Last Updated:
ಹರ್ಮನ್‌ಪ್ರೀತ್ ಕೌರ್ ಭಾರತ ಮಹಿಳಾ ತಂಡದ ನಾಯಕತ್ವದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ಮೂರೂ ಮಾದರಿಯ ಕ್ರಿಕೆಟ್‌ನ ನಾಯಕಿಯಾಗಿ ಮಂಧಾನರನ್ನ ಆಯ್ಕೆ ಮಾಡಿದೆ.
ಭಾರತೀಯ ಮಹಿಳಾ ಕ್ರಿಕೆಟ್ (Indian women’s cricket team) ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಅವರನ್ನು ಟೀಮ್ ಇಂಡಿಯಾದ ನೂತನ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರು ಮೂರೂ ಮಾದರಿಯ ಕ್ರಿಕೆಟ್‌ನ ನಾಯಕತ್ವದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ಈ ಮಹತ್ವದ ಪ್ರಕಟಣೆ ಹೊರಡಿಸಿದೆ. ಸಾಂಗ್ಲಿ ಮೂಲದ ಎಡಗೈ ಬ್ಯಾಟರ್ ಆಗಿರುವ ಸ್ಮೃತಿ ಮಂಧಾನ ಅವರು ಜಿಂಬಾಬ್ವೆ ವಿರುದ್ಧ ನಡೆಯಲಿರುವ ಮುಂಬರುವ ಟಿ20 ಸರಣಿಯ ಮೂಲಕ ಪೂರ್ಣಾವಧಿ ನಾಯಕಿಯಾಗಿ ತಮ್ಮ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವೆ ಮೂರು ಟಿ20 ಮತ್ತು ಮೂರು ಏಕದಿನ (ODI) ಪಂದ್ಯಗಳ ಸರಣಿಯು ರವರೆಗೆ ರಾಯ್‌ಪುರದಲ್ಲಿ ಜರುಗಲಿದೆ. ಸ್ಮೃತಿ ಮಂಧಾನ ಅವರಿಗೆ ನಾಯಕತ್ವದ ಅಪಾರ ಅನುಭವವಿದ್ದು, ಈ ಹಿಂದೆ ಹಲವು ಪಂದ್ಯಗಳಲ್ಲಿ ಹಂಗಾಮಿ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸಿ 2024 ಮತ್ತು 2026 ರಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಮುಡಿಸಿಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ. ಸದ್ಯ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿರುವ ಇವರು, ಟಿ20 ಮಾದರಿಯಲ್ಲೂ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ತನ್ನ ಅಧಿಕೃತ ಪ್ರಕಟಣೆಯಲ್ಲಿ, ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಹೊಸ ಯುಗದ ಆರಂಭವಾಗಿದ್ದು, ಕಳೆದ ಹಲವು ವರ್ಷಗಳಿಂದ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಮೃತಿ ಮಂಧಾನ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ.
2013 ರಿಂದ ಭಾರತ ತಂಡದ ಪ್ರಮುಖ ಸದಸ್ಯೆಯಾಗಿರುವ ಸ್ಮೃತಿ, ಇದುವರೆಗೆ ಭಾರತದ ಪರ 18 ಟಿ20 ಹಾಗೂ 4 ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಅನುಭವ ಹೊಂದಿದ್ದು, ಭಾರತ ಮಹಿಳಾ ಕ್ರಿಕೆಟ್‌ಗೆ ಪೂರ್ಣಾವಧಿ ನಾಯಕಿಯಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಂಧಾನ, ದೇಶವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ತಮಗೆ ಸಂದ ಅತ್ಯುನ್ನತ ಗೌರವವಾಗಿದೆ ಎಂದು ಹೇಳಿದ್ದಾರೆ. ತಮಗೆ ಬೆಂಬಲ ನೀಡಿದ ಬಿಸಿಸಿಐ, ಆಯ್ಕೆಗಾರರು ಹಾಗೂ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಇಷ್ಟು ವರ್ಷಗಳ ಕಾಲ ತಂಡವನ್ನು ಬದ್ಧತೆಯಿಂದ ಮುನ್ನಡೆಸಿದ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ನಾಯಕತ್ವದ ಜವಾಬ್ದಾರಿಯನ್ನು ಅರಿತುಕೊಂಡು, ಇಡೀ ತಂಡದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಭಾರತೀಯ ಕ್ರಿಕೆಟ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಸ್ಮೃತಿ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 120 ಪಂದ್ಯಗಳಿಂದ ಸುಮಾರು 48ರ ಸರಾಸರಿಯಲ್ಲಿ 5,411 ರನ್ ಬಾರಿಸಿದ್ದು, ಇದರಲ್ಲಿ ದಾಖಲೆಯ 14 ಶತಕಗಳು ಸೇರಿವೆ. ಟಿ20 ಕ್ರಿಕೆಟ್‌ನಲ್ಲಿ 179 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 4,867 ರನ್ ಸಿಡಿಸಿದ್ದು, 2 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಸ್ವರೂಪದಲ್ಲಿ ಅತಿ ಹೆಚ್ಚು ರನ್ಗಳಿಸಿರುವ ವಿಶ್ವದಾಖಲೆ ಮಂಧಾನ ಹೆಸರಿನಲ್ಲಿದೆ. ಇನ್ನು ಮಂಧಾನ ಆಡಿರುವ ಕೇವಲ 9 ಟೆಸ್ಟ್ ಪಂದ್ಯಗಳಿಂದ 52 ಕ್ಕೂ ಹೆಚ್ಚು ಸರಾಸರಿಯಲ್ಲಿ 788 ರನ್ ಗಳಿಸಿದ್ದು, 149 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ. ಭಾರತದ ಪರ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ.














