Last Updated:
ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಟ್ರೆಂಡ್ ಸೃಷ್ಟಿಸಿ ಸುಮಾರು 1.5 ಮಿಲಿಯನ್ಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ನಾಯಿ ದುರಂತ ಅಂತ್ಯ ಕಂಡಿದೆ. ಮಾಲೀಕ ಕೊನೆಪಕ್ಷ ಆ ನಾಯಿಯ ಮೂಳೆಯಾದ್ರೂ ಕೊಡಿ ಎಂದು ಕಣ್ಣೀರಾಕಿದ್ದಾನೆ.
ಸೋಷಿಯಲ್ ಮೀಡಿಯಾ ಸ್ಟಾರ್ ನಾಯಿಯ (Social Media Star Dog) ದುರಂತ ಅಂತ್ಯ ಪ್ರಾಣಿಪ್ರಿಯರನ್ನು (Animal Lovers) ಬೆಚ್ಚಿಬೀಳಿಸಿದೆ. ಮಧ್ಯ ಚೀನಾದ (China) ಹೆನಾನ್ ಪ್ರಾಂತ್ಯದಲ್ಲಿ ನಡೆದ ಒಂದು ಘಟನೆ ಈಗ ಚೀನಾದಲ್ಲಿ ಸಾಕುಪ್ರಾಣಿಗಳ ಕಾನೂನು ರಕ್ಷಣೆಯ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಯಾಣದ ವಿಡಿಯೋಗಳಿಂದ ಪ್ರಸಿದ್ಧನಾದ ಗುವೊ ಎಂಬ ವ್ಯಕ್ತಿಯ 8 ವರ್ಷದ ಬಾರ್ಡರ್ ಕೋಲಿ ತಳಿ ನಾಯಿ ಚುಟೌನನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡಲಾಗಿದೆ.
ಈ ನಾಯಿ ಗುವೊ ಜೊತೆಗೆ ಹಿಮ ಪರ್ವತಗಳಿಂದ ಮರುಭೂಮಿವರೆಗೆ ಚೀನಾದ ಹಲವಾರು ಭಾಗಗಳಿಗೆ ಪ್ರಯಾಣ ಮಾಡಿತ್ತು. ಅದರ ಬುದ್ಧಿವಂತಿಕೆ, ಚುರುಕುತನ ಮತ್ತು ಮೃದು ಸ್ವಭಾವದಿಂದ ಅದು ಜನಪ್ರಿಯವಾಗಿತ್ತು. ಚೀನಾದ ಮುಖ್ಯ ಭೂಭಾಗದ ಸಾಮಾಜಿಕ ಮಾಧ್ಯಮಗಳಲ್ಲಿ ಈ ನಾಯಿಗೆ 1.5 ಮಿಲಿಯನ್ಗಿಂತ ಹೆಚ್ಚು ಅನುಯಾಯಿಗಳಿದ್ದರು. ಆದರೆ ಇದೀಗ ಇದು ದುರಂತ ಅಂತ್ಯಕಂಡಿದೆ.
2018ರಲ್ಲಿ, ಚುಟೌ ಕೇವಲ 3 ತಿಂಗಳಿದ್ದಾಗ, ಗುವೊ ಒಬ್ಬ ಬೀದಿ ವ್ಯಾಪಾರಿಯಿಂದ 2,000 ಯುವಾನ್ಗಿಂತ ಹೆಚ್ಚು ಮೊತ್ತ ನೀಡಿ ಈ ನಾಯಿಯನ್ನು ಖರೀದಿಸಿದ್ದರು. ಇತ್ತೀಚೆಗೆ ಗುವೊ ಜಾರ್ಜಿಯಾದಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಚುಟೌ ಅವರ ಹೆತ್ತವರ ಮನೆಯಲ್ಲಿ, ಅವರ ಕೃಷಿಭೂಮಿಯಲ್ಲಿ ಇರಿಸಲಾಗಿತ್ತು. ಮೇ 11 ರಂದು ಗುವೊ ಅವರ ತಂದೆ ಚುಟೌ ಹೊಲದಿಂದ ಕಾಣೆಯಾಗಿರುವುದನ್ನು ಗಮನಿಸಿದರು. ನಂತರ ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಅಪರಿಚಿತರು ಎಲೆಕ್ಟ್ರಿಕ್ ಬೈಕ್ನಲ್ಲಿ ನಾಯಿಯನ್ನು ಕರೆದೊಯ್ಯುತ್ತಿರುವುದು ಕಂಡುಬಂತು. ಈ ಸುದ್ದಿ ಕೇಳುತ್ತಿದ್ದಂತೆಯೇ ಗುವೊ ತಮ್ಮ ಪ್ರಯಾಣವನ್ನು ನಿಲ್ಲಿಸಿ ತಕ್ಷಣ ಚೀನಾಕ್ಕೆ ಮರಳಿ ಹುಡುಕಾಟ ಆರಂಭಿಸಿದರು.
