Last Updated:
ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ ವಲಯದ ಆತಂಕವನ್ನು ದ್ವಿಗುಣಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಮುಂಬೈನಲ್ಲಿ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಇತ್ತೀಚೆಗೆ ಲಭ್ಯವಾಗಿರುವ ದತ್ತಾಂಶಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ. ನಗರದಲ್ಲಿ ಅಪ್ರಾಪ್ತ ಹಾಗೂ ಹದಿಹರೆಯದ ಹುಡುಗಿಯರಲ್ಲಿ(Child) ಗರ್ಭಪಾತದ (Abortion) ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ಮತ್ತು ಆರೋಗ್ಯ (Health) ವಲಯದ ಆತಂಕವನ್ನು ದ್ವಿಗುಣಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಕಾರ್ಯಕರ್ತ ಚೇತನ್ ಕೊಠಾರಿ ಅವರು ಮುಂಬೈನಲ್ಲಿ ಗರ್ಭಪಾತ, ತಾಯಂದಿರ ಸಾವುಗಳು ಮತ್ತು ಗರ್ಭಪಾತ ಸಂಬಂಧಿತ ಸಾವುಗಳ ವಿವರಗಳನ್ನು ಕೋರಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಬಿಎಂಸಿಯ ಕುಟುಂಬ ಕಲ್ಯಾಣ ಘಟಕ ನೀಡಿದ ಪ್ರತಿಕ್ರಿಯೆಯ ಪ್ರಕಾರ, ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗಿನ ಒಂದೇ ವರ್ಷದ ಅವಧಿಯಲ್ಲಿ ಮುಂಬೈನಲ್ಲಿ 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಲ್ಲಿ ಕನಿಷ್ಠ 716 ಗರ್ಭಪಾತಗಳು ದಾಖಲಾಗಿವೆ.
ಇದೇ ಅವಧಿಯಲ್ಲಿ ನಗರದಲ್ಲಿ ಒಟ್ಟು 20,950 ವೈದ್ಯಕೀಯ ಗರ್ಭಧಾರಣೆಯ ಮುಕ್ತಾಯ (ಎಂಟಿಪಿ) ಕಾರ್ಯವಿಧಾನಗಳು ನಡೆದಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಗರ್ಭನಿರೋಧಕಗಳ ವೈಫಲ್ಯ ಅಥವಾ ಅವುಗಳ ಅಸಮರ್ಪಕ ಬಳಕೆಯೇ ಅತಿ ಮುಖ್ಯ ಕಾರಣ ಎಂದು ದತ್ತಾಂಶಗಳು ಉಲ್ಲೇಖಿಸಿವೆ.
ಆರ್‌ಟಿಐ ವರದಿಯು ಮುಂಬೈನ ಮಹಿಳೆಯರಲ್ಲಿ ವಯಸ್ಸಿನ ಆಧಾರದ ಮೇಲೆ ಗರ್ಭಪಾತದ ಅಂಕಿ-ಅಂಶಗಳನ್ನು ಸ್ಪಷ್ಟವಾಗಿ ವಿಂಗಡಿಸಿದೆ.
25-29 ವರ್ಷ; ಈ ವಯೋಮಾನದ ಮಹಿಳೆಯರಲ್ಲಿ ಅತಿ ಹೆಚ್ಚು ಅಂದರೆ 7,296 ಗರ್ಭಪಾತ ಪ್ರಕರಣಗಳು ದಾಖಲಾಗಿವೆ. 30-34 ವರ್ಷ: ಈ ಗುಂಪಿನಲ್ಲಿ 5,673 ಪ್ರಕರಣಗಳು ವರದಿಯಾಗಿ ಎರಡನೇ ಸ್ಥಾನದಲ್ಲಿದೆ.
20-24 ವರ್ಷ; ಈ ವಯಸ್ಸಿನ ಯುವತಿಯರಲ್ಲಿ 3,314 ಗರ್ಭಪಾತದ ಪ್ರಕರಣಗಳು ಕಂಡುಬಂದಿವೆ.
19 ವರ್ಷಕ್ಕಿಂತ ಕಡಿಮೆ; ಹದಿಹರೆಯದ ಹುಡುಗಿಯರಲ್ಲಿ 716 ಪ್ರಕರಣಗಳು ದಾಖಲಾಗಿವೆ.
ಗರ್ಭನಿರೋಧಕಗಳ ಅಸಮರ್ಪಕ ಬಳಕೆ ಮತ್ತು ವೈಫಲ್ಯದಿಂದಾಗಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗರ್ಭಪಾತಗಳು ನಡೆಯುತ್ತಿರುವುದು ಲೈಂಗಿಕ ಶಿಕ್ಷಣದ ಕೊರತೆಯನ್ನು ಎತ್ತಿ ತೋರಿಸುತ್ತದೆ. ವಿಶೇಷವಾಗಿ 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಲ್ಲಿ ಗರ್ಭಪಾತಗಳು ಸಂಭವಿಸುವುದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೀರ್ಘಾವಧಿಯ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆಯು ತಾಯಂದಿರ ರಕ್ತಹೀನತೆ, ಅಪೌಷ್ಟಿಕತೆ ಮತ್ತು ಹೆರಿಗೆಯ ಸಮಯದಲ್ಲಿ ಜೀವಕ್ಕೆ ಕಂಟಕ ತರಬಹುದು. ಸುರಕ್ಷಿತವಲ್ಲದ ವಿಧಾನಗಳ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವುದು ಅಥವಾ ತಡವಾಗಿ ವೈದ್ಯರನ್ನು ಸಂಪರ್ಕಿಸುವುದು ತಾಯಂದಿರ ಸಾವಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಈ ದತ್ತಾಂಶಗಳು ಕೇವಲ ಅಂಕಿ-ಅಂಶಗಳಲ್ಲ, ಬದಲಿಗೆ ಇವು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿವೆ. ನಗರ ಪ್ರದೇಶಗಳಲ್ಲಿ ಯುವ ಪೀಳಿಗೆಗೆ ಸುರಕ್ಷಿತ ಲೈಂಗಿಕತೆ ಮತ್ತು ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಶಾಲೆ, ಕಾಲೇಜು ಹಂತದಲ್ಲೇ ಸಮಗ್ರ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಬಿಎಂಸಿ ಮತ್ತು ಆರೋಗ್ಯ ಇಲಾಖೆಗಳು ಗರ್ಭನಿರೋಧಕಗಳ ಲಭ್ಯತೆಯನ್ನು ಸುಲಭಗೊಳಿಸುವುದರ ಜೊತೆಗೆ, ಅವುಗಳ ಸರಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯನ್ನು ತಡೆಯಲು ಪೋಷಕರು ಮತ್ತು ಶಿಕ್ಷಕರು ಮುಕ್ತವಾಗಿ ಸಂವಹನ ನಡೆಸುವ ವಾತಾವರಣ ನಿರ್ಮಿಸಬೇಕು. ಈ ಮೂಲಕ ಮಾತ್ರ ಮುಂಬೈನಂತಹ ಮಹಾನಗರಗಳಲ್ಲಿ ಯುವತಿಯರ ಆರೋಗ್ಯವನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.
Jun 03, 2026 10:36 PM IST













