Sridevi: ನಟಿ ಶ್ರೀದೇವಿ ಆಸ್ತಿ ವಿವಾದ, ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ! ಏನಿದು ಪ್ರಕರಣ? | | ACTPnews

ಕೃಪೆ: (ANI)


Last Updated:

ನಟಿ ಶ್ರೀದೇವಿ ಅವರ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ ನೀಡಿದೆ.

ಕೃಪೆ: (ANI)
ಕೃಪೆ: (ANI)

ಶ್ರೀದೇವಿ (Sridevi) ಭಾರತದ ಮೊಟ್ಟ ಮೊದಲ ಲೇಡಿ ಸೂಪರ್ ಸ್ಟಾರ್‌, ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದ ನಟಿ ಇನ್ನು ನೆನಪು ಮಾತ್ರ. ಸದ್ಯ, ನಟಿ ಶ್ರೀದೇವಿ ಅವರ ಕುಟುಂಬಕ್ಕೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಸಲಹೆ ನೀಡಿದೆ.

ಚೆನ್ನೈನ ಶೋಲಿಂಗನಲ್ಲೂರು ಪ್ರದೇಶದಲ್ಲಿರುವ ಸುಮಾರು 4.77 ಎಕರೆ ಭೂಮಿಗೆ ಸಂಬಂಧಿಸಿದ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರನ್ನು ಮಧ್ಯಸ್ಥಗಾರರನ್ನಾಗಿ ನೇಮಿಸುವುದಾಗಿ ತಿಳಿಸಿದೆ.

ಏನಿದು ಆಸ್ತಿ ವಿವಾದ?

ಈ ಪ್ರಕರಣವು ಚೆನ್ನೈನ ಶೋಲಿಂಗನಲ್ಲೂರು ಪ್ರದೇಶದಲ್ಲಿರುವ ಈಸ್ಟ್ ಕೋಸ್ಟ್ ರಸ್ತೆ ಹತ್ತಿರದ ಸುಮಾರು 4.77 ಎಕರೆ ಭೂಮಿಗೆ ಸಂಬಂಧಿಸಿದ್ದಾಗಿದೆ. ನಟಿ ಶ್ರೀದೇವಿ, ಅವರ ತಾಯಿ ಮತ್ತು ಸಹೋದರಿ 1988 ರಲ್ಲಿ ನಾಲ್ಕು ಪ್ರತ್ಯೇಕ ಸೇಲ್ ಡೀಡ್‌ಗಳ ಮೂಲಕ ಈ ಭೂಮಿಯನ್ನು ಖರೀದಿಸಿದ್ದರು. 2018 ರಲ್ಲಿ ಶ್ರೀದೇವಿ ನಿಧನರಾದರು. 2023 ರಲ್ಲಿ ಈ ಆಸ್ತಿಗೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಹಾಗೂ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರ ಹೆಸರುಗಳನ್ನು ದಾಖಲಿಸಲಾಯಿತು. ಪ್ರಸ್ತುತ ಇಲ್ಲಿ ಬೋನಿ ಕಪೂರ್ ಕುಟುಂಬದ ಫಾರ್ಮ್‌ಹೌಸ್ ಇದೆ.
ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆಯಾದ ನಂತರ, ಎಂ.ಸಿ. ಶಿವಕಾಮಿ ಎಂಬ ಮಹಿಳೆ, ಅವರ ಸಹೋದರ ಎಂ.ಸಿ. ನಟರಾಜನ್ ಮತ್ತು ತಾಯಿ ಚಂದ್ರಭಾನು ಅವರು ಚೆಂಗಲ್‌ಪಟ್ಟು ಸಿವಿಲ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. 1988 ರಲ್ಲಿ ನಡೆದ ಮಾರಾಟವು ಕಾನೂನುಬಾಹಿರ ಎಂದು ಅವರು ವಾದಿಸಿದರು. 1943 ರಲ್ಲಿ ಈ ಭೂಮಿಯನ್ನು ಖರೀದಿಸಿದ್ದ ಎಂ.ಸಿ. ಸಂಬಂದ ಮುದಲಿಯಾರ್ ಅವರ ವಂಶಸ್ಥರು ತಾವು ಎಂದು ಹಾಗೂ ಆಸ್ತಿಯಲ್ಲಿ ತಮಗೆ 1/5 ರಷ್ಟು ಪಾಲು ಇದೆ ಎಂದು ಹಕ್ಕು ಮಂಡಿಸಿದರು.
ಹೈಕೋರ್ಟ್ ಆದೇಶ

ಇದೇ ವಿಚಾರವಾಗಿ ಕಪೂರ್‌ ಕುಟುಂಬವು ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ವರ್ಷದ ಮೇ ತಿಂಗಳಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಟಿ.ವಿ. ತಮಿಳ್‌ಸೆಲ್ವಿ ಅವರ ಪೀಠವು ಬೋನಿ ಕಪೂರ್ ಮತ್ತು ಅವರ ಪುತ್ರಿಯರಿಗೆ ರಿಲೀಫ್ ನೀಡಿತು. ಕೆಳ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಸಿವಿಲ್ ಸೂಟ್ ಅನ್ನು ಆ ಪೀಠವು ತಳ್ಳಿಹಾಕಿತು. 1988ರಲ್ಲಿ ನಡೆದ ಮಾರಾಟವನ್ನು ಸುಮಾರು 40 ವರ್ಷಗಳ ಬಳಿಕ ಪ್ರಶ್ನಿಸಲಾಗಿದೆ ಮತ್ತು ಕಾನೂನಿನಲ್ಲಿ ನಿಗದಿಪಡಿಸಲಾದ ಕಾಲಮಿತಿಯ ಕಾರಣದಿಂದ ಈ ವಾದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿತು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿ ಕೆ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅರುಣ್ ಪಲ್ಲಿ ಅವರ ಪೀಠವು ಆಸ್ತಿಗೆ ಸಂಬಂಧಿಸಿದಂತೆ ಯಥಾಸ್ಥಿತಿ (Status Quo) ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದೆ. ಅಂದರೆ ಮುಂದಿನ ವಿಚಾರಣೆಯವರೆಗೆ ಭೂಮಿಯ ಪ್ರಸ್ತುತ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 18 ರಂದು ನಡೆಯಲಿದೆ. ಎರಡು ಕಡೆಯವರು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಕೋರ್ಟ್ ಸಲಹೆ ನೀಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports