Last Updated:
ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ.
ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸದ್ಯ ಪ್ರಯಾಣಿಕರ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಕೇವಲ 15 ನಿಮಿಷದಲ್ಲಿ ಕ್ರಮಿಸಬೇಕಿದ್ದ ದೂರವನ್ನು ಕ್ರಮಿಸಲು ಸವಾರರು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‍ನಲ್ಲಿ (Traffic) ಸಿಲುಕಬೇಕಾಯಿತು. 32 ಕೋಟಿ ರೂಪಾಯಿ ವೆಚ್ಚದ ಬೃಹತ್ ಪುನಃಸ್ಥಾಪನೆ ಕಾರ್ಯದ ಭಾಗವಾಗಿ, ಮೇಲ್ಸೇತುವೆಯ 1,422 ಕೇಬಲ್‍ಗಳ ದುರಸ್ತಿ ಮತ್ತು ಲೋಡ್ ಪರೀಕ್ಷೆ (Test) ನಡೆಯುತ್ತಿದೆ. ಇದಕ್ಕಾಗಿ ಮುಂಜಾನೆ 5 ಗಂಟೆಯಿಂದ 11 ಗಂಟೆಯವರೆಗೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿರುವುದು ಈ ಟ್ರಾಫಿಕ್ ಜಾಮ್‍ಗೆ ಕಾರಣ.
ಹಲವು ಜಿಲ್ಲೆಗಳಿಗೆ ಸಂಚಾರ ನಡೆಸುವ ಮತ್ತು ಉತ್ತರ ಬೆಂಗಳೂರಿನ ಒಳಗೆ ಮತ್ತು ಹೊರಗೆ ಚಲಿಸುವ ವಾಹನಗಳಿಗೆ ನಿರ್ಣಾಯಕ ಮಾರ್ಗವಾಗಿರುವ ಈ ಮೇಲ್ಸೇತುವೆ, ಇತ್ತೀಚಿನ ತಿಂಗಳುಗಳಲ್ಲಿ ನಿರ್ವಹಣೆಗೆ ಸಂಬಂಧಿಸಿದಂತೆ ಪದೇ ಪದೇ ಸ್ಥಗಿತಗೊಂಡಿದೆ.
ಪದೇ ಪದೇ ಸಂಭವಿಸುತ್ತಿರುವ ಈ ತಾಂತ್ರಿಕ ದೋಷಗಳಿಗೆ ಶಾಶ್ವತ ಪರಿಹಾರ ಯಾವಾಗ ಎಂಬುದು ಸಾರ್ವಜನಿಕರ ಆತಂಕ. ಅಧಿಕಾರಿಗಳ ಪ್ರಕಾರ, ಈ ಪರೀಕ್ಷಾ ಕಾರ್ಯ ಪೂರ್ಣಗೊಳ್ಳಲು ಇನ್ನೂ ನಾಲ್ಕು ದಿನಗಳ ಕಾಲಾವಕಾಶ ಬೇಕು. ಅಂದರೆ, ನೀವು ಕಚೇರಿಗೆ ಅಥವಾ ತುರ್ತು ಕೆಲಸಕ್ಕೆ ಹೋಗುವವರಾಗಿದ್ದರೆ, ಪರ್ಯಾಯ ಮಾರ್ಗ ಹುಡುಕುವುದು ಅಥವಾ ಮನೆಯಿಂದ ಬೇಗ ಹೊರಡುವುದು ಅನಿವಾರ್ಯ.
Bangalore [Bangalore],Bangalore,Karnataka













