Jamui Case: ಮಗನ ಪಾಪಕೃತ್ಯದಿಂದ ತಂದೆಯ 23 ವರ್ಷದ ಕರ್ಮಕಾಂಡ ಬಯಲು! ಜಮುಯಿ ದೌರ್ಜನ್ಯ ಕೇಸ್​​ಗೆ ಸಿಕ್ತು ಭರ್ಜರಿ ಟ್ವಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ನಂದನ್ ಯಾದವ್


Last Updated:

ಇತ್ತೀಚೆಗೆ ಜಮುಯಿ ನಗರದ ಹೊರವಲಯದಲ್ಲಿ ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಮರಳುತ್ತಿದ್ದ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಯುವಕರ ಗುಂಪೊಂದು ಅಡ್ಡಗಟ್ಟಿತ್ತು. ಯುವಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದ ಕಿಡಿಗೇಡಿಗಳು, ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ನಂದನ್ ಯಾದವ್
ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ನಂದನ್ ಯಾದವ್

ಬಿಹಾರದ ಜಮುಯಿಯಲ್ಲಿ (Jamui) ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಲೈಂಗಿಕ ದೌರ್ಜನ್ಯ (Molestation and Assault) ಪ್ರಕರಣದ ಪ್ರಮುಖ ಆರೋಪಿಯ ಪತ್ತೆಗೆ ಜಾಲ ಬೀಸಿದ್ದ ಪೊಲೀಸರಿಗೆ ಅನಿರೀಕ್ಷಿತ ಯಶಸ್ಸೊಂದು ಸಿಕ್ಕಿದೆ.  ದೌರ್ಜನ್ಯ ಪ್ರಕರಣದ ಮುಖ್ಯ ಆರೋಪಿಯ ಮನೆಗೆ ದಾಳಿ ನಡೆಸಿದ ಪೊಲೀಸರು, ಕಳೆದ 23 ವರ್ಷಗಳಿಂದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆತನ ತಂದೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

10ನೇ ತರಗತಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ

ಜಮುಯಿ ಪೊಲೀಸರ ಪ್ರಕಾರ, ಇತ್ತೀಚೆಗೆ ಜಮುಯಿ ನಗರದ ಹೊರವಲಯದಲ್ಲಿ ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಮರಳುತ್ತಿದ್ದ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಯುವಕರ ಗುಂಪೊಂದು ಅಡ್ಡಗಟ್ಟಿತ್ತು. ಯುವಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದ ಕಿಡಿಗೇಡಿಗಳು, ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಷ್ಟೇ ಅಲ್ಲದೆ, ಈ ಇಡೀ ಕೃತ್ಯದ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಹಾರ ಮಾತ್ರವಲ್ಲದೆ ಇಡೀ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ನಂದನ್ ಯಾದವ್ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯ ಆರೋಪಿಯ ಬಂಧನದ ವೇಳೆ ಕೊಲೆ ಆರೋಪಿ ತಂದೆ ಬಂಧನ

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಜಮುಯಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ನಂದನ್ ಯಾದವ್ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಪ್ರತಾಪ್‌ಪುರ ಗ್ರಾಮದಲ್ಲಿರುವ ಆತನ ಮನೆಗೆ ತಡರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಆತನ ತಂದೆ ಗನೌರಿ ಯಾದವ್ (Ganauri Yadav) ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ.

23 ವರ್ಷಗಳ ಹಿಂದಿನ ಡಬಲ್ ಮರ್ಡರ್ ಕೇಸ್

ಪೊಲೀಸರು ಆರೋಪಿ ಕುಟುಂಬದ ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಿದಾಗ, ತಂದೆ ಗನೌರಿ ಯಾದವ್ ದೊಡ್ಡ ಕೊಲೆ ಪ್ರಕರಣದ ಅಪರಾಧಿ ಎಂಬುದು ಬೆಳಕಿಗೆ ಬಂದಿದೆ. ಏಪ್ರಿಲ್ 3, 2003 ರಂದು ಇದೇ ಪ್ರತಾಪ್‌ಪುರ ಗ್ರಾಮದಲ್ಲಿ ವ್ಯಾಪಾರದ ಜಗಳಕ್ಕೆ ಸಂಬಂಧಿಸಿದಂತೆ ಡಿಪಿ ಯಾದವ್ ಮತ್ತು ಪುಣೆ ಯಾದವ್ ಎಂಬ ಇಬ್ಬರು ಸಹೋದರರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಡಬಲ್ ಮರ್ಡರ್ ಪ್ರಕರಣದಲ್ಲಿ ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಾಲಾನಂತರದಲ್ಲಿ 10 ಮಂದಿ ಆರೋಪಿಗಳು ಜಾಮೀನು ಪಡೆದಿದ್ದರು. ಆದರೆ, ಗನೌರಿ ಯಾದವ್ ಮಾತ್ರ ಪೊಲೀಸರ ಕಣ್ಣಿಗೆ ಮಣ್ಣೆರಚಿ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಮಗನ ತಪ್ಪಿನಿಂದ ಸಿಕ್ಕಿಬಿದ್ದ ಕೊಲೆ ಆರೋಪಿ

ಮಗ ಮಾಡಿದ ಲೈಂಗಿಕ ದೌರ್ಜನ್ಯದ ಕೇಸ್ ತನಿಖೆ ಮಾಡಲು ಬಂದ ಪೊಲೀಸರ ಕೈಗೆ, 23 ವರ್ಷಗಳಿಂದ ತಲೆತಪ್ಪಿಸಿಕೊಂಡಿದ್ದ ಈ ಹಳೆಯ ಕೊಲೆ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸದ್ಯ ಗನೌರಿ ಯಾದವ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮುಖ್ಯ ಆರೋಪಿ ನಂದನ್ ಯಾದವ್ ಅರೆಸ್ಟ್

ಇನ್ನೊಂದೆಡೆ, ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಮಗ ನಂದನ್ ಯಾದವ್‌ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆಯೇ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ನಂದನ್ ಯಾದವ್‌ಗೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ (ಎನ್‌ಕೌಂಟರ್) ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports