Last Updated:
ಇಂಗ್ಲೆಂಡ್ ತಂಡವು 2019 ರಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ (ODI World Cup) ಗೆದ್ದಾಗ ಮಾರ್ಕ್ ವುಡ್ 18 ವಿಕೆಟ್ ಪಡೆದು ತಂಡದ ಪ್ರಮುಖ ಭಾಗವಾಗಿದ್ದ ಸ್ಟಾರ್ ವೇಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ.
ಇಂಗ್ಲೆಂಡ್ ತಂಡದ ಖ್ಯಾತ ವೇಗದ ಬೌಲರ್ ಮಾರ್ಕ್ ವುಡ್ (England Pacer Mark Wood) ಮಂಗಳವಾರ (ಸೆಪ್ಟೆಂಬರ್ 22) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ಈ ವೇಗಿ 2015 ರಿಂದ 2025 ರವರೆಗಿನ ತಮ್ಮ 10 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಇಂಗ್ಲೆಂಡ್ ತಂಡವನ್ನು ಮೂರೂ ಮಾದರಿಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ನವೆಂಬರ್ 21 ರಿಂದ 22 ರವರೆಗೆ ನಡೆದ 2025-26ರ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಕೊನೆಯದಾಗಿ ಇಂಗ್ಲೆಂಡ್ ಪರ ಆಡಿದ್ದರು.
ಇಂಗ್ಲೆಂಡ್ ತಂಡವು 2019 ರಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ (ODI World Cup) ಗೆದ್ದಾಗ ಮಾರ್ಕ್ ವುಡ್ 18 ವಿಕೆಟ್ ಪಡೆದು ತಂಡದ ಪ್ರಮುಖ ಭಾಗವಾಗಿದ್ದರು. ಮಾರ್ಕ್ ವುಡ್ 2019 ರ ಏಕದಿನ ವಿಶ್ವಕಪ್ ಮಾತ್ರವಲ್ಲದೆ, 2022 ರಲ್ಲಿ ಜೋಸ್ ಬಟ್ಲರ್ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಪ್ರಮುಖ ಸದಸ್ಯರೂ ಆಗಿದ್ದರು.
ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಾರ್ಕ್ ವುಡ್ ಅವರಿಗೆ, ಇನ್ನು ಮುಂದೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ ಮರಳುವುದು ಸಾಧ್ಯವಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದರು. ಈ ವೈದ್ಯಕೀಯ ಕಾರಣಗಳಿಂದಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
” ನಾನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಕಳೆದ ಒಂದು ವರ್ಷದ ಪರಿಸ್ಥಿತಿಯನ್ನು ನೋಡಿದರೆ ಈ ನಿರ್ಧಾರ ಆಶ್ಚರ್ಯ ತರದಿರಬಹುದು, ಆದರೆ ನನ್ನ ಒಪ್ಪಂದದ ಕೊನೆಯಲ್ಲಿ ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತಿದೆ. ನಾನು ಯಾವಾಗಲೂ ಗಾಯಗಳಿಂದ ಚೇತರಿಸಿಕೊಂಡು ಬಲಿಷ್ಠವಾಗಿ ಕರಾರುವಾಕ್ ಆಗಿ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದ್ದೆ. ಜನರ ಟೀಕೆಗಳು ತಪ್ಪು ಎಂದು ಸಾಬೀತುಪಡಿಸಲು ಹೋರಾಡುತ್ತಿದ್ದೆ. ಆದರೆ ದುರದೃಷ್ಟವಶಾತ್, ಈ ಬಾರಿ ನಾನು ಗಾಯದ ಎದುರು ಸೋತಿದ್ದೇನೆ. ವೈದ್ಯಕೀಯ ಸಲಹೆಯ ಪ್ರಕಾರ ಇನ್ನು ಮುಂದೆ ನನಗೆ ಟೆಸ್ಟ್ ಮತ್ತು 50 ಓವರ್ಗಳ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಹೀಗಾಗಿ ಇಂಗ್ಲೆಂಡ್ ಪರ ಆಡುವ ನನ್ನ ಕನಸು ಕಳೆದ ಒಂದು ವರ್ಷದಲ್ಲಿ ನಿಧಾನವಾಗಿ ಕರಗಿಹೋಗಿದೆ” ಎಂದು ತಿಳಿಸಿದ್ದಾರೆ.
” ಇಂಗ್ಲೆಂಡ್ ಪರ ಆಡುವುದು ನನ್ನ ಜೀವಮಾನದ ಅತ್ಯಂತ ದೊಡ್ಡ ಗೌರವ ಮತ್ತು ಅದೊಂದು ನನಸಾದ ಕನಸು. ನನ್ನೊಳಗಿನ ಸಣ್ಣ ಬಾಲಕ ಇಂಗ್ಲೆಂಡ್ಗಾಗಿ ಇಷ್ಟೊಂದು ಪಂದ್ಯಗಳನ್ನು ಆಡಿದ್ದಕ್ಕೆ ಖಂಡಿತ ಹೆಮ್ಮೆಪಡುತ್ತಾನೆ. ಪ್ರಪಂಚದಾದ್ಯಂತ ಪ್ರಯಾಣ ಬೆಳೆಸಿ, ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗಿ, ಶ್ರೇಷ್ಠ ಆಟಗಾರರ ವಿರುದ್ಧ ಆಡಿದ್ದು ನಾನು ಮಾಡಿದ ಪುಣ್ಯ. ನಾನು ಪ್ರೀತಿಸುವ ಕೆಲಸವನ್ನು ಮಾಡಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಅದೃಷ್ಟವಂತ ” ಎಂದು ಹೇಳಿಕೊಂಡಿದ್ದಾರೆ.
ಮಾರ್ಕ್ವುಡ್ ದಶಕದ ಕರಿಯರ್ನಲ್ಲಿ 38 ಟೆಸ್ಟ್ ಪಂದ್ಯಗಳನ್ನಾಡಿದ್ದು, 119 ವಿಕೆಟ್ಸ್ ಪಡೆದಿದ್ದಾರೆ. 70 ಏಕದಿನ ಕ್ರಿಕೆಟ್ ಪಂದ್ಯಗಳಿಂದ 80 ವಿಕೆಟ್ಗಳನ್ನ ಪಡೆದಿದ್ದಾರೆ. 39 ಟಿ20 ಪಂದ್ಯಗಳಿಂದ 54 ವಿಕೆಟ್ ಪಡೆದಿದ್ದರು.
ಮಾರ್ಕ್ ವುಡ್ ಅವರ ಕೊಡುಗೆಯನ್ನು ಸ್ಮರಿಸಿದ ಇಂಗ್ಲೆಂಡ್ ಪುರುಷರ ಕ್ರಿಕೆಟ್ನ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ, “ಒಬ್ಬ ಶ್ರೇಷ್ಠ ಆಟಗಾರನ ವೃತ್ತಿಜೀವನದ ಕೊನೆಯ ಹಂತವನ್ನು ಹತ್ತಿರದಿಂದ ವೀಕ್ಷಿಸಿದ್ದು ನನ್ನ ಸೌಭಾಗ್ಯ. ಆಶಸ್ ಸರಣಿಯ ಗೆಲುವುಗಳು, ವಿಶ್ವಕಪ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕೈಗೆ ಚೆಂಡು ಸಿಕ್ಕಾಗಲೆಲ್ಲಾ ಪ್ರೇಕ್ಷಕರನ್ನು ರೋಮಾಂಚನಗೊಳಿಸುವುದು ಕೆಲವೇ ಕೆಲವು ಆಟಗಾರರಿಗೆ ಮಾತ್ರ ಸಾಧ್ಯವಿರುವ ಸಾಧನೆ. ಅವರು ತಮ್ಮ ಅದ್ಭುತ ವೃತ್ತಿಜೀವನದ ಬಗ್ಗೆ ಹೆಮ್ಮೆಪಡಬಹುದು,” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.














