Last Updated:
ರಾಜಸ್ಥಾನ ರಾಯಲ್ಸ್ ತಂಡದ ಹದಿಹರೆಯದ ಸೆನ್ಸೇಷನ್ ಮತ್ತು ಯೂನಿವರ್ಸಲ್ ಬೇಬಿ ಬಾಸ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಚರ್ಚೆ ಆಗುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಉದಯೋನ್ಮುಖ (Emerging) ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಇತ್ತೀಚಿನ ಸೆನ್ಸೇಷನ್ (Sensation). ಸೂರ್ಯವಂಶಿ ಕಳೆದ ವರ್ಷ ಮಾತ್ರವಲ್ಲದೆ, ಐಪಿಎಲ್ (IPL) 2026 ರಲ್ಲಿಯೂ ತಮ್ಮ ಸ್ಪೋಟಕ ಬ್ಯಾಟಿಂಗ್ (Batting) ಮೂಲಕ ವಿಶ್ವ ಕ್ರಿಕೆಟ್ (Cricket) ಅನ್ನು ಅಲುಗಾಡಿಸುತ್ತಿದ್ದಾರೆ. ಕೇವಲ 15 ವರ್ಷ ವಯಸ್ಸಿನಲ್ಲೇ ಕ್ರಿಸ್ ಗೇಲ್ (Chris Gayle) ದಾಖಲೆಗಳನ್ನು ಮುರಿಯುತ್ತಾ, ಅಂತಾರಾಷ್ಟ್ರೀಯ ಸ್ಟಾರ್ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಅಷ್ಟಕ್ಕೂ ಈ ಬಿಹಾರ (Bihar) ಹುಡುಗನನ್ನು ರಾಜಸ್ಥಾನ ರಾಯಲ್ಸ್ (RR) ಫ್ರಾಂಚೈಸಿ ಹೇಗೆ ಆಯ್ಕೆ ಮಾಡಿತು? ವೈಭವ್ ಪ್ರತಿಭೆಯನ್ನು ಮೊದಲು ಗುರುತಿಸಿದವರು ಯಾರು? ಎಂಬುದರ ಬಗ್ಗೆ ಕ್ರಿಕೆಟ್ ಅಭಿಮಾನಿಗಳು (Fans) ಚರ್ಚೆ ನಡೆಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಕನ್ನಡಿಗ ರಾಹುಲ್ ದ್ರಾವಿಡ್ ಅಲ್ಲ. ಹೌದು, ವೈಭವ್ ಸೂರ್ಯವಂಶಿ ಅವರನ್ನು ಐಪಿಎಲ್ ಅಖಾಡಕ್ಕೆ ಕರೆತಂದವರು ಬಿಹಾರದ ಮಾಜಿ ಸ್ಪಿನ್ನರ್ ಮತ್ತು ರಾಜಸ್ಥಾನ್ ರಾಯಲ್ಸ್ ನೆಟ್ ಬೌಲರ್ ಸಮರ್ ಖಾದ್ರಿ. ಸ್ಥಳೀಯ ಪಂದ್ಯವೊಂದರಲ್ಲಿ ವೈಭವ್ ಬಾರಿಸಿದ ಸಿಕ್ಸರ್‌ಗಳು ಸಮರ್ ಖಾದ್ರಿ ಅವರ ಗಮನ ಸೆಳೆದಿದ್ದವು. ಇಲ್ಲಿಂದ ನೋಡಿ, ವೈಭವ್ ಸೂರ್ಯವಂಶಿ ಎಂಬ ಯುವ ಪ್ರತಿಭೆ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಲು ಪ್ರಾರಂಭಿಸಿದರು.
ಪಾಟ್ನಾದ 36 ವರ್ಷದ ಸಮರ್ ಖಾದ್ರಿ ಮಾಜಿ ಲೆಗ್ ಸ್ಪಿನ್ನರ್ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಅವರು 2009 ರಿಂದ 2021 ರವರೆಗೆ ಜಾರ್ಖಂಡ್ ಮತ್ತು ಬಿಹಾರವನ್ನು ಪ್ರತಿನಿಧಿಸಿದ್ದರು. ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರು 45 ಪಂದ್ಯಗಳಲ್ಲಿ 157 ವಿಕೆಟ್‌ಗಳನ್ನು ಪಡೆಯುವ ಮೂಲಕ ಸಂಚಲನ ಸೃಷ್ಟಿಸಿದರು. ಅವರು ಲಿಸ್ಟ್-ಎ ನಲ್ಲಿ 19 ವಿಕೆಟ್‌ಗಳು ಮತ್ತು ಟಿ20ಗಳಲ್ಲಿ 14 ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ.
ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಅವರು ಕಳೆದ 3-4 ವರ್ಷಗಳಿಂದ ರಾಜಸ್ಥಾನ ರಾಯಲ್ಸ್ ತಂಡದ ಅಧಿಕೃತ ಪ್ರತಿಭಾ ಸ್ಕೌಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಅಡಗಿರುವ ಅದ್ಭುತ ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿವುದು ಮತ್ತು ಅವರನ್ನು ಐಪಿಎಲ್ ಮಟ್ಟಕ್ಕೆ ತರುವುದು ಅವರ ಮುಖ್ಯ ಜವಾಬ್ದಾರಿಯಾಗಿದೆ. ವೈಭವ್ ಸೂರ್ಯವಂಶಿ ವಿಷಯದಲ್ಲಿಯೂ ಸಮರ್ ಖಾದ್ರಿ ಅದೇ ರೀತಿ ಕೆಲಸ ಮಾಡಿದರು.
ಸಮರ್ ಖಾದ್ರಿ ವೈಭವ್ ಸೂರ್ಯವಂಶಿಯನ್ನು ಹೇಗೆ ಕಂಡುಹಿಡಿದು ಕರೆತಂದರು ಗೊತ್ತಾ? ಸಂದರ್ಶನವೊಂದರಲ್ಲಿ ಸಮರ್ ಖಾದ್ರಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ವೈಭವ್ ಕೇವಲ 11-12 ವರ್ಷ ವಯಸ್ಸಿನವನಾಗಿದ್ದಾಗ ಆ ಯುವಕನ ಬಗ್ಗೆ ಮೊದಲು ಕೇಳಿದೆ. ನಂತರ ಒಂದು ದಿನ, ಅವರು ಪಾಟ್ನಾದಲ್ಲಿ ನಡೆದ ಸ್ಥಳೀಯ ಪಂದ್ಯದಲ್ಲಿ ಮುಖಾಮುಖಿಯಾದರು. ವೈಭವ್ ಸುಮಾರು 50 ಎಸೆತಗಳಲ್ಲಿ ಶತಕ ಗಳಿಸಿದರು. ಈ ಸಮಯದಲ್ಲಿ ವೈಭವ್ ನನ್ನ ಬೌಲಿಂಗ್‌ನಲ್ಲಿಯೂ ರನ್ ಗಳಿಸಿದರು. ಈ ಸಂದರ್ಭದಲ್ಲಿ ಈ ಹುಡುಗನಲ್ಲಿ ಏನೋ ವಿಶೇಷತೆ ಇದೆ ಎಂದು ನನಗೆ ಅರಿವಾಯಿತು.
ಶೀಘ್ರದಲ್ಲೇ, ವೈಭವ್‌ಗೆ ಬಿಹಾರ ರಣಜಿ ತಂಡದಲ್ಲಿ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ರಾಜಸ್ಥಾನ ರಾಯಲ್ಸ್‌ನ ಹೈ-ಪರ್ಫಾರ್ಮೆನ್ಸ್ ನಿರ್ದೇಶಕ ಜುಬಿನ್ ಭರುಚಾ ಅವರೊಂದಿಗೆ ಮಾತನಾಡಿದೆ. ಬಳಿಕ ನನನ್ನು ನಂಬಿ, ರಾಜಸ್ಥಾನ ಮ್ಯಾನೇಜ್‌ಮೆಂಟ್ ವೈಭವ್ ಅವರನ್ನು ತಮ್ಮ ಅಧಿಕೃತ ಟ್ರಯಲ್ಸ್‌ಗೆ ಆಹ್ವಾನಿಸಿತು.
ಸೂರ್ಯವಂಶಿ ಟ್ರಯಲ್ ನೆಟ್ಸ್‌ಗೆ ಕಾಲಿಟ್ಟ ತಕ್ಷಣ ಎದುರಿಸಿದ ಮೊದಲ 3 ಎಸೆತಗಳಲ್ಲಿ ಸತತವಾಗಿ 3 ಸಿಕ್ಸರ್‌ಗಳನ್ನು ಹೊಡೆದರು. ಅಲ್ಲಿನ ತರಬೇತುದಾರರು ಮತ್ತು ಆಯ್ಕೆದಾರರ ಚಿತ್ತ ಕದ್ದರು. ಅವರ ಹೊಡೆಯುವ ಶಾಟ್ನಿಂದ ಪ್ರಭಾವಿತರಾದ ರಾಜಸ್ಥಾನ ರಾಯಲ್ಸ್ ತಂಡವು ಅವರನ್ನು ಐಪಿಎಲ್ ಹರಾಜಿಗೆ ಆಯ್ಕೆ ಮಾಡಿತು. ಆ ನಂತರ ನಡೆದ ಸಂಪೂರ್ಣ ಕಥೆಯನ್ನು ಈಗ ವಿಶ್ವ ಕ್ರಿಕೆಟ್ ವೀಕ್ಷಿಸುತ್ತಿದೆ.
Vaibhav Sooryavanshi: ವೈಭವ್ ಪ್ರತಿಭೆಯನ್ನು ಗುರುತಿಸಿದ್ದು ಕನ್ನಡಿಗ ದ್ರಾವಿಡ್ ಅಲ್ಲ! ಐಪಿಎಲ್ ಅಖಾಡಕ್ಕೆ ಸೂರ್ಯವಂಶಿ ಎಂಟ್ರಿ ಕೊಟ್ಟಿದ್ದೇಗೆ ಗೊತ್ತಾ?