ಮೇ 26 ರಂದು ಗುವೊ ನಾಯಿಯನ್ನು ಕದ್ದಿದ್ದಾರೆ ಎನ್ನಲಾದ ವ್ಯಕ್ತಿಯನ್ನು ಹುಡುಕಿ, ಚುಟೌನನ್ನು ಹಿಂತಿರುಗಿಸಲು 10,000 ಯುವಾನ್ ನೀಡಲು ಒಪ್ಪಿಕೊಂಡರು. ಆ ವ್ಯಕ್ತಿ ತಾನು ಚುಟೌ ದಾರಿತಪ್ಪಿದ ನಾಯಿಯೆಂದು ತಪ್ಪಾಗಿ ಭಾವಿಸಿ, ಅದನ್ನು ಮನೆಗೆ ಕರೆದೊಯ್ದೆ ಎಂದು ಹೇಳಿಕೊಂಡ. ಗುವೊ ಈ ವಿವರಣೆಯನ್ನು ನಂಬಲಿಲ್ಲ, ಏಕೆಂದರೆ ಚುಟೌ ಕಾಲರ್ ಮತ್ತು ಟ್ರ್ಯಾಕರ್ ಧರಿಸಿ, ತಮ್ಮ ಕುಟುಂಬದ ಹೊಲದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಎಂದು ಹೇಳಿದರು.
ಶೀಘ್ರದಲ್ಲೇ ಗುವೊ ಅವರಿಗೆ, ಆ ವ್ಯಕ್ತಿ ಚುಟೌನನ್ನು 180 ಯುವಾನ್ಗೆ ನಾಯಿ ಮಾಂಸದ ರೆಸ್ಟೋರೆಂಟ್ಗೆ ಮಾರಾಟಮಾಡಿದ್ದಾನೆ ಮತ್ತು ಆ ನಾಯಿಯನ್ನು ಅಲ್ಲಿ ಕೊಂದು ತಿಂದಿದ್ದಾರೆ ಎಂಬ ಮಾಹಿತಿ ದೊರಕಿತು. ಕಳ್ಳನೆಂದು ಹೇಳಲಾದ ವ್ಯಕ್ತಿ ಮತ್ತು ಅವರ ಕುಟುಂಬ ಕ್ಷಮೆಯಾಚನೆ ಮಾಡಲು ಸಿದ್ಧರಾಗಿರಲಿಲ್ಲ. ‘ನಾಯಿ ಸತ್ತಿದೆ, ಇಷ್ಟು ಮಾಡಿಬೇಡಿ. ನಾನು ಕಾನೂನನ್ನು ಉಲ್ಲಂಘಿಸಿಲ್ಲ’ ಎಂದು ಅವನು ಹೇಳಿದ್ದಾನೆಂದು ವರದಿಯಾಗಿದೆ. ಗುವೊ ನಂತರ ಆ ರೆಸ್ಟೋರೆಂಟ್ನ ಕೆಲಸಗಾರನನ್ನು ಭೇಟಿಯಾಗಿ, ಕನಿಷ್ಠ ಚುಟೌನ ಅವಶೇಷಗಳಾದರೂ ಕೊಡಿ ಎಂದು ಕೇಳಿದರು. ‘ಆ ಕೂದಲುಗಳನ್ನು ಬಹಳ ಹಿಂದೆಯೇ ಕಸದ ಬುಟ್ಟಿಗೆ ಎಸೆದಿದ್ದೇವೆ’ ಎಂದು ಆತ ಕಟುವಾಗಿ ಉತ್ತರಿಸಿದ ಎಂದು ತಿಳಿದುಬಂದಿದೆ.
