Last Updated:
Uttar Pradesh: ಮುಜಫರ್ ನಗರ ಜಿಲ್ಲಾ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯ ಕಾಲು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರಿಂದ ಉದ್ದೇಶಪೂರ್ವಕವಾಗಿ ಮುರಿದ ಆರೋಪ, ರೇಷ್ಮಾ ದೂರು, ಸುನಿಲ್ ತೆವಾಟಿಯಾ ಗಂಭೀರ ತನಿಖೆ ಭರವಸೆ
ಮುಜಫರ್ ನಗರ (ಉತ್ತರ ಪ್ರದೇಶ): ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅಂದರೆ ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯ (Government Doctor) ಹಣದ ಆಸೆಗಾಗಿ ತನ್ನ ವೃತ್ತಿ ಧರ್ಮವನ್ನೇ ಮರೆತು ರಾಕ್ಷಸನಂತೆ ವರ್ತಿಸಿದ್ದಾನೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ 14 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯ ಕಾಲನ್ನು ಕೇವಲ ಹಣಕ್ಕಾಗಿ ಬಲವಂತವಾಗಿ ಮುರಿದು ವಿಕೃತಿ ಮೆರೆದಿದ್ದಾನೆ. ಈ ಅಮಾನವೀಯ ಘಟನೆ (Inhuman Incident) ಉತ್ತರ ಪ್ರದೇಶದ (Uttar Pradesh) ಮುಜಫರ್ ನಗರದಲ್ಲಿ (Muzaffarnagar) ನಡೆದಿದ್ದು, ಬಡ ತಾಯಿ ತನ್ನ ಮಗಳೊಂದಿಗೆ ನ್ಯಾಯಕ್ಕಾಗಿ ಈಗ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾಳೆ. ಆ ಕುರಿತ ವರದಿ ಇಲ್ಲಿದೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಮುಜಫರ್ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಾಯಿ ರೇಷ್ಮಾ ಅವರು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು ಒಂದೂವರೆ ತಿಂಗಳ ಹಿಂದೆ ಅವರು ತಮ್ಮ 14 ವರ್ಷದ ಮಗಳ ಬಲಗಾಲಿನ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶಸ್ತ್ರಚಿಕಿತ್ಸೆ ಮಾಡಲು ಅಲ್ಲಿನ ಆಸ್ಪತ್ರೆ ಸಿಬ್ಬಂದಿ 25,000 ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಆದರೆ ರೇಷ್ಮಾ ಅವರು ಓರ್ವ ವಿಧವೆಯಾಗಿದ್ದು, ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ತಮ್ಮಿಂದ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವೈದ್ಯರ ಮುಂದೆ ತೋಡಿಕೊಂಡಿದ್ದಾರೆ. ಆದರೆ ಕರುಣೆ ತೋರದ ವೈದ್ಯರು ಹಣವಿಲ್ಲದೆ ಚಿಕಿತ್ಸೆ ನೀಡಲು ನಿರಾಕರಿಸಿದರು.
ಮುಂದುವರೆದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ ನಂತರ, ರೇಷ್ಮಾ ಅವರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನ್ಯಾಯ ಕೇಳಿದರು. ಬಡ ಮಹಿಳೆಯ ಪರಿಸ್ಥಿತಿಯನ್ನು ಅರಿತ ಜಿಲ್ಲಾಧಿಕಾರಿಗಳು, ಬಾಲಕಿಗೆ ಉಚಿತ ಚಿಕಿತ್ಸೆ ನೀಡುವಂತೆ ಮುಖ್ಯ ವೈದ್ಯಕೀಯ ಅಧಿಕಾರಿಗೆ ಆದೇಶ ನೀಡಿದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಲು ಮುಂದಾದರೂ ಸಹ ತಮ್ಮ ಹಣದಾಸೆಯನ್ನು ಬಿಡಲಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನ ಮಹಿಳೆಯಿಂದ ಬಲವಂತವಾಗಿ 8,000 ರೂಪಾಯಿಗಳನ್ನು ಕಿತ್ತುಕೊಂಡರು. ಅಷ್ಟೇ ಅಲ್ಲದೆ, ಚಿಕಿತ್ಸೆಯ ನಂತರ ಉಳಿದ ಹಣವನ್ನು ಕಡ್ಡಾಯವಾಗಿ ಪಾವತಿಸುವಂತೆ ತಾಕೀತು ಮಾಡಿ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.
