TMC Political Crisis: ಮಮತಾ ಬ್ಯಾನರ್ಜಿಗೆ ಶಾಕ್! ಬಿಜೆಪಿ ಸೇರಲು ಗ್ರೀನ್‌ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ 20ಕ್ಕೂ ಹೆಚ್ಚು ಟಿಎಂಸಿ ಸಂಸದರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ


Last Updated:

TMC political crisis: ಪಶ್ಚಿಮ ಬಂಗಾಳದ ರಾಜಕೀಯ ಭೂಪಟ ಸಂಪೂರ್ಣವಾಗಿ ಬದಲಾಗಿದೆ. 15 ವರ್ಷಗಳ ಕಾಲ ರಾಜ್ಯವನ್ನ ಆಳಿದ ತೃಣಮೂಲ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದರ ನಡುವೆ, ಟಿಎಂಸಿಯ ಅಸ್ತಿತ್ವವೇ ಅಲಗಾಡುತ್ತಿದೆ. ಆ ಕುರಿತ ವರದಿ ಇಲ್ಲಿದೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ

ಕೊಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ (Assembly Elections) ಬಿಜೆಪಿ (BJP) ಗೆಲುವು ಸಾಧಿಸಿದ್ದೇ ಮಮತಾ ಬ್ಯಾನರ್ಜಿ (Mamata Banerjee) ಅವರ ರಾಜಕೀಯ ಜೀವನದ ಅತಿ ದೊಡ್ಡ ಅಗ್ನಿ ಪರೀಕ್ಷೆ ಶುರುವಾದಂತೆ ಕಾಣುತ್ತಿದೆ. ಒಂದೆಡೆ ಶಾರದಾ ಚಿಟ್‌ಫಂಡ್, ಕಲ್ಲಿದ್ದಲು ಹಗರಣ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ-ಸಿಬಿಐ ತನಿಖೆಯ ಬಿಸಿ ಟಿಎಂಸಿ (TMC) ನಾಯಕರನ್ನ ಬೆಂಬಿಡದೆ ಕಾಡುತ್ತಿದ್ದರೆ, ಇನ್ನೊಂದೆಡೆ ಪಕ್ಷದ ಒಳಗೇ ಬಂಡಾಯದ ಕಿಚ್ಚು ಬುಗಿಲೆದ್ದಿದೆ. ಹೌದು, ಬಂಗಾಳದ ರಾಜಕೀಯ (Bengal Politics) ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿರುವ ಸುದ್ದಿ ಏನಪ್ಪಾ ಅಂದ್ರೆ – ತೃಣಮೂಲ ಕಾಂಗ್ರೆಸ್‌ನ (Trinamool Congress) 20ಕ್ಕೂ ಹೆಚ್ಚು ಸಂಸದರು ಬಿಜೆಪಿ ಸೇರಲು ಮೋದಿ-ಶಾ (Modi-Shah) ‘ಗ್ರೀನ್ ಸಿಗ್ನಲ್’ಗಾಗಿ ಕಾಯುತ್ತಿದ್ದಾರೆ ಎನ್ನುವುದು! ಆ ಕುರಿತ ವರದಿ ಇಲ್ಲಿದೆ.

ಕೌನ್ಸಿಲರ್‌ಗಳ ಸರಣಿ ರಾಜೀನಾಮೆ

2026 ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪಶ್ಚಿಮ ಬಂಗಾಳದ ವಿವಿಧ ಪುರಸಭೆಗಳಲ್ಲಿ ಟಿಎಂಸಿ ಕೌನ್ಸಿಲರ್‌ಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ಆರಂಭಿಸಿದ್ದಾರೆ. ಅರ್ಧ ಡಜನ್‌ಗಿಂತಲೂ ಹೆಚ್ಚು ಪುರಸಭೆಗಳಲ್ಲಿ ನೂರಾರು ಕೌನ್ಸಿಲರ್‌ಗಳು ತಮ್ಮ ಸ್ಥಾನ ತೊರೆದಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಭಾಟ್‌ಪಾರಾದಲ್ಲಿ ಮೂವತ್ತೈದು ಟಿಎಂಸಿ ಕೌನ್ಸಿಲರ್‌ಗಳ ಪೈಕಿ ಮೂವತ್ತು ಜನ ಒಟ್ಟಿಗೆ ರಾಜೀನಾಮೆ ನೀಡುವ ಮೂಲಕ ಈ ಪ್ರಕ್ರಿಯೆ ಆರಂಭವಾಯಿತು. ಇದರ ಬೆನ್ನಲ್ಲೇ ಹಾಲಿಶಹರ್​ನ 23 ಕೌನ್ಸಿಲರ್​ಗಳ ಪೈಕಿ 16 ಕೌನ್ಸಿಲರ್​ಗಳು ಕೂಡ ಪಕ್ಷ ತೊರೆದಿದ್ದಾರೆ. ಇದರೊಂದಿಗೆ ಉತ್ತರ ಬ್ಯಾರಕ್‌ಪುರ, ಗಾರುಲಿಯಾ ಮತ್ತು ಡೈಮಂಡ್ ಹಾರ್ಬರ್ ಮುಂತಾದ ಕಡೆಗಳಲ್ಲೂ ಟಿಎಂಸಿ ಕೌನ್ಸಿಲರ್​ಗಳ ರಾಜೀನಾಮೆ ಪರ್ವ ಮುಂದುವರಿದಿದೆ. ಏತನ್ಮಧ್ಯೆ, ಕೋಲ್ಕತ್ತಾ ಮಹಾನಗರ ಪಾಲಿಕೆಯಲ್ಲೂ ಹಲವು ಕೌನ್ಸಿಲರ್‌ಗಳು ಪಕ್ಷ ಬದಲಾಯಿಸಲು ಸಜ್ಜಾಗಿದ್ದಾರೆ.

ಸಭೆಗಳಿಂದ ದೂರ ಉಳಿದ ಶಾಸಕರು!

ಇನ್ನು, ಚುನಾವಣಾ ಫಲಿತಾಂಶದ ನಂತರ ಮಮತಾ ಬ್ಯಾನರ್ಜಿ ಕರೆದ ಸಭೆಗಳಿಗೆ ಪಕ್ಷದ ಕೆಲವು ಶಾಸಕರು ಹಾಜರಾಗುತ್ತಿಲ್ಲ. ಜೊತೆಗೆ ಸಭೆಗೆ ಬರದೇ ಇರಲು ಯಾವುದೇ ಕಾರಣವನ್ನೂ ಸಹ ಅವರು ನೀಡುತ್ತಿಲ್ಲ. ಅದರಲ್ಲೂ, ಸದ್ಯ, ಪಕ್ಷದ ಅಸ್ತಿತ್ವವೇ ಅಪಾಯದಲ್ಲಿರುವಾಗ ಶಾಸಕರು ಮತ್ತು ಸಂಸದರು ದೀದಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ, ದೀದಿ ನಡೆಸಿದ ಮೊದಲ ಸಭೆಯಲ್ಲೇ ಹತ್ತರಿಂದ ಹನ್ನೆರಡು ಹೊಸ ಶಾಸಕರು ಗೈರುಹಾಜರಾಗಿದ್ದರು. ಜೊತೆಗೆ ಫಲಿತಾಂಶದ ನಂತರ ನಡೆದ ಪ್ರತಿಭಟನೆಗಳಲ್ಲೂ ಶಾಸಕರನ್ನು ಒಗ್ಗೂಡಿಸಲು ಮಮತಾ ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, “ಯಾರು ಹೋಗುತ್ತಾರೋ ಹೋಗಲಿ, ಉಳಿದವರನ್ನು ಇಟ್ಟುಕೊಂಡು ಪಕ್ಷವನ್ನು ಮತ್ತೆ ಕಟ್ಟುವೆ” ಎಂದು ದೀದಿ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Kakali Ghosh vs Mamata Banerjee
ಕಾಕೋಲಿ ಘೋಷ್ ಅಸಮಾಧಾನ

ಮುಂದುವರೆದು, ಪಕ್ಷದಿಂದ ನಾಲ್ಕು ಬಾರಿ ಸಂಸದರಾಗಿದ್ದ ಕಾಕೋಲಿ ಘೋಷ್ ದಸ್ತಿದಾರ್ ಅವರ ಕೋಪ ಟಿಎಂಸಿ ಪಕ್ಷದ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಅವರ ಬಳಿ ಇದ್ದ ಲೋಕಸಭೆಯ ಮುಖ್ಯ ಸಚೇತಕ ಹುದ್ದೆಯನ್ನು ಕಿತ್ತುಕೊಂಡು ಕಲ್ಯಾಣ್ ಬ್ಯಾನರ್ಜಿ ಅವರಿಗೆ ನೀಡಿದಾಗಿನಿಂದ ಕಾಕೋಲಿ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನವನ್ನು ಬಳಸಿಕೊಂಡ ಕೇಂದ್ರ ಸರ್ಕಾರ ಅವರಿಗೆ Y ಶ್ರೇಣಿಯ ಭದ್ರತೆಯನ್ನು ಒದಗಿಸಿದೆ. ಇದರ ಬೆನ್ನಲ್ಲೇ ಕಾಕೋಲಿ ಅವರು ಐ-ಪ್ಯಾಕ್ ಸಂಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿ ತಮ್ಮ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಸಂಸದರ ವಲಸೆಗೆ ದಾರಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಬಂಡಾಯಕ್ಕೆ ಅಭಿಷೇಕ್​ ಕಾರಣ?

ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರು ಈಗ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತುತ್ತಿದ್ದಾರೆ. ಅದರಂತೆ, ಯಾವುದೋ ರೂಮ್​ನಲ್ಲಿ ಕೂತು ರಾಜಕೀಯ ತಂತ್ರ ರೂಪಿಸುವುದರಿಂದ ಪಕ್ಷ ಬೆಳೆಯುವುದಿಲ್ಲ, ನಾಯಕರು ಜನರ ಮಧ್ಯೆ ಹೋಗಿ ಕೆಲಸ ಮಾಡಬೇಕು ಎಂದು ಕುಣಾಲ್ ಘೋಷ್ ಮತ್ತು ರಿತುಬ್ರತ ಬ್ಯಾನರ್ಜಿ ಅವರಂತಹ ಹಿರಿಯ ಶಾಸಕರು ಸಭೆಯಲ್ಲೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪಕ್ಷದ ಹೈಕಮಾಂಡ್ ತಾನು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳನ್ನು ಕಾರ್ಯಕರ್ತರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸೇರಲಿದ್ದಾರೆಯೇ ಟಿಎಂಸಿ ಸಂಸದರು?

ಪ್ರಸ್ತುತ ಲೋಕಸಭೆಯಲ್ಲಿ ಟಿಎಂಸಿ 29 ಸಂಸದರನ್ನು ಹೊಂದಿದ್ದು, ವಿರೋಧ ಪಕ್ಷಗಳಲ್ಲಿ ಎರಡನೇ ದೊಡ್ಡ ಶಕ್ತಿಯಾಗಿದೆ. ಆದರೆ ಈ ಚಿತ್ರಣ ಶೀಘ್ರದಲ್ಲೇ ಬದಲಾಗುವ ಲಕ್ಷಣಗಳಿವೆ.! ಹೌದು, ಮೂಲಗಳ ಪ್ರಕಾರ, ಬಿಜೆಪಿಯಿಂದ ಹಸಿರು ನಿಶಾನೆ ಸಿಕ್ಕ ತಕ್ಷಣ ಸುಮಾರು 20 ರಿಂದ 25 ಸಂಸದರು ಒಟ್ಟಿಗೆ ಪಕ್ಷ ಬದಲಾಯಿಸಲು ಸಿದ್ಧರಾಗಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಂತಹ ಕೆಲವರನ್ನು ಹೊರತುಪಡಿಸಿ ಉಳಿದವರನ್ನು ಸೇರಿಸಿಕೊಳ್ಳಲು ಬಿಜೆಪಿ ಕೂಡ ಉತ್ಸುಕವಾಗಿದೆ ಎನ್ನಲಾಗಿದೆ.

ಏತನ್ಮಧ್ಯೆ, ಲೋಕಸಭೆಯಲ್ಲಿ ಪ್ರಸ್ತುತ 240 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ಬಹುಮತಕ್ಕೆ 22 ಸ್ಥಾನಗಳ ಕೊರತೆಯಿದೆ. ಅದರಲ್ಲೂ, ಟಿಎಂಸಿ ಸಂಸದರು ಬಂದರೆ ಕೇಂದ್ರದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed