ರದೋಷ್ ಎಸ್ಕಾರ್ಟ್ ವ್ಯವಸ್ಥೆ ಬದಲಾಯಿಸಬೇಕು ಹಾಗೂ ಈ ವಿಚಾರವನ್ನೂ ನ್ಯಾಯಾಲಯದ ದಾಖಲೆಯಲ್ಲಿ ನಮೂದಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆದೇಶವನ್ನು ಕಾಯ್ದಿರಿಸಿದ್ದರು. ಇದೀಗ ನ್ಯಾಯಾಲಯದ ಸೂಚನೆಯಂತೆ ಪ್ರದೋಷ್ ಗೆ ಕಾಮಾಕ್ಷಿಪಾಳ್ಯ ಪೊಲೀಸರ ಬದಲಿಗೆ ಸಿಎಆರ್ ಪೊಲೀಸ್ ಸಿಬ್ಬಂದಿಯಿಂದ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಹೀಗಾಗಿ ಒಂದೆಡೆ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದ್ದರೆ, ಮತ್ತೊಂದೆಡೆ ಮಾಫಿ ಸಾಕ್ಷಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ವಿಜಯಲಕ್ಷ್ಮೀ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.