ವರದಿಗಳ ಪ್ರಕಾರ, ಶಸ್ತ್ರಚಿಕಿತ್ಸೆ ಮುಗಿದು ಕೆಲವು ದಿನಗಳ ನಂತರ, ಬಾಲಕಿಯ ಆರೋಗ್ಯ ತಪಾಸಣೆ ಮಾಡಬೇಕಿದೆ ಎಂದು ವೈದ್ಯರು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ. ತಾಯಿ ತನ್ನ ಮಗಳೊಂದಿಗೆ ಆಸ್ಪತ್ರೆಗೆ ಹೋದಾಗ, ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯನೇ ಬಾಲಕಿಯ ಮೊಣಕಾಲನ್ನು ಬಲವಂತವಾಗಿ ತಿರುಚಿದ್ದಾನೆ. ಆ ಸಂದರ್ಭದಲ್ಲಿ ಬಾಲಕಿ ಅತಿಯಾದ ನೋವಿನಿಂದ ಅರಚಿಕೊಂಡಿದ್ದಾಳೆ ಹಾಗೂ ಕಾಲಿನ ಮೂಳೆ ಮುರಿದ ಶಬ್ದ ಕೂಡ ಸ್ಪಷ್ಟವಾಗಿ ಕೇಳಿಸಿದೆ ಎಂದು ತಾಯಿ ಆರೋಪಿಸಿದ್ದಾರೆ. ಉಳಿದ ಹಣವನ್ನು ನೀಡದ ಕಾರಣಕ್ಕಾಗಿಯೇ ವೈದ್ಯ ಈ ರೀತಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ. ಈ ಬಗ್ಗೆ ವೈದ್ಯರಲ್ಲಿ ಪ್ರಶ್ನಿಸಿದಾಗ, ಅವರು ತಾಯಿ ಮತ್ತು ಮಗಳನ್ನು ಅಲ್ಲಿಂದ ದೂರ ಓಡಿಸಿದ್ದಾರೆ. ಆಸ್ಪತ್ರೆಯ ಇತರ ಸಿಬ್ಬಂದಿಗೆ ದೂರು ನೀಡಿದರೂ ಯಾರೊಬ್ಬರೂ ಇವರ ನೆರವಿಗೆ ಧಾವಿಸಿಲ್ಲ. ಈಗ ನ್ಯಾಯಕ್ಕಾಗಿ ಮಹಿಳೆ ಅಲೆದಾಡುತ್ತಿದ್ದಾಳೆ.
ಮುಂದುವರೆದು, ಈ ಅಮಾನವೀಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಸುನಿಲ್ ತೆವಾಟಿಯಾ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೊಂದು ಬದಿಯನ್ನು ಅಥವಾ ಎರಡೂ ಕಡೆಯವರ ಹೇಳಿಕೆಗಳನ್ನು ಕೇಳದೆ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಅಕಾಲಿಕವಾಗುತ್ತದೆ. ಆದರೆ ಈ ಇಡೀ ಪ್ರಕರಣದ ಬಗ್ಗೆ ಸಮಗ್ರವಾಗಿ ಮತ್ತು ಗಂಭೀರವಾಗಿ ತನಿಖೆ ನಡೆಸಲಾಗುವುದು. ತನಿಖೆಯ ವೇಳೆ ಆಸ್ಪತ್ರೆಯ ಸಿಬ್ಬಂದಿ ಅಥವಾ ವೈದ್ಯರ ಕಡೆಯಿಂದ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ತಪ್ಪು ಕಂಡುಬಂದರೆ, ಅಂತಹವರ ವಿರುದ್ಧ ಅತ್ಯಂತ ಕಠಿಣ ಕಾನೂನು ಮತ್ತು ಆಡಳಿತಾತ್ಮಕ ಕ್ರಮವನ್ನು ಖಂಡಿತ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
Muzaffarnagar,Uttar Pradesh
Jun 04, 2026 10:44 PM IST













