Last Updated:
ಮೊದಲ ಎಸೆತದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಸ್ಟಂಪ್ ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಕೇವಲ 10 ಎಸೆತಗಳನ್ನೆದುರಿಸಿದ ವೈಭವ್ 14 ರನ್ ಗಳಿಸಿ ಅವರು ಪೆವಿಲಿಯನ್ ಸೇರಿದರು.
ಐಪಿಎಲ್, ಭಾರತ ಎ ತಂಡಗಳ ಪರ ಆಡಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ್ದ ವೈಭವ್ ಮೇಲೆ ಇಡೀ ಕ್ರಿಕೆಟ್ ಜಗತ್ತು ಭಾರೀ ನಿರೀಕ್ಷೆ ಹೊಂದಿತ್ತು. ಎಲ್ಲರ ನಿರೀಕ್ಷೆಯಂತೆ ಮೈದಾನಕ್ಕೆ ಇಳಿದ ವೈಭವ್ 3ನೇ ಎಸೆತದಲ್ಲಿ ಮೊದಲ ರನ್ಗಳಿಸಿಕೊಂಡರು. 4ನೇ ಎಸೆತದಲ್ಲಿ ಮಾರಕ ವೇಗಿ ಜೋಫ್ರಾ ಆರ್ಚರ್ಗೆ ಸಿಕ್ಸರ್ ಸಿಡಿಸಿ ಸ್ಫೋಟಕ ಇನ್ನಿಂಗ್ಸ್ ನಿರೀಕ್ಷೆ ಮೂಡಿಸಿದ್ದರು. 4ನೇ ಓವರ್‌ನಲ್ಲಿ ಜೋಶ್ ಟಂಗ್ ಬೌಲಿಂಗ್ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದರು. ಆದರೆ 5ನೇ ಓವರ್‌ನಲ್ಲಿ ವಿಲ್ ಜಾಕ್ಸ್ ಸ್ಪಿನ್ ಮ್ಯಾಜಿಕ್ ಅರಿಯಲು ವಿಫಲರಾದರು. ದೊಡ್ಡ ಹೊಡೆತದ ಪ್ರಯತ್ನಕ್ಕೆ ಮುಂದಾಗಿ ಸ್ಟಂಪ್ ಔಟ್ ಆದರು.
ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವೈಭವ್ ಸೂರ್ಯವಂಶಿ ಎಂದಿನಂತೆ ತಾಳ್ಮೆ ಕಳೆದುಕೊಂಡು ಬ್ಯಾಟಿಂಗ್ ಮಾಡಲು ಹೋಗಿ ಕೈಸುಟ್ಟುಕೊಂಡರು. ಆ ಓವರ್‌ನಲ್ಲಿ ಈಗಾಗಲೇ 15 ರನ್ ಬಂದಿದ್ದರೂ, ಮತ್ತೊಂದು ಸಿಕ್ಸರ್ ಹೊಡೆಯುವ ಯತ್ನದಲ್ಲಿ ಮುನ್ನುಗ್ಗಿದರು. ಆದರೆ ಜಾಕ್ಸ್ ವೈಡ್ ಯಾರ್ಕರ್ ಮಾಡಿ ಸೂರ್ಯವಂಶಿಯನ್ನ ಸ್ಟಂಪ್ ಬಲೆಗೆ ಬೀಳಿಸಿದರು. ಪದಾರ್ಪಣೆ ಪಂದ್ಯದಲ್ಲಿ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದು ದೊಡ್ಡ ಇನಿಂಗ್ಸ್ ಆಡುವ ಬದಲು, ಪ್ರತಿ ಎಸೆತವನ್ನೂ ಬೌಂಡರಿಗಟ್ಟುವ ಆತುರದಲ್ಲಿ ವಿಕೆಟ್ ಕಳೆದುಕೊಂಡಿದ್ದಕ್ಕೆ ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಉಂಟುಮಾಡಿದೆ.
ವೈಭವ್ ಸೂರ್ಯವಂಶಿ ಕೇವಲ 14 ರನ್ಗಳಿಸಿದರೂ ಮೊದಲ ಪಂದ್ಯದಲ್ಲಿ ಅರ್ಧಶತಕದ ಜೊತೆಯಾಟಕ್ಕೆ ಕಾರಣರಾದರು. ಕಳೆದ ಮೂರು ಪಂದ್ಯಗಳ ಬಳಿಕ ಭಾರತಕ್ಕೆ ಸಿಕ್ಕಂತಹ ಮೊದಲ ಅರ್ಧಶತಕ ಇದಾಗಿದೆ. ವೈಭವ್ ಅಬ್ಬರಿಸುವವರೆಗೂ ಅಭಿಷೇಕ್ ರನ್ಗಳಿಸಲು ಪರದಾಡಿದ್ದರು. ಆದರೆ ವೈಭವ್ 2 ಸಿಕ್ಸರ್ ಸಿಡಿಸಿದ ಬೆನ್ನಲ್ಲೇ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡ ಅಭಿಷೇಕ್ ತಮ್ಮ ಲಯಕ್ಕೆ ಮರಳಿದರು. ಆದರೆ ಅವರೂ ಕೂಡ 24 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 43 ರನ್ಗಳಿಸಿ ವಿಕೆಟ್ ಒಪ್ಪಿಸಿದರು.













