Last Updated:
87 ಎಸೆತ, 10 ಬೌಂಡರಿ, 6 ಸಿಕ್ಸರ್ಗಳ ಸಹಿತ 129 ರನ್ ಸಿಡಿಸಿದ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ದಾಖಲಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಟೀಮ್ ಇಂಡಿಯಾದ ಆಪತ್ಬಾಂಧವ ಎಂದೇ ಹೆಸರಾಗಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿ ಅಬ್ಬರಿಸಿದರು. ಕರ್ನಾಟಕದ ಹೆಮ್ಮೆಯ ಬ್ಯಾಟರ್ ಮತ್ತೊಬ್ಬ ಕನ್ನಡಿಗ ದಂತಕಥೆ ರಾಹುಲ್ ದ್ರಾವಿಡ್ (Rahul Dravid) ಅವರ 27 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯೊಂದನ್ನು ಮುರಿದಿದ್ದಾರೆ. ಶನಿವಾರ (ಅಕ್ಟೋಬರ್ 3) ನಡೆದ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ ಶತಕ ಪೂರೈಸಿ ಭಾರತ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದ ರಾಹುಲ್ ವಿಂಡೀಸ್ ವಿರುದ್ಧ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾದರು.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ಕೀಪರ್-ಬ್ಯಾಟರ್ ಆಗಿ ಶತಕ ಸಿಡಿಸಿದ ಭಾರತದ ಕೇವಲ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೆ.ಎ. ರಾಹುಲ್ ಪಾತ್ರರಾದರು. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ ಅವರು ವಿಕೆಟ್ಕೀಪರ್ ಜವಾಬ್ದಾರಿ ನಿಭಾಯಿಸುತ್ತಾ ವಿಂಡೀಸ್ ವಿರುದ್ಧ 1999 (ಸಿಂಗಾಪುರದಲ್ಲಿ 103*) ಮತ್ತು 2002 ರಲ್ಲಿ (ಅಹಮದಾಬಾದ್ನಲ್ಲಿ 109*) ಎರಡು ಶತಕಗಳನ್ನು ಬಾರಿಸಿದ್ದರು. ಇದೀಗ 27 ವರ್ಷಗಳ ನಂತರ ಕನ್ನಡಿಗ ರಾಹುಲ್ ಈ ಅಪರೂಪದ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ.
ರಾಹುಲ್ ಶತಕ ಸಿಡಿಸಿದ್ದಲ್ಲದೆ ಅದನ್ನ 129 ರನ್ಗಳಿಗೆ ಏರಿಸಿಕೊಂಡು ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು. 87 ಎಸೆತ, 10 ಬೌಂಡರಿ, 6 ಸಿಕ್ಸರ್ಗಳ ಸಹಿತ 129 ರನ್ ಸಿಡಿಸಿದ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ದಾಖಲಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ 2002ರಲ್ಲಿ ಅಹಮದಾಬಾದ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಜೇಯ 109 ರನ್ ಸಿಡಿಸಿದ ಈ ದಾಖಲೆ ಹೊಂದಿದ್ದರು. 3ನೇ ಸ್ಥಾನದಲ್ಲೂ ದ್ರಾವಿಡ್ ಇದ್ದು, 1999 ರಲ್ಲಿ ಅಜೇಯ 103 ರನ್ಗಳಿಸಿದ್ದರು. ಎಂಎಸ್ ಧೋನಿ 4ನೇ ಸ್ಥಾನದಲ್ಲಿದ್ದು 2009ರಲ್ಲಿ 95 ರನ್ಗಳಿಸಿದ್ದರು.
ಈ ಸ್ಫೋಟಕ ಇನ್ನಿಂಗ್ಸ್ನ ಮಧ್ಯದಲ್ಲೇ ಕೆ.ಎಲ್. ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (ಟೆಸ್ಟ್, ಏಕದಿನ, ಟಿ20 ಸೇರಿ) 10,000 ರನ್ಗಳ ಬೃಹತ್ ಮೈಲಿಗಲ್ಲನ್ನು ತಲುಪಿದ್ದಾರೆ. ಈ ಸಾಧನೆ ಮಾಡಿದ 15ನೇ ಭಾರತೀಯ ಆಟಗಾರ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ.
ಅಷ್ಟೇ ಅಲ್ಲದೆ, ನ್ಯೂ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನೂ ರಾಹುಲ್ ಬರೆದಿದ್ದಾರೆ. ವಿಶೇಷವೆಂದರೆ, ಇದೇ ವರ್ಷದ ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲೂ ಅವರು ಇಲ್ಲೇ ಶತಕ ಸಿಡಿಸಿದ್ದರು.
ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ರಾಹುಲ್ 87 ಎಸೆತಗಳಲ್ಲಿ 129 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಈ ಅಬ್ಬರದಿಂದಾಗಿ ಭಾರತ ತಂಡವು 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 351 ರನ್ಗಳ ಬೃಹತ್ ಮೊತ್ತ ಪೇರಿಸಿದೆ.