ಇದರಿಂದ ನೊಂದ ಗುವೊ, ಪೊಲೀಸರಿಗೆ ದೂರು ನೀಡಿ, ಚುಟೌನ ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರು. ಈ ಪ್ರಕರಣವನ್ನು ಕ್ರಿಮಿನಲ್ ಕೇಸಾಗಿ ಪರಿಗಣಿಸಿ, ಕಳ್ಳತನದ ಆರೋಪ ಹೂಡಲಾಗುತ್ತದೆ ಎಂಬ ನಿರೀಕ್ಷೆಯಿತ್ತು. ಚೀನಾದ ಕಾನೂನು ಪ್ರಕಾರ, ಕದ್ದ ಆಸ್ತಿಯ ಮೌಲ್ಯ 2,000 ಯುವಾನ್ಗಿಂತ ಹೆಚ್ಚಿದ್ದರೆ ಮಾತ್ರ ಕಳ್ಳತನವನ್ನು ಕ್ರಿಮಿನಲ್ ಪ್ರಕರಣವಾಗಿ ನೋಡಬಹುದು. ಚುಟೌನ ಮೌಲ್ಯವನ್ನು ಅಧಿಕೃತವಾಗಿ ಸ್ವೀಕರಿಸಿದರೆ, ಶಂಕಿತನಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಸಾಧ್ಯ. ವಕೀಲರ ಪ್ರಕಾರ, ಗುವೊ ತಮ್ಮ ನೇರ ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ಕೋರಬಹುದು. ಆದರೆ ಚುಟೌ ಸೆಲೆಬ್ರಿಟಿ ನಾಯಿಯಾಗಿದ್ದ ಕಾರಣ ಅದರ ವಾಣಿಜ್ಯ ಮೌಲ್ಯವನ್ನು, ಹಾಗೆಯೇ ಗುವೊನ ಭಾವನಾತ್ಮಕ ನಷ್ಟವನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸುವುದು ಕಷ್ಟ.
ಚೀನಾದಲ್ಲಿ ಸಹವರ್ತಿ ಪ್ರಾಣಿಗಳ ರಕ್ಷಣೆಗೆ ವಿಶೇಷ ಕಾನೂನು ಇನ್ನೂ ಇಲ್ಲ. ಸಾಕುಪ್ರಾಣಿಗಳನ್ನು ಸಾಮಾನ್ಯವಾಗಿ ಆಸ್ತಿಯಂತೆ ಪರಿಗಣಿಸಲಾಗುತ್ತದೆ. ಇಂತಹ ವಿವಾದಗಳನ್ನು ಬಹುತೇಕ ನಾಗರಿಕ ಪರಿಹಾರಗಳ ಮೂಲಕ ಬಗೆಹರಿಸಲಾಗುತ್ತದೆ. ಈ ಪ್ರಕರಣವು ಆನ್ಲೈನ್ನಲ್ಲಿ ಜನರ ಕೋಪಕ್ಕೆ ಕಾರಣವಾಯಿತು. ‘ಚುಟೌನ ಹಳೆಯ ವೀಡಿಯೊಗಳನ್ನು ನೋಡಿದಾಗ ಅಳುವುದನ್ನು ನಿಲ್ಲಿಸಲಾಗಲಿಲ್ಲ. ಇಷ್ಟು ಚೈತನ್ಯದ ನಾಯಿಯ ಬದುಕು ಇಷ್ಟು ಕ್ರೂರಿಯಾಗಿ ಅಂತ್ಯವಾಗಬಾರಿತ್ತು. ಅದನ್ನು ಕದ್ದವರು, ಕೊಂದು ತಿಂದವರು ಖಂಡಿತ ಬೆಲೆ ತೀರಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Jun 05, 2026 12:54 PM IST













